ಮೈಸೂರು: ಶಾಸ್ತ್ರೀಯ ಕನ್ನಡ ಅಧ್ಯಯನ ಸಂಸ್ಥೆಯನ್ನು ಬೆಂಗಳೂರಿಗೆ ಸ್ಥಳಾಂತರಿಸದೇ ಮೈಸೂರಿನಲ್ಲಿಯೇ ಮುಂದುವರಿಸಬೇಕು ಎಂದು ಕನ್ನಡಪರ ಸಂಘಟನೆಗಳು ಮಂಗಳವಾರ ಒಕ್ಕೊರಲ ಆಗ್ರಹ ಮಾಡಿದವು.
ರಾಮಕೃಷ್ಣನಗರದ ನೃಪತುಂಗ ಶಾಲೆಯಲ್ಲಿ ನಡೆದ ಸಭೆಯಲ್ಲಿ ಕನ್ನಡಪರ ಹೋರಾಟಗಾರರು, ಸಾಹಿತಿಗಳು, ಚಿಂತಕರು ಈ ನಿರ್ಣಯ ಕೈಗೊಂಡರು. ಈ ಕುರಿತು ಸರ್ಕಾರವನ್ನು ಆಗ್ರಹಿಸಲು ನಿಯೋಗವೊಂದನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಹಾಜರಿದ್ದ ಭಾಷಾ ಶಾಸ್ತ್ರಜ್ಞ ಕಿಕ್ಕೇರಿ ನಾರಾಯಣ್, ‘ಶಾಸ್ತ್ರೀಯ ಕನ್ನಡ ಭಾಷಾ ಸಂಸ್ಥೆಯು ಕಾರ್ಯನಿರ್ವಹಿಸಲು ಮೈಸೂರು ಅತ್ಯಂತ ಪ್ರಶಸ್ತವಾದ ಸ್ಥಳವಾಗಿದೆ. ಇಲ್ಲಿಯ ಶೈಕ್ಷಣಿಕ, ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ ವಾತಾವರಣವು ಪೂರಕವಾಗಿದೆ. ಶಾಸ್ತ್ರೀಯ ಕನ್ನಡ ಸಂಶೋಧನೆ ಕೈಗೊಳ್ಳಲು ಹಲವು ಉತ್ತಮ ಅಂಶಗಳು ಇಲ್ಲಿವೆ. ಕೇಂದ್ರಕ್ಕೆ ಮಂಜೂರಾಗಿದ್ದ ಕೋಟಿಗಟ್ಟಲೆ ಹಣವು ಸರಿಯಾಗಿ ವಿನಿಯೋಗವಾಗದೇ ಮರಳಿ ಸರ್ಕಾರಕ್ಕೆ ಹೋಗಿದೆ’ ಎಂದು ಹೇಳಿದರು.
‘ಶಾಸ್ತ್ರೀಯ ಕನ್ನಡ ಅಧ್ಯಯನ ಸಂಸ್ಥೆಯನ್ನು ಯಾವುದೇ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರಿಸಬಾರದು. ಅದು ಸ್ವಾಯತ್ತ ಸಂಸ್ಥೆಯಾಗಿಯೇ ಇರಬೇಕು. ಇದೇ ವಿಷಯವನ್ನು ಇಟ್ಟುಕೊಂಡು ಸರ್ಕಾರವನ್ನು ಆಗ್ರಹಿಸಲು ಅಗತ್ಯ ಬಿದ್ದರೆ ನಿಯೋಗವನ್ನು ತೆಗೆದುಕೊಂಡು ಹೋಗಬೇಕು. ಸ್ಥಳೀಯ ಸಂಸದರ ನೇತೃತ್ವದಲ್ಲಿ ಈ ನಿಯೋಗವನ್ನು ರಚಿಸಬಹುದು. ಈ ಸಂಸ್ಥೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಆಡಳಿತದ ಪಾಲು ಎಷ್ಟಿದೆ ಎಂಬುದನ್ನು ತಿಳಿದುಕೊಂಡು ಸಂಬಂಧಪಟ್ಟ ಇಲಾಖೆಯ ಮೇಲೆ ಒತ್ತಡ ಹಾಕಬೇಕು.
ಯಾವುದೇ ವಿವಿಯ ಅಡಿಯಲ್ಲಿ ಈ ಸಂಸ್ಥೆಯು ಕಾರ್ಯ ನಿರ್ವಹಿಸಬಾರದು. ಏಕೆಂದರೆ ಇವತ್ತು ಬಹುತೇಕ ವಿಶ್ವವಿದ್ಯಾಲಯಗಳು ಜಾತಿ, ಸ್ವಜನಪಕ್ಷಪಾತಗಳ ಗೂಡುಗಳಾಗಿವೆ’ ಎಂದು ಹೋರಾಟಗಾರ ಪ. ಮಲ್ಲೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಇತಿಹಾಸ ಲೇಖಕ ಪ್ರೊ.ಪಿ.ವಿ. ನಂಜರಾಜ್ ಅರಸ್ ಮಾತನಾಡಿ, ‘ಕಳೆದ ಮೂರು ವರ್ಷಗಳಿಂದ ಸಂಸ್ಥೆಯು ಮೈಸೂರಿನಲ್ಲಿತ್ತು. ಆದರೆ, ನಾವು ಯಾರೂ ಅಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ಗಮನ ಹರಿಸಲೇ ಇಲ್ಲ. ಅದು ನಮ್ಮ ಪ್ರಮಾದ. ಈಗ ಅದು ಸ್ಥಳಾಂತರಗೊಳ್ಳುತ್ತಿರುವ ಸುದ್ದಿಯಿಂದ ನಾವು ಎಚ್ಚೆತ್ತುಕೊಂಡಿದ್ದೇವೆ. ಈ ರೀತಿಯಾಗಬಾರದು. ಮೂರು ವರ್ಷಗಳಲ್ಲಿ ಅದು ಮಾಡಿರುವ ಕೆಲಸಗಳ ಕುರಿತು ತಿಳಿಯಬೇಕು’ ಎಂದರು.
ಸಂಸ್ಕೃತಿ ಸುಬ್ರಹ್ಮಣ್ಯ, ಲಕ್ಷ್ಮೀನಾರಾಯಣ, ಪ್ರೊ.ಮುಜಾಫರ್ ಅಸ್ಸಾದಿ, ಪ್ರೊ. ಕಾಳೇಗೌಡ ನಾಗವಾರ, ಎಂ.ಬಿ. ವಿಶ್ವನಾಥ್, ಮಕ್ಕಳ ಸಮಿತಿಯ ಬಾಬುರಾಜ್, ಪತ್ರಕರ್ತ ಜಿ.ಪಿ. ಬಸವರಾಜು ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.