ADVERTISEMENT

ರೈತರಿಗೆ ಕೃಷಿ ಸಾಲ ಅರಿವು ಅಭಿಯಾನ: ಪ್ರಪುಲ್ ಕುಮಾರ್

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 13:24 IST
Last Updated 11 ಜೂನ್ 2025, 13:24 IST
ಹುಣಸೂರಿನಲ್ಲಿ ಮಂಗಳವಾರ ಎಸ್‌ಬಿಐ ಆಯೋಜಿಸಿದ್ದ ಕೃಷಿ ಸಾಲ ಅರಿವು ವಾರ ಅಭಿಯಾನದಲ್ಲಿ ಸಾಲ ಮಂಜೂರಾದ ಗ್ರಾಹಕರಿಗೆ  ಬ್ಯಾಂಕ್‌ನ ಜಿಎಂ ಪ್ರಪುಲ್ ಕುಮಾರ್ ಜಿನಾ ಮಂಜೂರಾತಿ ಪತ್ರ ವಿತರಿಸಿದರು 
ಹುಣಸೂರಿನಲ್ಲಿ ಮಂಗಳವಾರ ಎಸ್‌ಬಿಐ ಆಯೋಜಿಸಿದ್ದ ಕೃಷಿ ಸಾಲ ಅರಿವು ವಾರ ಅಭಿಯಾನದಲ್ಲಿ ಸಾಲ ಮಂಜೂರಾದ ಗ್ರಾಹಕರಿಗೆ  ಬ್ಯಾಂಕ್‌ನ ಜಿಎಂ ಪ್ರಪುಲ್ ಕುಮಾರ್ ಜಿನಾ ಮಂಜೂರಾತಿ ಪತ್ರ ವಿತರಿಸಿದರು    

ಹುಣಸೂರು: ಪ್ರಗತಿಪರ ರೈತ ತಾನು ಗಳಿಸುವ ಹಣದಲ್ಲಿ ಸಣ್ಣ ಪುಟ್ಟ ಉಳಿತಾಯ ಮಾಡುವುದರಿಂದ ಆರ್ಥಿಕ ಸ್ವಾವಲಂಬಿಯಾಗಲು ಸಾಧ್ಯ ಎಂದು ಎಸ್‌ಬಿಐ ಜಿಎಂ  ಪ್ರಪುಲ್ ಕುಮಾರ್ ಜಿನಾ ಹೇಳಿದರು.

ನಗರದಲ್ಲಿ ನಡೆದ ಎಸ್‌ಬಿಐ ಮೈಸೂರು ಉತ್ತರ ವಿಭಾಗದ ಆರ್.ಬಿ.ಒ–2 ಮತ್ತು ಹುಣಸೂರು ಎಸ್.ಬಿ.ಐ ಕೃಷಿ ಅಭಿವೃದ್ಧಿ ಶಾಖೆ ಸಹಯೋಗದಲ್ಲಿ ನಡೆದ ಕೃಷಿ ಸಾಲ ಅರಿವು ಸಪ್ತಾಹ  ಉದ್ಘಾಟಿಸಿ ಮಾತನಾಡಿದರು.

‘ಎಸ್‌ಬಿಐ ದೇಶದಾದ್ಯಂತ ಒಂದು ವಾರ  ರೈತರಿಗೆ ಸಂಸ್ಥೆಯಿಂದ ಸಿಗುವ ಕೃಷಿ ಸಾಲ, ಇತರೆ ಸೌಲಭ್ಯ ಸೇರಿದಂತೆ ಸರ್ಕಾರಿ ಪ್ರಾಯೋಜಿತ ವಿಮಾ ಯೋಜನೆ, ಮಾಸಾಶನ, ಬೆಳೆ, ಮನೆ, ಕೃಷಿ ಯಂತ್ರೋಪಕರಣ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿಲಿದ್ದೇವೆ’ ಎಂದರು. ದೇಶದಾದ್ಯಂತ 22,800 ಶಾಖೆಗಳಲ್ಲಿ ಈ ಕಾರ್ಯ ಪ್ರಗತಿಯಲ್ಲಿದ್ದು, ರೈತರು ಬ್ಯಾಂಕ್ ನಿಂದ ಸಾಲ ಪಡೆಯಲಷ್ಟೇ ವ್ಯವಹಾರ ಸೀಮಿತಗೊಳಿಸುವ ಬದಲು ಕೃಷಿ ಆದಾಯದ ಒಂದಂಶ ಠೇವಣಿ ಇರಿಸಿದರೆ ಭವಿಷ್ಯಕ್ಕೆ ಉಪಯೋಗ ಆಗಲಿದೆ’ ಎಂದರು.

