ADVERTISEMENT

ಎಸ್‌ಐಆರ್‌ ‘ಫ್ಯಾಸಿಸ್ಟ್‌’ ಪ್ರತಿರೂಪ: ಹೋರಾಟಗಾರ ಶಿವಸುಂದರ್

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 5:23 IST
Last Updated 4 ಜನವರಿ 2026, 5:23 IST
ರೋಟರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜಾಗೃತಿ ಸಭೆಯಲ್ಲಿ ‘ಅಹಿಂದ ಚಳವಳಿ’ ಸಂಘಟನೆ ರಾಜ್ಯ ಮುಖ್ಯ ಸಂಚಾಲಕ ಎಸ್. ಮೂರ್ತಿ ಮಾತನಾಡಿದರು
ರೋಟರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜಾಗೃತಿ ಸಭೆಯಲ್ಲಿ ‘ಅಹಿಂದ ಚಳವಳಿ’ ಸಂಘಟನೆ ರಾಜ್ಯ ಮುಖ್ಯ ಸಂಚಾಲಕ ಎಸ್. ಮೂರ್ತಿ ಮಾತನಾಡಿದರು   

ಮೈಸೂರು: ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಎನ್ನುವುದು ಸರ್ಕಾರವೇ ಯಾರು ಮತ ಹಾಕಬೇಕು ಎಂಬುದನ್ನು ಆಯ್ಕೆ ಮಾಡುವ ವಿಕೃತ, ಫ್ಯಾಸಿಸ್ಟ್ ಪ್ರಕ್ರಿಯೆಯಾಗಿದ್ದು, ಇದೊಂದು ಸಂವಿಧಾನ ವಿರೋಧಿ ನಡೆ’ ಎಂದು ಹೋರಾಟಗಾರ ಶಿವಸುಂದರ್ ಟೀಕಿಸಿದರು.

‘ಅಹಿಂದ ಚಳವಳಿ’ ಸಂಘಟನೆಯು ನಗರದ ರೋಟರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜಾಗೃತಿ ಸಭೆಯಲ್ಲಿ ‘ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಕುಸಿತ, ಚುನಾವಣಾ ಆಯೋಗದ ದುರುಪಯೋಗ, ಮನರೇಗಾ ಉದ್ಯೋಗ ಖಾತ್ರಿ ಯೋಜನೆ ಕುರಿತು ಕಳವಳಗಳು’ ಕುರಿತು ಅವರು ಉಪನ್ಯಾಸ ನೀಡಿದರು.

‘ಎಸ್‌ಐಆರ್ ಎಂದರೆ ಕೇವಲ‌ ಮತಪಟ್ಟಿಯ ತೀವ್ರ ಪರಿಷ್ಕರಣೆ ಮಾತ್ರವಲ್ಲ, ಅಷ್ಟೇ ಆಗಿದ್ದರೆ ಇದಕ್ಕೆ ಯಾರ ವಿರೋಧವೂ ಇರುತ್ತಿರಲಿಲ್ಲ. ಸದ್ಯ ಕೇಂದ್ರ ಸರ್ಕಾರವು ದೇಶದ 11 ರಾಜ್ಯಗಳಲ್ಲಿ ಇದರ ಮ್ಯಾಪಿಂಗ್‌ ಕಾರ್ಯ ಆರಂಭಿಸಿದ್ದು, ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗಿದೆ. ತಮಿಳುನಾಡಿನ 8 ಕೋಟಿ ಮತದಾರರ ಪೈಕಿ 98 ಲಕ್ಷ‌ ಜನರ ಮ್ಯಾಪಿಂಗ್ ಆಗಿಲ್ಲ’ ಎಂದು ವಿವರಿಸಿದರು.

ADVERTISEMENT

‘ರಾಜ್ಯದಲ್ಲೂ ಮ್ಯಾಪಿಂಗ್‌ ಕಾರ್ಯಕ್ಕೆ ಸದ್ದಿಲ್ಲದೆ ಚಾಲನೆ ದೊರೆತಿದೆ. ಇನ್ನು ಮೂರು ತಿಂಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆರಂಭವಾಗಲಿದೆ. ನಾವು ಈ ದೇಶದವರು ಎಂದು ನಾವೇ ಸಾಬೀತುಪಡಿಸಿಕೊಳ್ಳಬೇಕಾಗುತ್ತದೆ. ಮೂರು ಹಂತಗಳಲ್ಲಿ ಪರಿಶೀಲನೆಗೆ ಅವಕಾಶ ನೀಡಿದ್ದು, ಎಲ್ಲವೂ ಗೊಂದಲಮಯವಾಗಿವೆ’ ಎಂದರು.

