
ಮೈಸೂರು: ‘ಗೀತಾ ಪ್ರತಿಭಾ ಪ್ರದರ್ಶನ ಕಾರ್ಯಕ್ರಮದ ಮೂಲಕ ಭಗವದ್ಗೀತೆಯು ದೇಶ ವಿದೇಶಗಳಲ್ಲಿ ಮನೆ ಮನಗಳನ್ನು ತಲುಪುತ್ತಿದೆ’ ಎಂದು ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಶ್ಲಾಘಿಸಿದರು.
ಇಲ್ಲಿನ ಅವಧೂತ ದತ್ತಪೀಠದ ನಾದಮಂಟಪದಲ್ಲಿ ಭಾನುವಾರ ನಡೆದ ಗೀತಾ ಮೈತ್ರಿ ಮಿಲನ ಕರ್ನಾಟಕ 2.0 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹತ್ತು ವರ್ಷಗಳಿಂದ ಅಮೆರಿಕದಲ್ಲಿ ಗೀತಾ ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಕಾರ್ಯಕ್ರಮವನ್ನು ವೀಕ್ಷಿಸಲು ಜನರು ಕಿಕ್ಕಿರಿದು ತುಂಬಿರುತ್ತಾರೆ. ಅಲ್ಲಿನ ಮಕ್ಕಳು ಭಗವದ್ಗೀತೆ ಕಂಠಪಾಠ ಮಾಡಿರುವ ರೀತಿ ಅದ್ಭುತ, ಏನನ್ನೂ ಪ್ರಶ್ನಿಸಿದರೂ ಲೀಲಾಜಾಲವಾಗಿ ಉತ್ತರಿಸುತ್ತಾರೆ’ ಎಂದು ಶ್ಲಾಘಿಸಿದರು.
‘ಅಮೆರಿಕವಷ್ಟೇ ಅಲ್ಲದೆ ಯುರೋಪ್, ದುಬೈ, ಕೆನಡಾ ಮತ್ತು ವೆಸ್ಟ್‌ಇಂಡೀಸ್ ಜನರು ಕೂಡ ಶ್ರದ್ಧೆಯಿಂದ ಪಾಲ್ಗೊಳ್ಳುತ್ತಿದ್ದಾರೆ. ಅವರು ಭಗವದ್ಗೀತೆ ಕಲಿಯುವ ಪರಿ, ಭಕ್ತಿ ಮೆಚ್ಚುವಂತದ್ದು. ಗೋವಿಂದ್ ಗಿರಿ ಜೀ ಪರಿವಾರದ ಶ್ರದ್ಧೆ ಕಾರ್ಯಕ್ರಮದ ಯಶಸ್ಸಿಗೆ ಕಾರಣ’ ಎಂದು ಸ್ಮರಿಸಿದರು.
‘ಸಾಮಾನ್ಯವಾಗಿ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಮುಳುಗಿರುವ ಅಮೆರಿಕದ ಮಕ್ಕಳು, ನನ್ನ ಭಾಷೆ ಭಿನ್ನವಾದರೂ ಗೀತೆಯನ್ನು ಪಠಿಸುವಂತೆ ಹೇಳಿದ್ದನ್ನು ಶ್ರದ್ಧೆಯಿಂದ ಮಾಡುತ್ತಾರೆ. ಕಂಠಪಾಠ ಒಪ್ಪಿಸುತ್ತಾರೆ. ಚಿಕ್ಕದಾಗಿ ಆರಂಭವಾದ ಅಭಿಯಾನ ಈಗ ಬೃಹದಾಕಾರವಾಗಿ ಬೆಳೆದಿದೆ. ದೊಡ್ಡ ಕ್ರೀಡಾಂಗಣಗಳಲ್ಲಿ 40ರಿಂದ 50ಸಾವಿರ ಜನರು ಗೀತಾ ಪಾರಾಯಣ ಆಲಿಸುತ್ತಾರೆ. ವಿದೇಶದಲ್ಲೂ ‘ಮನೆ ಮನೆಯಲ್ಲಿ ಗೀತೆ’ ಸಂಕಲ್ಪ ಸಾಕಾರವಾಗುತ್ತಿದೆ’ ಎಂದರು.
ಅಭಿಯಾನದ ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷ ಆಶು ಗೋಯಲ್, ರಾಷ್ಟ್ರೀಯ ಉಪಾಧ್ಯಕ್ಷ ಹರಿ ನಾರಾಯಣ್ ವ್ಯಾಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.