ADVERTISEMENT

ರಸ್ತೆ ಬದಿ ವ್ಯಾಪಾರ: ಬಗೆಹರಿಯದ ಬಿಕ್ಕಟ್ಟು

ಎಂ.ರವಿ
Published 27 ಏಪ್ರಿಲ್ 2012, 8:20 IST
Last Updated 27 ಏಪ್ರಿಲ್ 2012, 8:20 IST
ರಸ್ತೆ ಬದಿ ವ್ಯಾಪಾರ: ಬಗೆಹರಿಯದ ಬಿಕ್ಕಟ್ಟು
ರಸ್ತೆ ಬದಿ ವ್ಯಾಪಾರ: ಬಗೆಹರಿಯದ ಬಿಕ್ಕಟ್ಟು   

ಮೈಸೂರು: ಬೀದಿ ಬದಿ ವ್ಯಾಪಾರ ವಿವಾದ ಮತ್ತಷ್ಟು ಉಲ್ಬಣಗೊಂಡಿದೆ. ಏ.25 ರಿಂದ ನಿರ್ದಿಷ್ಟ ಸ್ಥಳಗಳಲ್ಲಿ ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದ್ದ ಪಾಲಿಕೆ ಯಾವುದೇ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ. ಇದರಿಂದ ಕೆರಳಿರುವ ರಸ್ತೆ ಬದಿ ವ್ಯಾಪಾರಿಗಳು ಗುರುವಾರದಿಂದ ಮತ್ತೆ ವ್ಯಾಪಾರ ನಡೆಸಲು ಮುಂದಾಗಿದ್ದಾರೆ.

ಸಾಂಕ್ರಾಮಿಕ ರೋಗಗಳು ಹರಡುತ್ತಿರುವ ಹಿನ್ನೆಲೆಯಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಬದಿ ವ್ಯಾಪಾರವನ್ನು ಸ್ಥಗಿತಗೊಳಿಸಿತ್ತು. ಇದರಿಂದ ಬೀದಿಗೆ ಬಿದ್ದ ವ್ಯಾಪಾರಿಗಳು ಪಾಲಿಕೆ ದಿಢೀರ್ ನಿರ್ಧಾರವನ್ನು ಖಂಡಿಸಿ ಬೀದಿಗಿಳಿದು ಹೋರಾಟ ಮಾಡಿದರು. ಕೊನೆಗೂ ವ್ಯಾಪಾರಿಗಳ ಹೋರಾಟಕ್ಕೆ ಮಣಿದ ಪಾಲಿಕೆ ನಗರದ ನಿರ್ದಿಷ್ಟ ಸ್ಥಳಗಳಲ್ಲಿ ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿತ್ತು.

ಪಾಲಿಕೆ ವತಿಯಿಂದ ಪ್ರತಿಯೊಬ್ಬ ವ್ಯಾಪಾರಿಗೂ ಅರ್ಜಿಗಳನ್ನು ವಿತರಿಸಲಾಗು ವುದು. ರೂ.10 ಶುಲ್ಕ ಪಾವತಿಸಿ ಅರ್ಜಿಗಳನ್ನು ಪಡೆದು ಏ.25 ರಂದು ಅರ್ಜಿಗಳನ್ನು ವ್ಯಾಪಾರಿಗಳು ಹಿಂದಿರುಗಿಸಬೇಕು. ಬಳಿಕ ಪರವಾನಗಿಗಳನ್ನು ನೀಡಿ ಏ.25 ರಂದೇ ನಗರದ ಕಲಾಮಂದಿರ ಮತ್ತು ಸಿಎಫ್‌ಟಿಆರ್‌ಐ ಬಳಿ ವ್ಯಾಪಾರ ಮಾಡಲು ಸ್ಥಳಾವಕಾಶ ಮಾಡಿಕೊಡು ವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಪಾಲಿಕೆ ಆಯುಕ್ತರು ತಿಳಿಸಿದ್ದರು.

ಆದರೆ ಪಾಲಿಕೆ ಭರವಸೆ ನೀಡಿದಂತೆ ಯಾವುದೂ ಆಗಲಿಲ್ಲ. ಏ.25 ಆದರೂ ಪಾಲಿಕೆಯು ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಲಿಲ್ಲ. ನಗರದಲ್ಲಿ ಸುಮಾರು 2 ಸಾವಿರ ರಸ್ತೆ ಬದಿ ವ್ಯಾಪಾರಿಗಳು ಇದ್ದಾರೆ. ಈಗಾಗಲೇ ವ್ಯಾಪಾರಿಗಳ ವೀಡಿಯೊ ಚಿತ್ರೀಕರಣ ಮಾಡಲಾಗಿದೆ. ಹೊಸದಾಗಿ ವ್ಯಾಪಾರ ಮಾಡಲು ಪರವಾನಗಿ ನೀಡಲಾಗುವುದಿಲ್ಲ.

