ADVERTISEMENT

ಮೈಸೂರು: ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜಯಂತಿ 29ಕ್ಕೆ

ಈ ಬಾರಿ ಆನ್‌ಲೈನ್‌ ಕಾರ್ಯಕ್ರಮ; ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 16:43 IST
Last Updated 26 ಆಗಸ್ಟ್ 2020, 16:43 IST
ಶಿವರಾತ್ರಿ ರಾಜೇಂದ್ರ ಸ್ವಾಮೀಜಿ
ಶಿವರಾತ್ರಿ ರಾಜೇಂದ್ರ ಸ್ವಾಮೀಜಿ   

ಮೈಸೂರು: ಸುತ್ತೂರು ಮಠದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 105ನೇ ಜಯಂತಿ ಅಂಗವಾಗಿ ಆ.29ರಂದು ಆನ್‌ಲೈನ್‌ ವೇದಿಕೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಜಯಂತಿ ಅಂಗವಾಗಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ದಿನವಿಡೀ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಬೆಳಿಗ್ಗೆ 9ಕ್ಕೆ ಚಾಲನೆ ಸಿಗಲಿದೆ ಎಂದು ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯದರ್ಶಿ ಮಂಜುನಾಥ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುತ್ತೂರು ಮಠದಲ್ಲಿ ಶಿವಯೋಗಿಗಳ ಕರ್ತೃಗದ್ದುಗೆ, ಮಂತ್ರ ಮಹರ್ಷಿಗಳ ಗದ್ದುಗೆಗೆ ಆರತಿ ಮಾಡಿದ ನಂತರ ರಾಜೇಂದ್ರ ಸ್ವಾಮೀಜಿ ಗದ್ದುಗೆಯಲ್ಲಿ ಅಷ್ಟೋತ್ತರ, ಆರತಿ ಹಾಗೂ ಮಹಾಮಂಗಳಾರತಿ ನೆರವೇರಲಿದೆ. ಮೈಸೂರಿನ ಶಾಖಾ ಮಠದಲ್ಲಿ ಪುತ್ಥಳಿಗೆ ಪೂಜೆ, ಆರತಿ, ಪುಷ್ಪಾಂಜಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ADVERTISEMENT

ಪ್ರಧಾನ ಕಾರ್ಯಕ್ರಮವನ್ನು ಬೆಳಿಗ್ಗೆ 10.30ಕ್ಕೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಕಾರ್ಯಕ್ರಮ ಉದ್ಘಾಟಿಸುವರು. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ‘ಸುತ್ತೂರು ಶ್ರೀಮಠ– ಗುರುಪರಂಪರೆ’ ಮತ್ತು ‘ದಿ ಹೆರಿಟೇಜ್ ಆಫ್‌ ಶ್ರೀ ಸುತ್ತೂರ್‌ ಮಠ’ ಅನಿಮೇಷನ್‌ ಚಿತ್ರಗಳನ್ನು ಬಿಡುಗಡೆ ಮಾಡಲಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿವಿಧ ಕೃತಿಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಂವಾದ ಕಾರ್ಯಕ್ರಮ: ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಮಾತನಾಡಿ, ‘ಸಂಜೆ 4ಕ್ಕೆ ‘ಕೋವಿಡ್‌– 19 ಸವಾಲು ಹಾಗೂ ಸ್ಥೈರ್ಯದ ನಿರ್ವಹಣೆ’ ವಿಷಯದಲ್ಲಿ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಗವರ್ನರ್ ಮನೋಜ್‌ ಸಿನ್ಹಾ ಉದ್ಘಾಟಿಸಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ, ನಟ ದರ್ಶನ್ ಪಾಲ್ಗೊಳ್ಳಲಿದ್ದಾರೆ’ ಎಂದು ಹೇಳಿದರು.

ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ, ‘ದಿ ಹೆರಿಟೇಜ್ ಆಫ್‌ ಶ್ರೀ ಸುತ್ತೂರ್‌ ಮಠ’ ಅನಿಮೇಷನ್‌ ಚಿತ್ರದ ನಿರ್ದೇಶಕ ಅಬ್ದುಲ್ ಕರೀಂ, ಡಾ.ಪ್ರಶಾಂತ್‌ ಸುದ್ದಿಗೋಷ್ಠಿಯಲ್ಲಿದ್ದರು.

ಕಾರ್ಯಕ್ರಮವನ್ನು https://www.facebook.com/JSSMVP/, https://www.youtube.com/c/JSSMahavidyapeethaonline ಅಥವಾ www.jssonline.org. ಮೂಲಕ ವೀಕ್ಷಿಸಬಹುದು.

ರಸಪ್ರಶ್ನೆ ಕಾರ್ಯಕ್ರಮ

ಆ.29ರಂದು ಸಂಜೆ 6ಕ್ಕೆ ‘ಸುತ್ತೂರು ಮಠದ ಗುರುಪರಂಪರೆ’ ಮತ್ತು 7ಕ್ಕೆ ‘ದಿ ಹೆರಿಟೇಜ್ ಆಫ್‌ ಶ್ರೀ ಸುತ್ತೂರ್‌ ಮಠ’ ಅನಿಮೇಷನ್‌ ಚಿತ್ರಗಳ ಪ್ರಸಾರ ಇರಲಿದೆ. ಪ್ರತಿ ಪ್ರಸಾರದ ಬಳಿಕ ಆನ್‌ಲೈನ್‌ ಮೂಲಕ ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದೆ. ಮೊದಲ ಸ್ಥಾನ ಪಡೆಯುವವರಿಗೆ ₹5 ಸಾವಿರ ನಗದು ಬಹುಮಾನ ಲಭಿಸಲಿದೆ.

ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಯಸುವವರು ಆ.29ರಂದು ಸಂಜೆ 6ರ ಒಳಗಾಗಿ www.jssonline.org ಅಥವಾ www.rajendraswamiji.in ನಲ್ಲಿ ಹೆಸರು ನೋಂದಾಯಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.