ADVERTISEMENT

ಕೆ.ಆರ್.ನಗರ: ವಿಶೇಷ ಯುವತಿಗೆ ಬೇಕು ನೆರವಿನ ಹಸ್ತ

ಕಜಕಿಸ್ತಾನ್‌ನಲ್ಲಿ ಪ್ಯಾರಾವಾಲಿ ಸಿಟ್ಟಿಂಗ್ ವಾಲಿಬಾಲ್ ಸ್ಪರ್ಧೆಗೆ ಕೆ.ಎಸ್‌.ಶಿಲ್ಪಾ ಆಯ್ಕೆ

ಪಂಡಿತ್ ನಾಟಿಕರ್
Published 5 ಮಾರ್ಚ್ 2023, 4:45 IST
Last Updated 5 ಮಾರ್ಚ್ 2023, 4:45 IST
ತಮಿಳುನಾಡಿನ ತಾಂಜಾವೂರಿನಲ್ಲಿ ಈಚೆಗೆ ನಡೆದ 11ನೇ ಸೀನಿಯರ್ ನ್ಯಾಷನಲ್ ಪ್ಯಾರಾವಾಲಿ ಸಿಟ್ಟಿಂಗ್ ವಾಲಿಬಾಲ್ ಸ್ಪರ್ಧೆಯಲ್ಲಿ ಕೆ.ಎಸ್.ಶಿಲ್ಪಾ ಭಾಗವಹಿಸಿದ್ದರು (ಎಡಚಿತ್ರ). ಪದಕದೊಂದಿಗೆ ಕೆ.ಎಸ್.ಶಿಲ್ಪಾ
ತಮಿಳುನಾಡಿನ ತಾಂಜಾವೂರಿನಲ್ಲಿ ಈಚೆಗೆ ನಡೆದ 11ನೇ ಸೀನಿಯರ್ ನ್ಯಾಷನಲ್ ಪ್ಯಾರಾವಾಲಿ ಸಿಟ್ಟಿಂಗ್ ವಾಲಿಬಾಲ್ ಸ್ಪರ್ಧೆಯಲ್ಲಿ ಕೆ.ಎಸ್.ಶಿಲ್ಪಾ ಭಾಗವಹಿಸಿದ್ದರು (ಎಡಚಿತ್ರ). ಪದಕದೊಂದಿಗೆ ಕೆ.ಎಸ್.ಶಿಲ್ಪಾ   

ಕೆ.ಆರ್.ನಗರ: ಮೂರೂವರೆ ವರ್ಷ ವಯಸ್ಸಿನಲ್ಲಿ ಲಾರಿ ಚಕ್ರಕ್ಕೆ ಸಿಲುಕಿ ಒಂದು ಕಾಲು ಕಳೆದುಕೊಂಡರೂ ವಿಚಲಿತರಾಗದೆ ಆತ್ಮವಿಶ್ವಾಸ, ಛಲದಿಂದಾಗಿ ಕ್ರೀಡಾ ಕ್ಷೇತ್ರದಲ್ಲಿ ಛಾಪು ಮೂಡಿಸುತ್ತಿರುವ ಯುವತಿ ಕೆ.ಎಸ್.ಶಿಲ್ಪಾ.

ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಕೂಟ ದಲ್ಲಿ ಪಾಲ್ಗೊಂಡು ಪ್ರಶಸ್ತಿ ಗಳಿಸಿರುವ ಶಿಲ್ಪಾ, ಕಜಕಿಸ್ತಾನ್‌ನ ಅಲ್ಮಾಟಿಯಲ್ಲಿ ಜುಲೈ 3ರಿಂದ 8ರವರೆಗೆ ನಡೆಯುವ ‘ವಿಶ್ವ ಪ್ಯಾರಾವಾಲಿ ಸಿಟ್ಟಿಂಗ್ ವಾಲಿಬಾಲ್ ಏಷ್ಯನ್ ಝೋನ್ ಚಾಂಪಿ ಯನ್‌ಶಿಪ್‌’ಗೆ ಆಯ್ಕೆಯಾಗಿದ್ದಾರೆ. ಭಾರತದಿಂದ ಪ್ರತಿನಿಧಿಸುವ 14 ಆಟಗಾರರ ತಂಡದಲ್ಲಿ ಶಿಲ್ಪಾ ಸ್ಥಾನ ಗಿಟ್ಟಿಸಿದ್ದಾರೆ.

