ADVERTISEMENT

ರಾಜ್ಯದಾದ್ಯಂತ 19 ಹೊಸ ವಸತಿ ಯೋಜನೆ: ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 21:39 IST
Last Updated 13 ನವೆಂಬರ್ 2020, 21:39 IST
ವಿ.ಸೋಮಣ್ಣ
ವಿ.ಸೋಮಣ್ಣ   

ಮೈಸೂರು: ರಾಜ್ಯದಾದ್ಯಂತ 2,736 ಎಕರೆ ಪ್ರದೇಶದಲ್ಲಿ 19 ಹೊಸ ವಸತಿ ಯೋಜನೆ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಶುಕ್ರವಾರ ಇಲ್ಲಿ ಹೇಳಿದರು.

₹ 1,188 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, 41,040 ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗುವುದು. ಇದಲ್ಲದೆ, 357 ಎಕರೆ ಪ್ರದೇಶದಲ್ಲಿ ₹ 159 ಕೋಟಿ ಮೊತ್ತದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಎಂಟು ವಸತಿ ಯೋಜನೆಗಳು ಟೆಂಡರ್‌ ಪ್ರಕ್ರಿಯೆಯಲ್ಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದಾದ್ಯಂತ 2,015 ಎಕರೆ ಪ್ರದೇಶದಲ್ಲಿ ₹894 ಕೋಟಿ ವೆಚ್ಚದ 16 ವಸತಿ ಯೋಜನೆಗಳು ಪ್ರಗತಿಯಲ್ಲಿವೆ. ಅವುಗಳಿಂದ 25,732 ನಿವೇಶನಗಳು ಮತ್ತು 70 ಮನೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಬೆಂಗಳೂರಿನ ಜಿಗಣಿ ಹೋಬಳಿಯಲ್ಲಿ (ಸೂರ್ಯನಗರ 4ನೇ ಹಂತ) 1,938 ಎಕರೆಯಲ್ಲಿ ₹ 3,455 ಕೋಟಿ ಮೊತ್ತದಲ್ಲಿ ಅತ್ಯಾಧುನಿಕ ಮೂಲಸೌಕರ್ಯವುಳ್ಳ 30 ಸಾವಿರ ನಿವೇಶನಗಳ ಪ್ರಧಾನಮಂತ್ರಿ ಟೌನ್‌ಶಿಪ್‌ ನಿರ್ಮಿಸಲು ಕ್ರಮ ವಹಿಸಲಾಗಿದೆ ಎಂದರು.

ಈಗಿನ ಸರ್ಕಾರದ ಅವಧಿಯಲ್ಲಿ ಇದುವರೆಗೆ ವಿವಿಧ ಯೋಜನೆಗಳಡಿ 1,134 ನಿವೇಶನಗಳು, 380 ಮನೆಗಳು, 16 ಸಿ.ಎ ನಿವೇಶನಗಳು ಮತ್ತು ಆರು ವಾಣಿಜ್ಯ ನಿವೇಶನಗಳು ಸೇರಿ ಒಟ್ಟು 1,536 ಸ್ವತ್ತುಗಳನ್ನು ಹಂಚಿಕೆ ಮಾಡಲಾಗಿದ್ದು, ₹ 400 ಕೋಟಿ ಸಂಗ್ರಹಿಸಲಾಗಿದೆ ಎಂದು ವಿವರಿಸಿದರು.

ಶೇ 50 ರಿಯಾಯಿತಿ ಬೆಲೆಯಲ್ಲಿ ನಿವೇಶನ

ಅಂಗವಿಕಲರು ಮತ್ತು ವಿಧವೆಯರಿಗೆ ಶೇ 50 ರಷ್ಟು ರಿಯಾಯಿತಿ ದರದಲ್ಲಿ ನಿವೇಶನ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಬಡವರಿಗಾಗಿ ತಲಾ 20 ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಈ ಯೋಜನೆಯಡಿ 1.62 ಲಕ್ಷ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.