
ಮೈಸೂರು: ‘ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎಂಬ ಹಕ್ಕೊತ್ತಾಯದೊಂದಿಗೆ ಅಹಿಂದ ಸಂಘಟನೆಯು ವಸ್ತುಪ್ರದರ್ಶನ ಮೈದಾನದಲ್ಲಿ ಜ.25ರಂದು ಅಹಿಂದ ಸಮುದಾಯದ ಸಮಾವೇಶ ನಡೆಸಲಿದೆ’ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ತಿಳಿಸಿದರು.
ಇಲ್ಲಿನ ಗುರು ರೆಸಿಡೆನ್ಸಿಯಲ್ಲಿ ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ಇದು ಯಾರ ವಿರುದ್ಧದ ಸಮ್ಮೇಳನ ಅಥವಾ ಶಕ್ತಿ ಪ್ರದರ್ಶನ ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಕೊಡುಗೆಗಳ ಬಗ್ಗೆ ಜನರಿಗೆ ತಿಳಿಸುವ ಕಾರ್ಯಕ್ರಮ’ ಎಂದರು.
‘ದೇಶದಲ್ಲಿ ಧರ್ಮ, ಜಾತಿ ಹೆಸರಿನಲ್ಲಿ ಜನರನ್ನು ಒಡೆಯುವ ಕೆಲಸ ಆಗುತ್ತಿದೆ. ಆದರೆ ಸಿದ್ದರಾಮಯ್ಯ ದಕ್ಷಿಣ ಭಾರತಕ್ಕೆ ಕೋಮುವಾದ ತಟ್ಟದಂತೆ ಮೋದಿಗೆ ತಡೆಗೋಡೆಯಾಗಿ ನಿಂತಿದ್ದಾರೆ. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಅಧಿಕಾರ ನಡೆಸಲು ಕೋಮು ಶಕ್ತಿ ಪ್ರಯತ್ನಿಸುತ್ತಿದೆ. ಇದಕ್ಕೆ ಹೈಕಮಾಂಡ್ ಅವಕಾಶ ಮಾಡಿಕೊಡಬಾರದು’ ಎಂದು ಹೇಳಿದರು.
‘ಸಿದ್ದರಾಮಯ್ಯ ಇಲ್ಲದಿದ್ದರೆ ಪಟ್ಟಬದ್ದ ಹಿತಾಸಕ್ತಿಗಳು ಅಹಿಂದ ಸಮುದಾಯದ ಧ್ವನಿ ಅಡಗಿಸುತ್ತಾರೆ. ಸಾಮಾಜಿಕ ಶೈಕ್ಷಣಿಕ ವರದಿ ಜಾರಿಯಿಂದ ನಮ್ಮ ಸಮುದಾಯಕ್ಕೆ ಅನೇಕ ಸವಲತ್ತು ದೊರೆಯಲಿದೆ. ಅದಕ್ಕೆ ಅನೇಕ ಕಾಂಗ್ರೆಸ್ ನಾಯಕರೇ ಈ ಹಿಂದೆ ತಡೆಯೊಡ್ಡಿದ್ದಾರೆ. ಸಿದ್ದರಾಮಯ್ಯ ಅವರು ರಾಜಕೀಯದ ಕೊನೆಯ ಘಟ್ಟದಲ್ಲಿದ್ದು, ಅವರು ಅಧಿಕಾರದಲ್ಲಿದ್ದರಷ್ಟೇ ವರದಿ ಜಾರಿ ಸಾಧ್ಯ’ ಎಂದು ತಿಳಿಸಿದರು.
‘ಕೆಲವು ಶಾಸಕರು ಸಿದ್ದರಾಮಯ್ಯ ಕುರಿತು ಲಘುವಾಗಿ ಮಾತನಾಡುತ್ತಾರೆ. ಅವರೆಲ್ಲಾ ಅಹಿಂದ ಸಮುದಾಯದ ಬೆಂಬಲ ಪಡೆದು ಆಯ್ಕೆಯಾಗಿದ್ದಾರೆ ಎಂಬುದನ್ನು ಮರೆಯಬಾರದು. ಹೈಕಮಾಂಡ್ ಈ ಸೂಕ್ಷ್ಮತೆಗಳನ್ನು ಅರಿಯಬೇಕು. ಮೌನವಾ ಗಿದ್ದರೆ ಪಕ್ಷದ ವೋಟ್ ಬ್ಯಾಂಕ್‌ಗೆ ತೊಂದರೆಯಾಗುತ್ತದೆ. ನಮ್ಮ ರಾಜ್ಯಕ್ಕೆ ರಾಜಸ್ಥಾನದ ಪರಿಸ್ಥಿತಿ ಬರಬಾರದು. ಡಿಕೆಶಿ ಅವರೂ ಉತ್ತಮ ಸಂಘಟಕ. ಆದರೆ ನಮ್ಮ ಆಶೋತ್ತರ ಈಡೇರಿಸುವ ನಾಯಕರನ್ನು ನಾವು ಬೆಂಬಲಿಸುತ್ತೇವೆ. ಸಿದ್ದರಾಮಯ್ಯ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿರಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್‌ಗೆ ಮತ ನೀಡಿದ್ದೇವೆ’ ಎಂದರು.
ರಂಗಕರ್ಮಿ ಜನಾರ್ಧನ ಜೆನ್ನಿ ಮಾತನಾಡಿ, ‘ನಾವು ಯಾವ ಪಕ್ಷಕ್ಕೂ ಸೇರಿದವರಲ್ಲ., ಮನುಷ್ಯ ಜಾತಿಗೆ ಸೇರಿದವರು. ಶತಮಾನಗಳಿಂದ ಅಹಿಂದ ಸಮುದಾಯ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ಹೀಗೆ ಮುಂದುವರಿದರೆ ಮುಂದಿನ ಪೀಳಿಗೆಯೇ ಇರುವುದಿಲ್ಲ. ದೇಶದಲ್ಲಿ ಸಾಮಾಜಿಕ ನ್ಯಾಯದ ಅವಶ್ಯಕತೆ ಇದೆ. ಉಳಿದ ರಾಜ್ಯದಂತೆ ಕರ್ನಾಟಕವನ್ನು ಬಲಿ ಕೊಡಬಾರದು. ಸಿದ್ದರಾಮಯ್ಯ ಸಮಾಜವಾದಿ ಚಳವಳಿಯಿಂದ ಬಂದು ಸಮ ಸಮಾಜದ ಕನಸು ಕಂಡ ಜೀವ. ಅಂತಹ ನಾಯಕತ್ವ ಬೇಕಿದೆ’ ಎಂದು ಹೇಳಿದರು.
ಅಹಿಂದ ಸಂಘಟನೆ ಮುಖಂಡರಾದ ಎಸ್. ಯೋಗೇಶ್ ಉಪ್ಪಾರ, ಎಸ್. ರವಿನಂದನ್, ಶಿವಣ್ಣ, ಪೌರಕಾರ್ಮಿಕರ ಸಂಘದ ಮಾಜಿ ಅಧ್ಯಕ್ಷ ಮಾರ, ನಂಜುಂಡಸ್ವಾಮಿ, ಸವಿತಾ ಪ.ಮಲ್ಲೇಶ್, ಪತ್ರಕರ್ತ ಗುರುರಾಜ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.