ಕಜಕಿಸ್ತಾನ್‌ನಲ್ಲಿ ನಡೆಯುವ ಕ್ರೀಡಾ ಕೂಟದಲ್ಲಿ ಭಾಗವಹಿಸಲು ವಿಮಾನ ಪ್ರಯಾಣಕ್ಕಾಗಿ ₹80 ಸಾವಿರ, ವಿಸಾ– ಇನ್ಶೂರೆನ್ಸ್‌ಗಾಗಿ ₹15 ಸಾವಿರ, ಪ್ರವೇಶ ಶುಲ್ಕ ₹90 ಸಾವಿರ, ಕಿಟ್ ಸೇರಿದಂತೆ ಇನ್ನಿತರೆ ಖರ್ಚಿಗಾಗಿ ₹30 ಸಾವಿರ ಸೇರಿ ಒಟ್ಟು ₹2.15 ಲಕ್ಷ ಅಗತ್ಯವಿದೆ.

ADVERTISEMENT

ಕೃಷಿ ಕುಟುಂಬವಾಗಿರುವುದರಿಂದ ಅಷ್ಟು ಹಣ ಭರಿಸಲು ಶಕ್ತರಿಲ್ಲ. ಹೀಗಾಗಿ, ನೆರವಿನ ನಿರೀಕ್ಷೆ ಯಲ್ಲಿ ಶಿಲ್ಪಾ ಇದ್ದಾರೆ. ದಾನಿಗಳು ಎಸ್‌ಬಿಐ ಖಾತೆ ಸಂಖ್ಯೆ 32876269741, ಐಎಫ್‌ಎಸ್‌ಸಿ SBIN0007915ಗೆ ಹಣ ನೀಡ ಬಹುದು. ಮೊ.ಸಂ. 9611465905 ಸಂಪರ್ಕಿಸಬಹುದು.

ತಾಲ್ಲೂಕಿನ ಕಂಚುಗಾರಕೊಪ್ಪಲು ಗ್ರಾಮದ ಕೆ.ಜಿ.ಶೈಲ ಮತ್ತು ಶಾಂತಾ ದಂಪತಿ ಪುತ್ರಿ ಕೆ.ಎಸ್.ಶಿಲ್ಪಾ ಎಂ.ಎ, ಬಿ.ಇಡಿ ಮುಗಿಸಿದ್ದು, ಮೈಸೂರಿನ ಪ್ರಮತಿ ಹಿಲ್ ವ್ಯೂ ಅಕಾಡೆಮಿಯಲ್ಲಿ ಶಿಕ್ಷಕಿಯಾಗಿದ್ದಾರೆ.

‘ಅಪಘಾತದಲ್ಲಿ ನಾನು ಕಾಲು ಕಳೆದುಕೊಂಡಿದ್ದನ್ನು ನೋಡಿದ ಪೋಷಕರಿಗೆ ಆಘಾತ ಉಂಟಾಗಿತ್ತು. ನನಗೂ ನೋವಾಗುತ್ತಿತ್ತು. ಆದರೂ, ಜೀವನವನ್ನು ಸವಾಲಾಗಿ ಸ್ವೀಕರಿಸಿದೆ. ಕ್ರೀಡಾ ಕ್ಷೇತ್ರದತ್ತ ಆಸಕ್ತಿ ಬೆಳೆಸಿಕೊಂಡೆ. ಪರಿಶ್ರಮ ಪಟ್ಟು ಅಭ್ಯಾಸ ಮಾಡಿ ಪ್ಯಾರಾವಾಲಿ ಸಿಟ್ಟಿಂಗ್ ವಾಲಿಬಾಲ್ ಕ್ರೀಡೆಯ ತಂಡದ ನಾಯಕಿಯಾಗಿ ಆಯ್ಕೆಯಾದೆ. ಹರಿಯಾಣ, ತಮಿಳು ನಾಡು, ರಾಜಸ್ಥಾನ, ಕರ್ನಾಟಕದ ಉಡುಪಿಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದೇನೆ’ ಎಂದು ಶಿಲ್ಪಾ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.