ADVERTISEMENT

ಎಜಿಎಂ ಅರುಣ್ ಕುಮಾರ್ ಪಾಣಿಗ್ರಾಹಿ ಮಾತನಾಡಿ, ಬ್ಯಾಂಕ್ ರೈತ ಪರವಾಗಿ ಕೆಲಸ ನಿರ್ವಹಿಸುತ್ತಿದ್ದು, ರೈತರು ಬ್ಯಾಂಕ್ ನಿಯಮವನ್ನು ಸಮರ್ಪಕವಾಗಿ ಪಾಲಿಸುವುದರಿಂದ ಗ್ರಾಹಕ ಮತ್ತು ಬ್ಯಾಂಕ್ ಸಂಬಂಧ ವೃದ್ಧಿಗೆ ಸಹಕಾರವಾಗಲಿದೆ ಎಂದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ಎಸ್‌ಬಿಐ ಮೈಸೂರು ಭಾಗದ ಪ್ರತಿಯೊಬ್ಬರ ಮನೆ ಬ್ಯಾಂಕ್ ಆಗಿದ್ದು, ತಂಬಾಕು ಬೆಳೆಗಾರರು ಸಂಕಷ್ಟದಲ್ಲಿ ಇದ್ದಾಗ ಬ್ಯಾಂಕ್ ಸಾಲ ನೀಡಿ ಬೇಸಾಯಕ್ಕೆ ಪೂರಕವಾಗಿ ಆರ್ಥಿಕ ಶಕ್ತಿ ತುಂಬಿದೆ. ಸಾಲ ನೀಡುವ ಅಧಿಕಾರದಲ್ಲಿ ಶಾಖಾ ವ್ಯವಸ್ಥಾಪಕರಿಗೆ ವಿಧಿಸಿರುವ ನಿಬಂಧನೆ ಸಡಿಲಗೊಳಿಸಿ ರೈತರಿಗೆ ಗರಿಷ್ಠ ಸಾಲ ನೀಡಬೇಕು ಎಂದು ಮನವಿ ಮಾಡಿದರು.

ಕೃಷಿ ವಿಜ್ಞಾನಿ  ವಸಂತಕುಮಾರ್ ತಿಮಕಾಪುರ, ಸಿಟಿಆರ್‌ಐ ಕೇಂದ್ರದ ಹಿರಿಯ ವಿಜ್ಞಾನಿ ರಾಮಕೃಷ್ಣ ಮಾತನಾಡಿದರು.

ಗೌರವ: ಬ್ಯಾಂಕ್ ನೊಂದಿಗೆ ಉತ್ತಮ ಆರ್ಥಿಕ ವ್ಯವಹಾರ ಹೊಂದಿರುವ ಪ್ರಗತಿಪರ ರೈತರು ಮತ್ತು ಸ್ವಸಹಾಯ ಸಂಘಗಳನ್ನು ಗುರುತಿಸಿ ಗೌರವಿಸಿದರು. ಸಾಲ ಮಂಜೂರಾತಿ ಆದೇಶ ಪತ್ರವನ್ನು ರೈತರಿಗೆ ವಿತರಿಸಿದರು.  ಬ್ಯಾಂಕ್ ಅಧಿಕಾರಿಗಳಾದ ಮಹದೇವಸ್ವಾಮಿ, ಸುನಿತಾ, ಅನಿಲ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.