ADVERTISEMENT

ಚಳಿಯಲ್ಲೂ ಕಾವೇರಿದ ‘ಹಳ್ಳಿ ಅಖಾಡ’

ಮೊದಲ ಹಂತದಲ್ಲಿ 148 ಗ್ರಾ.ಪಂ ಚುನಾವಣೆ: ನಾಮಪತ್ರ ಸಲ್ಲಿಕೆಗೆ ದಿನಗಣನೆ

ಡಿ.ಬಿ, ನಾಗರಾಜ
Published 5 ಡಿಸೆಂಬರ್ 2020, 3:00 IST
Last Updated 5 ಡಿಸೆಂಬರ್ 2020, 3:00 IST

ಮೈಸೂರು: ಮೈ ಕೊರೆಯುವ ಚಳಿಯಲ್ಲೂ ಗ್ರಾಮ ಪಂಚಾಯಿತಿ ಚುನಾವಣೆಯ ಕಾವು ಜಿಲ್ಲೆಯ ಗ್ರಾಮೀಣ ಪ‍್ರದೇಶದಲ್ಲಿ ಬಿಸಿಯೇರಿದೆ.

ಹಳ್ಳಿ ಅಖಾಡದಲ್ಲಿ ಇದೀಗ ಚುನಾವಣೆಯದ್ದೇ ಮಾತು. ಎತ್ತ ಹೋದರೂ ‘ಗ್ರಾಮ ಗದ್ದುಗೆ’ ಏರುವ ಕಸರತ್ತಿನ ಚಿತ್ರಣವೇ ಕಂಡು ಬರುತ್ತಿದೆ.

ಚುನಾವಣೆ ಘೋಷಣೆಯಾದ ಬೆನ್ನಿಗೆ ಸ್ಪರ್ಧಾಕಾಂಕ್ಷಿಗಳ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಬ್ಲಾಕ್‌ವಾರು ಆಯಾ ಮೀಸಲಾತಿ ಯನ್ವಯ ಒಂದೊಂದು ವಾರ್ಡ್‌ನಿಂದ ಇಬ್ಬರು–ಮೂವರು ಸ್ಪರ್ಧಿಸಬೇಕಿರು ವುದರಿಂದ ಅಭ್ಯರ್ಥಿಗಳ ಕೂಟವೂ ರಚನೆಗೊಳ್ಳುತ್ತಿದೆ. ಕೆಲವರು ಸ್ವತಂತ್ರವಾಗಿ ಸ್ಪರ್ಧಿಸಿ ಗೆಲುವಿನ ಕಾರ್ಯತಂತ್ರ ರೂಪಿಸಿಕೊಳ್ಳುತ್ತಿದ್ದಾರೆ.

ADVERTISEMENT

ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಸೇರಿದಂತೆ ಇನ್ನಿತರೆ ಪಕ್ಷಗಳು ತಮ್ಮ ಯುವ ಕಾರ್ಯಕರ್ತರನ್ನು, ಬೆಂಬಲಿಗರನ್ನು ಕಣಕ್ಕಿಳಿಸಲು ಒಂದೆಡೆ ಸಜ್ಜಾದರೆ, ಮತ್ತೊಂದೆಡೆ ಕೋವಿಡ್‌ನಿಂದ ಊರಿಗೆ ಮರಳಿದ್ದ ಯುವ ಸಮೂಹವೂ ಹುಟ್ಟೂರಲ್ಲೇ ನೆಲೆ ಕಂಡುಕೊಳ್ಳಲು ಗ್ರಾಮ ಪಂಚಾಯಿತಿ ಚುನಾವಣೆಯನ್ನು ವೇದಿಕೆಯನ್ನಾಗಿಸಿ ಕೊಳ್ಳುವ ಕಸರತ್ತು ನಡೆಸಿದೆ.

