ADVERTISEMENT

1,267 ಪೊಲೀಸರ ನಿಯೋಜನೆ

5 ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನಕ್ಕೆ ಬಿಗಿ ಬಂದೋಬಸ್ತ್‌

​ಪ್ರಜಾವಾಣಿ ವಾರ್ತೆ
Published 11 ಮೇ 2018, 6:50 IST
Last Updated 11 ಮೇ 2018, 6:50 IST

ಮೈಸೂರು: ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ಐದು ಕ್ಷೇತ್ರಗಳ 935 ಮತಗಟ್ಟೆಗಳಿಗೆ ಭದ್ರತೆ ಒದಗಿಸಲು 1,267 ಪೊಲೀಸರನ್ನು ನಿಯೋಜಿಸಲಾಗಿದೆ.

‘ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ, ನರಸಿಂಹರಾಜ, ವರುಣಾ ಕ್ಷೇತ್ರಗಳು ಒಳಪಡುತ್ತವೆ. ಈ ಕ್ಷೇತ್ರಗಳಲ್ಲಿ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗದ ರೀತಿಯಲ್ಲಿ ಶಾಂತಯುತ ಮತದಾನಕ್ಕೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಡಾ.ಸುಬ್ರಮಣ್ಯೇಶ್ವರರಾವ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.‌

ಪ್ರತಿ ಉಪ ವಿಭಾಗಕ್ಕೆ ಒಬ್ಬರಂತೆ 3 ಡಿಸಿಪಿಗಳನ್ನು ನಿಯೋಜಿಸಲಾಗಿದೆ. 250 ಸೂಕ್ಷ್ಮ ಮತಗಟ್ಟೆಗಳಿದ್ದು, ಪ್ರತಿ ಕೇಂದ್ರಲ್ಲೂ ಒಬ್ಬ ಮುಖ್ಯ ಕಾನ್‌ಸ್ಟೆಬಲ್‌, ಸಾಮಾನ್ಯ ಮತಗಟ್ಟೆಗಳಲ್ಲಿ ಕಾನ್‌ಸ್ಟೆಬಲ್‌ ಇರಲಿದ್ದಾರೆ.

ADVERTISEMENT

ಪ್ರತಿ 20 ಮತಗಟ್ಟೆಗೆ ಒಬ್ಬರು ಸಬ್‌ ಇನ್‌ಸ್ಪೆಕ್ಟರ್‌ ಮಟ್ಟದ ಅಧಿಕಾರಿಯನ್ನು ಒಳಗೊಂಡ 50 ಸೆಕ್ಟರ್‌ ಮೊಬೈಲ್‌ಗಳನ್ನು ರಚಿಸಲಾಗಿದೆ.‌

ಕೇಂದ್ರ ಮೀಸಲು ಪಡೆಯ 10 ತುಕಡಿಗಳು ನಗರದಲ್ಲಿವೆ. ಆರು ತುಕಡಿಗಳನ್ನು ಸೂಕ್ಷ್ಮ ಮತ್ತು ಕ್ಲಸ್ಟರ್‌ ಬೂತ್‌ಗಳಿಗೆ ನಿಯೋಜಿಸಲಾಗಿದೆ. 2 ತುಕಡಿಗಳು ಭದ್ರತಾ ಕೊಠಡಿಗೆ ಭದ್ರತೆ ನೀಡಲಿವೆ.

2 ತುಕಡಿಗಳನ್ನು ಫ್ಲೈಯಿಂಗ್‌ ಸ್ಕ್ವಾಡ್‌, ಸ್ಟಾಟಿಕ್‌ ಸರ್ವೆಲನ್ಸ್‌ ತಂಡಕ್ಕೆ ನಿಯೋಜಿಸಲಾಗಿದೆ. ಆರು ಕ್ಷಿಪ್ರ ಪಡೆ ರಚಿಸಲಾಗಿದೆ. ಇದಲ್ಲದೇ, ಕೆಎಸ್‌ಆರ್‌ಪಿ 6 ತುಕಡಿ, ಸಿಎಆರ್‌–12 ತುಕಡಿ, 20 ಮೌಂಟೆಡ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಮಸ್ಟರಿಂಗ್‌ ಮತ್ತು ಡಿಮಸ್ಟರಿಂಗ್‌ ಸ್ಥಳಗಳಿಗೂ ಕೇಂದ್ರ ಸಶಸ್ತ್ರ ಮೀಸಲು ಪಡೆಗಳ ಜೊತೆ ಸ್ಥಳೀಯ ಪೊಲೀಸರು ಭದ್ರತೆ ಒದಗಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಭದ್ರತೆ ಒದಗಿಸಲಿರುವ ಪೊಲೀಸ್‌ ಸಿಬ್ಬಂದಿ

ಡಿಸಿಪಿ: 05

ಎಸಿಪಿ: 07

ಇನ್‌ಸ್ಟೆಕ್ಟರ್‌: 15

ಸಬ್‌ ಇನ್‌ಸ್ಟೆಕ್ಟರ್‌: 10

ಸಹಾಯ ಸಬ್‌ ಇನ್‌ಸ್ಟೆಕ್ಟರ್‌: 102

ಹೆಡ್‌ ಕಾನ್‌ಸ್ಟೆಬಲ್‌: 274

ಕಾನ್‌ಸ್ಟೆಬಲ್‌: 498

ಗೃಹರಕ್ಷಕ ದಳ: 357

ಭದ್ರತೆಗೆ 5 ಸಾವಿರ ಪೊಲೀಸರು

ಜಿಲ್ಲೆಯಲ್ಲಿ ಭದ್ರತೆಗಾಗಿ ಒಟ್ಟು 5 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಬೇರೆ ಬೇರೆ ಜಿಲ್ಲೆಗಳಿಂದಲೂ ಪೊಲೀಸ್‌ ಸಿಬ್ಬಂದಿ ಕರೆಸಲಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ 382 ಸೂಕ್ಷ್ಮ ಮತಗಟ್ಟೆಗಳಿವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಮಿತ್‌ ಸಿಂಗ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.