ADVERTISEMENT

ಹಾಜರಾಗದ ಅಧಿಕಾರಿಗಳಿಗೆ ನೊಟೀಸ್

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 7:20 IST
Last Updated 17 ಜೂನ್ 2011, 7:20 IST

ಮೈಸೂರು: ಪ್ರತೀ ತಿಂಗಳು 3ನೇ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯುವ ಫೋನ್ ಇನ್ ಹಾಗೂ ಕುಂದುಕೊರತೆ ಸಭೆಗೆ ಹಾಜರಾಗದ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ಜಾರಿ ಮಾಡುವಂತೆ ಜಿಲ್ಲಾಧಿಕಾರಿ ಪಿ.ಎನ್. ವಸ್ತ್ರದ್ ತಿಳಿಸಿದರು.

ಅವರು ಗುರುವಾರ ಜಿಲ್ಲಾಧಿಕಾ ರಿಗಳ ಕಚೇರಿಯ ಸಭಾಂಗಣದಲ್ಲಿ ಫೋನ್ ಇನ್ ಹಾಗೂ ಸಾರ್ವಜನಿಕ ಕುಂದುಕೊರತೆ ಸಭೆಗಳನ್ನು ನಡೆಸಿ ಮಾತನಾಡುತ್ತಿದ್ದರು.

ಈ ಸಭೆಗೆ ಬರುವಾಗ ಅಧಿಕಾರಿಗಳು ಹಿಂದಿನ ಸಭೆಯಲ್ಲಿ ಬಂದ ಪ್ರಶ್ನೆಗಳಿಗೆ ನೀಡಿರುವ ಉತ್ತರ, ಇಲಾಖೆಯ ವಿವರಗಳನ್ನು ಸಿದ್ಧಪಡಿಸಿ, ಅಧ್ಯಯನ ಮಾಡಿ ಬರಬೇಕು. ಅಧಿಕಾರಿಗಳು ಸಭೆಗಳಿಗೆ ಗೈರು ಹಾಜರಾಗುತ್ತಾರೆ. ಕೆಲವು ಅಧಿಕಾರಿಗಳು ಅವರ ಪರವಾಗಿ ಬೇರೆ ಅಧಿಕಾರಿಗಳನ್ನು ಕಳುಹಿಸುತ್ತಾರೆ.ಅವರಿಗೆ ಸಮಸ್ಯೆಗಳೇನೆಂಬುದೇ ಗೊತ್ತಿ ರುವುದಿಲ್ಲ. ಇದು ತಪ್ಪಬೇಕು ಎಂದು ತಿಳಿಸಿದರು.ಫೋನ್ ಇನ್ ಕಾರ್ಯಕ್ರಮದಲ್ಲಿ ಸುಮಾರು 18 ದೂರವಾಣಿ ಕರೆಗಳು ಸ್ವೀಕೃತವಾದವು.
 
ಜಿಲ್ಲಾಧಿಕಾರಿಗಳ ಕಚೇರಿ, ಯುವರಾಜ ಕಾಲೇಜು ರಸ್ತೆ, ಫೈರ್ ಬ್ರಿಗೇಡ್ ಬಳಿ ಸಾರ್ವಜನಿಕ ರಸ್ತೆ ಮುಚ್ಚಿರುವ ಬಗ್ಗೆ, ಪಿರಿಯಾಪಟ್ಟಣ ತಾಲ್ಲೂಕು ಕಿತ್ತೂರಿನಲ್ಲಿ ಹರಿಜನ ಸಮಸ್ಯೆ, ವರುಣಾ ಹೋಬಳಿಯ ಒತ್ತುವರಿ ಅಂಗಡಿ ತೆರವುಗೊಳಿಸಿ, ಆಲನಹಳ್ಳಿ ಬಡಾವಣೆ ರಸ್ತೆ ರಿಪೇರಿ, ಅನಧಿಕೃತ ಬುದ್ಧಿಮಾಂದ್ಯ ಮಕ್ಕಳ ಶಾಲೆ ಸ್ಥಳಾಂತರಿಸಿ, ಟಿ.ನರಸೀಪುರದಲ್ಲಿ ಪರ್ಮಿಟ್ ಇಲ್ಲದೆ ಖಾಸಗಿ ಬಸ್ ಓಡಾಡುತ್ತಿವೆ, ಮೈಸೂರು ವರ್ತುಲ ರಸ್ತೆಯಲ್ಲಿ ಸಮಸ್ಯೆ, ಉದ್ಯಾನವನ ಅಭಿವೃದ್ಧಿ ಪಡಿಸಿ, ಕರಿಮುದ್ದನಹಳ್ಳಿಯಲ್ಲಿ ರಸ್ತೆ ಮಧ್ಯೆ ಅಂಗಡಿ, ಅಕ್ರಮ ಸಾರಾಯಿ ಮಾರಾಟ, ನಂಜನಗೂಡಿನಲ್ಲಿ ಸರ್ಕಾರಿ ಶಾಲೆ ಪಕ್ಕ ಮದ್ಯದ ಅಂಗಡಿ ಇದೆ, ಟಿ.ನರಸೀಪುರದಲ್ಲಿ ಬ್ರಿಡ್ಜ್ ಪಕ್ಕ ಅಕ್ರಮ ಮರಳು ಸಾಗಣೆ, ಬನ್ನೂರಿ ನಲ್ಲಿ ರೈತಸಂತೆ ಸಮರ್ಪಕವಾಗಿಲ್ಲ, ನ್ಯಾಯಬೆಲೆ ಅಂಗಡಿ ಸರಿಪಡಿಸಿ ಮುಂತಾದ ದೂರುಗಳು ಕೇಳಿಬಂದವು. ನಂತರ ಸಾರ್ವಜನಿಕ ಕುಂದುಕೊರತೆ ವಿಚಾರಣೆ ನಡೆಯಿತು. 36 ಅರ್ಜಿಗಳು ಬಂದವು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಸತ್ಯವತಿ, ಹೆಚ್ಚುವರಿ ಜಿಲ್ಲಾಧಿಕಾರಿ ಜಾಹಿರ ನಸೀಮ್, ಮುಡಾ ಕಾರ್ಯದರ್ಶಿ ವಿದ್ಯಾಕುಮಾರಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.