ADVERTISEMENT

10,116 ರೈತರ ಖಾತೆಗೆ ಪರಿಹಾರಧನ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 15:53 IST
Last Updated 7 ಜುಲೈ 2020, 15:53 IST

ಮೈಸೂರು: ಕೋವಿಡ್-19ನಿಂದ ಸಂಕಷ್ಟಕ್ಕೆ ಒಳಗಾಗಿರುವ ಮುಸುಕಿನ ಜೋಳ ಬೆಳೆದಿದ್ದ 10,116 ರೈತರಿಗೆ ತಲಾ ₹ 5 ಸಾವಿರ ಆರ್ಥಿಕ ನೆರವನ್ನು ಈಗಾಗಲೇ ವರ್ಗಾವಣೆ ಮಾಡಲಾಗಿದೆ ಎಂದು ಕೃಷಿ ಇಲಾಖೆಯ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಎಂ.ಮಹಾಂತೇಶಪ್ಪ ತಿಳಿಸಿದ್ದಾರೆ.

2019-20ನೇ ಸಾಲಿನಲ್ಲಿ ಇ-ಆಡಳಿತ ವತಿಯಿಂದ ಕೈಗೊಳ್ಳಲಾದ ಬೆಳೆ ತಂತ್ರಾಂಶದಲ್ಲಿ ದಾಖಲಿಸಿರುವ ಮುಸುಕಿನ ಜೋಳ ಬೆಳೆದಿರುವ ರೈತರ ಪಟ್ಟಿಯನ್ನು ಈಗಾಗಲೇ ಗ್ರಾಮ ಪಂಚಾಯಿತಿಗಳಲ್ಲಿ ಪ್ರಕಟಿಸಲಾಗಿದೆ.

FRUITS ತಂತ್ರಾಂಶದಲ್ಲಿ ನೋಂದಣಿಯಾಗದ ರೈತರು ತಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ, ಪಹಣಿ, ಮೊಬೈಲ್ ಸಂಖ್ಯೆ ಮತ್ತು ಸಂಪೂರ್ಣ ವಿಳಾಸದ ದಾಖಲೆ ಸಲ್ಲಿಸಿ ನೋಂದಣಿ ಮಾಡಿಕೊಳ್ಳತಕ್ಕದ್ದು.

ADVERTISEMENT

ಮರಣ ಹೊಂದಿರುವ ಪ್ರಕರಣಗಳಲ್ಲಿ, ತಮ್ಮ ಹೆಸರಿನಲ್ಲಿ ಜಮೀನು ಇಲ್ಲದೆ ಪೂರ್ವಜರ ಹೆಸರಿನಲ್ಲಿ ಜಮೀನು ಇರುವ ರೈತರು ಗ್ರಾಮ ಲೆಕ್ಕಾಧಿಕಾರಿಯಿಂದ ವಾರಸುದಾರರ ಪ್ರಮಾಣ ಪತ್ರ ಪಡೆಯುವುದು ಮತ್ತು ಇತರೆ ಕುಟುಂಬದ ಸದಸ್ಯರಿಂದ ಒಪ್ಪಿಗೆ ಪತ್ರ/ನಿರಾಕ್ಷೇಪಣಾ ಪತ್ರ ಪಡೆದು ಮೇಲಿನ ದಾಖಲೆಗಳೊಂದಿಗೆ ನೋಂದಣಿ ಮಾಡಿಸಿಕೊಳ್ಳಬೇಕು.

ಫ್ರೂಟ್ಸ್‌ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡ ಜಂಟಿ ಖಾತೆದಾರರ ಪೈಕಿ ಕೇವಲ ಒಬ್ಬ ರೈತರಿಗೆ ಆರ್ಥಿಕ ನೆರವು ವರ್ಗಾವಣೆ ಮಾಡಲು ಅವಕಾಶವಿರುವುದರಿಂದ, ರೈತರು ಉಳಿದ ಖಾತೆದಾರರಿಂದ ಒಪ್ಪಿಗೆ ಪತ್ರವನ್ನು ನೋಟರಿಯವರಿಗೆ ದೃಢೀಕರಿಸಿ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಸಲ್ಲಿಸುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.