ಸಂಘಟನೆಯ ರಾಜ್ಯ ಮುಖ್ಯ ಸಂಚಾಲಕ ಎಸ್. ಮೂರ್ತಿ ಮಾತನಾಡಿ, ‘ಸಂವಿಧಾನ ಅನುಷ್ಠಾನಕ್ಕೆ ಬಂದ ದಿನ‌ ದೆಹಲಿಯ ರಾಮಲೀಲಾ ಮೈದಾನದಲ್ಲೇ ಕೆಲವರು ಸಂವಿಧಾನದ ಪ್ರತಿ ಸುಟ್ಟರು. ಮನುಸ್ಮೃತಿ ಸಂವಿಧಾನವಾಗಬೇಕಿತ್ತು ಎಂದಿದ್ದರು. ಇಂದು ಅವರೇ ಈ ದೇಶವನ್ನು ಆಳುತ್ತಿದ್ದಾರೆ. ಬಹುಸಂಖ್ಯಾತರಾದ, ಸ್ವಾತಂತ್ರ್ಯಕ್ಕಾಗಿ ಪ್ರಾಣ ಸಮರ್ಪಿಸಿದ‌ ವರ್ಗದ ನಾವು ಕೆಲವರ ದೃಷ್ಟಿಯಲ್ಲಿ ದೇಶದ್ರೋಹಿಗಳಂತೆ ಕಾಣುತ್ತಿದ್ದೇವೆ’ ಎಂದು ಬೇಸರಿಸಿದರು.

‘ದೇಶದ ಆಡಳಿತ ಇಂದಿಗೂ ಬ್ರಾಹ್ಮಣರ ಹಿಡಿತದಲ್ಲಿದೆ. 2018ರಿಂದ ಈವರೆಗೆ ದೇಶದಲ್ಲಿ 661 ಹೈಕೋರ್ಟ್ ನ್ಯಾಯಾಧೀಶರು ನೇಮಕ ಆಗಿದ್ದು, ಇದರಲ್ಲಿ 489 ಮಂದಿ ಬ್ರಾಹ್ಮಣರೇ ಆಗಿದ್ದಾರೆ. 2015-2022ರವರೆಗೆ ಕೇಂದ್ರ ಲೋಕಸೇವಾ ಆಯೋಗವು ಐಎಎಸ್, ಐಪಿಎಸ್, ಐಆರ್‌ಎಸ್‌ನಂತಹ ಹುದ್ದೆಗಳಿಗೆ 4365 ಮಂದಿಯನ್ನು ನೇಮಿಸಿಕೊಂಡಿದ್ದು, ಇವರಲ್ಲಿ 3170 ಮಂದಿ ಬ್ರಾಹ್ಮಣರು. ಇದೆಲ್ಲವೂ ಸಂಸತ್‌ನಲ್ಲಿ ಕೇಂದ್ರ ಸಚಿವರೇ ನೀಡಿದ ಮಾಹಿತಿ’ ಎಂದು ವಿವರಿಸಿದರು.

‘ಕರ್ನಾಟಕದಲ್ಲಿ 14 ಲಕ್ಷ ಬ್ರಾಹ್ಮಣರಿದ್ದರೂ 11 ಶಾಸಕರು ಆಯ್ಕೆಯಾಗಿದ್ದಾರೆ. ಲಿಂಗಾಯತರು 67 ಲಕ್ಷ, ಒಕ್ಕಲಿಗರು 61 ಲಕ್ಷ ಜನಸಂಖ್ಯೆ ಇದ್ದಾರೆ. ಆದರೆ ಈ ಮೂರು ಸಮುದಾಯದ ಶಾಸಕರ ಸಂಖ್ಯೆ ನೂರು ದಾಟಿದೆ. ಒಬಿಸಿ ವರ್ಗ ಜನಸಂಖ್ಯೆಯಲ್ಲಿ 2.80 ಕೋಟಿ ಇದ್ದರೂ ಸೂಕ್ತ ಪ್ರಾತಿನಿಧ್ಯ ಹಾಗೂ ರಾಜಕೀಯ ಶಕ್ತಿ ಇಲ್ಲ. ಮೀಸಲಾತಿಯ ಕಾರಣಕ್ಕೆ ದಲಿತರು ಶಾಸಕರಾಗಿದ್ದಾರೆ’ ಎಂದರು.

ಮಾಜಿ ಸಚಿವ ಕೋಟೆ ಶಿವಣ್ಣ, ಮುಖಂಡರಾದ ವಿಜಯಕುಮಾರಿ ಅರಸ್, ವೆಂಕಟೇಶ ಗೌಡ, ಅಲ್ಪಾನ್ಸ್ ಕೆನಡಿ, ಬಿ. ಶಿವಣ್ಣ, ತೀ.ನಾ. ಶ್ರೀನಿವಾಸ, ನಟರಾಜ್‌ ಮಹರ್ಷಿ, ಪ್ರತಿಮಾ ಮುನಿರಾಜಪ್ಪ, ದೇವರಾಜ ಪಾಳೇಗಾರ, ತಾಯೂರು ಪ್ರಕಾಶ್‌, ಶ್ರೀಸಾಯಿ ಸತೀಶ್‌, ಸುರೇಂದ್ರ, ತಾಜ್ ಪಾಷಾ ಪಾಲ್ಗೊಂಡರು.

ಎಸ್ಐಆರ್ ಎನ್ನುವ ಪ್ರಕ್ರಿಯೆ ಸಂವಿಧಾನ ವಿರೋಧಿ. ದೇಶದ ಯಾವ ಕಾನೂನಿನಲ್ಲೂ ಇದಕ್ಕೆ ಅವಕಾಶ ಇಲ್ಲ
ಶಿವಸುಂದರ್ ಹೋರಾಟಗಾರ