ಅಭ್ಯರ್ಥಿಗಳಾಗಲು ಈಗಾಗಲೇ ನಿರ್ಧರಿಸಿರುವವರು ಮತದಾರರ ಮನೆ ಬಾಗಿಲಿಗೆ ಎಡತಾಕುತ್ತಿದ್ದಾರೆ. ಹಿರಿಯರನ್ನು ಭೇಟಿಯಾಗಿ ಆಶೀರ್ವಾದದ ನೆಪದಲ್ಲಿ ಚುನಾವಣೆಗೆ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿ, ಮತ ಭದ್ರಪಡಿಸಿಕೊಳ್ಳುವ ಯತ್ನವನ್ನೂ ನಡೆಸಿದ್ದಾರೆ. ನಗರ/ಪಟ್ಟಣಗಳಲ್ಲಿ ವಾಸವಿರುವ ತಮ್ಮ ನೆಂಟರು, ಸ್ನೇಹಿತರು, ಒಡನಾಡಿಗಳನ್ನು ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಳಿಸುವ ಕಸರತ್ತಿನಲ್ಲಿ ಕೆಲವರು ತಲ್ಲೀನರಾಗಿದ್ದಾರೆ.

ಸ್ಪರ್ಧಾಕಾಂಕ್ಷಿಗಳು ತಮ್ಮ ಗೆಳೆಯರ ಗುಂಪನ್ನು ಹೆಚ್ಚಿಸಿಕೊಳ್ಳುವ ಕಸರತ್ತನ್ನು ಮತ್ತಷ್ಟು ಬಿರುಸುಗೊಳಿಸಿದ್ದಾರೆ. ತೋಟ– ಜಮೀನುಗಳಲ್ಲಿ ತಡರಾತ್ರಿ ವರೆಗೂ ಚುನಾವಣಾ ಚರ್ಚೆ ನಡೆಸಿದ್ದಾರೆ. ಅಲ್ಲಲ್ಲೇ ಗುಂಡು–ತುಂಡಿನ ಸಮಾರಾಧಾನೆಯೂ ಶುರುವಾಗಿದೆ. ಎದುರಾಳಿಯಾಗುವ ಅಭ್ಯರ್ಥಿಯ ಮನವೊಲಿಕೆಯ ಕಸರತ್ತು ನಡೆದಿದೆ. ಚುನಾವಣಾ ತಯಾರಿ, ಸ್ಪರ್ಧೆಯ ಪೈಪೋಟಿ ಇದೀಗ ಗ್ರಾಮೀಣ ಪ್ರದೇಶದ ಎಲ್ಲೆಡೆ ಗೋಚರಿಸುತ್ತಿದೆ.

ಡಿ.7ರಿಂದ ನಾಮಪತ್ರ ಸಲ್ಲಿಕೆ

ಜಿಲ್ಲೆಯ ಐದು ತಾಲ್ಲೂಕುಗಳ 148 ಗ್ರಾಮ ಪಂಚಾಯಿತಿಗಳಲ್ಲಿ ಡಿ.7ರಿಂದ ಮೊದಲ ಹಂತದ ಚುನಾವಣಾ ಪ್ರಕ್ರಿಯೆ ಶುರುವಾಗಲಿವೆ. ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಡಿ.7ರಂದು ಚುನಾವಣಾ ಅಧಿಸೂಚನೆ ಪ್ರಕಟಿಸಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆಯೂ ಆರಂಭವಾಗಲಿದೆ.

ಹುಣಸೂರು ತಾಲ್ಲೂಕಿನ 41, ಕೆ.ಆರ್.ನಗರ ಹಾಗೂ ಪಿರಿಯಾಪಟ್ಟಣ ತಾಲ್ಲೂಕಿನ ತಲಾ 34, ಎಚ್‌.ಡಿ.ಕೋಟೆ ತಾಲ್ಲೂಕಿನ 26, ಸರಗೂರು ತಾಲ್ಲೂಕಿನ 13 ಗ್ರಾಮ ಪಂಚಾಯಿತಿಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಈ ತಾಲ್ಲೂಕುಗಳಲ್ಲಿ ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ನಾಮಪತ್ರ ಸಲ್ಲಿಕೆ ಆರಂಭಕ್ಕೆ ಒಂದು ದಿನವಷ್ಟೇ ಬಾಕಿ ಉಳಿದಿದೆ.

ಎರಡನೇ ಹಂತದಲ್ಲಿ ಮೈಸೂರು ತಾಲ್ಲೂಕಿನ 23, ನಂಜನಗೂಡು ತಾಲ್ಲೂಕಿನ 43, ತಿ.ನರಸೀಪುರ ತಾಲ್ಲೂಕಿನ 36 ಗ್ರಾ.ಪಂ.ಗಳಿಗೆ ಚುನಾವಣೆ ನಡೆಯಲಿದೆ. ಇಲ್ಲಿ ಡಿ.11ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.