ಹಳಬರಿಗೆ ಮಾತ್ರ ಅವಕಾಶವಿದೆ. ಪಾಲಿಕೆ 3 ಸಾವಿರ ಅರ್ಜಿಗಳನ್ನು ಮುದ್ರಿಸಿದ್ದು, ಇದುವರೆಗೆ 950 ಅರ್ಜಿಗಳು ಮಾತ್ರ ವಾಪಸ್ ಬಂದಿವೆ. ಎಲ್ಲ ಅರ್ಜಿಗಳು ಬಂದ ಕೂಡಲೇ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗುವುದು. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಪೈಪ್‌ಲೈನ್ ವ್ಯವಸ್ಥೆ ಮತ್ತು ಸ್ವಚ್ಛತೆ, ಕಸ ವಿಲೇವಾರಿಗೆ ಸಿದ್ಧತೆ ನಡೆದಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಅರ್ಜಿಗಳೇ ಬಂದಿಲ್ಲವಾದ ಕಾರಣ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವುದು ವಿಳಂಬ ಆಗುತ್ತಿದೆ ಎನ್ನುತ್ತಾರೆ ಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್.

ಕಾಯಲು ಸಾಧ್ಯವಿಲ್ಲ: ವ್ಯಾಪಾರ ನಿಂತು 25 ದಿನಗಳೇ ಕಳೆದಿವೆ. ವ್ಯಾಪಾರ ನಿಂತಿರುವುದರಿಂದ ಇದನ್ನೇ ನಂಬಿ ಜೀವನ ಸಾಗಿಸುತ್ತಿರುವ ವ್ಯಾಪಾರಿಗಳ ಪಾಡು ಹೇಳತೀರದಾಗಿದೆ. ಮಕ್ಕಳಿಗೆ ಶಾಲೆ ಆರಂಭ ವಾಗುತ್ತಿದೆ. ಶುಲ್ಕ ಕಟ್ಟಲು ಹಣವಿಲ್ಲ. ಸಂಸಾರ ನಡೆಸಲು ಸಾಧ್ಯವಾಗುತ್ತಿಲ್ಲ. ಸಾಲ ಕೊಡಲು ಯಾರೂ ಮುಂದಾಗುತ್ತಿಲ್ಲ. ಇದರಿಂದ ವ್ಯಾಪಾರಿಗಳ ಬಾಳ ಬಂಡಿ ಮುರಿದುಬಿದ್ದಿದೆ.

ಎಲ್ಲ ವ್ಯವಸ್ಥೆ ಮಾಡಿಕೊಂಡಿರುವುದಾಗಿ ಪಾಲಿಕೆ ಆಯುಕ್ತರು ಸುಳ್ಳು ಹೇಳುತ್ತಿದ್ದಾರೆ. ವಿನಾ ಕಾರಣ ವಿಳಂಬ ಮಾಡುತ್ತಿದ್ದಾರೆ. ಹಾಗಾಗಿ ಸ್ವಯಂಪ್ರೇರಿತವಾಗಿ ಗುರುವಾರದಿಂದ ವ್ಯಾಪಾರವನ್ನು ಆರಂಭಿಸಲಾಯಿತು. ವ್ಯಾಪಾರಕ್ಕೆ ಅನುವು ಮಾಡಿಕೊಡದ ಪಾಲಿಕೆಯು ಮತ್ತೆ ದಾಳಿ ಮಾಡಿ ವ್ಯಾಪಾರ ಪರಿಕರಗಳನ್ನು ವಶಪಡಿಸಿಕೊಂಡಿರುವುದು ಖಂಡನೀಯ ಎಂದು ಶ್ರೀಚಾಮುಂಡೇಶ್ವರಿ ಶ್ರಮಜೀವಿ ರಸ್ತೆ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಂಜುನಾಥ್ ದೊಡ್ಮನೆ ತಿಳಿಸಿದರು.

ವ್ಯಾಪಾರ: ಎಲ್ಲ ಸಿದ್ಧತೆ ನಡೆದಿದೆ

“ಪಾಲಿಕೆಗೆ ಇದುವರೆಗೆ 950 ಅರ್ಜಿಗಳು ಮಾತ್ರ ಬಂದಿವೆ. ಸುಮಾರು 2 ಸಾವಿರ ವ್ಯಾಪಾರಿಗಳು ಇದ್ದಾರೆ. ಅರ್ಜಿಗಳು ಬರುವುದು ತಡವಾಗುತ್ತಿರುವುದರಿಂದ ವ್ಯಾಪಾರಕ್ಕೆ ಅನುವು ಮಾಡಿಕೊಡುವುದು ವಿಳಂಬ ಆಗುತ್ತಿದೆ. ಆದರೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ”.

ಕೆ.ಎಸ್.ರಾಯ್ಕರ್ಆಯುಕ್ತರು, ಮಹಾನಗರಪಾಲಿಕೆ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.