
ಮೈಸೂರು: ಆನೆ ಹಾವಳಿ ತಡೆಗೆ ಕಾಡಂಚಿನ ಜಮೀನುಗಳಲ್ಲಿನ ಎತ್ತರದ ಮರಗಳಲ್ಲಿ ಅಟ್ಟಣಿಗೆ ನಿರ್ಮಿಸಿ ರೈತರು ಬೆಳೆ ಕಾಯುತ್ತಿದ್ದದ್ದು ಇತಿಹಾಸ. ಇದೀಗ, ಆನೆಗೇ ಘೀಳಿಟ್ಟು ಬೆಚ್ಚಿ ಬೀಳಿಸಿ, ಓಡಿಸಲು ಕೃತಕ ಬುದ್ದಿಮತ್ತೆಯ (ಎಐ) ಕ್ಯಾಮೆರಾ– ಸ್ಪೀಕರ್ ಬಂದಿದೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಜಮೀನುಗಳಲ್ಲಿ ಅರಣ್ಯ ಇಲಾಖೆಯು ‘ಕೃತಕ ಬುದ್ಧಿಮತ್ತೆ’ ತಂತ್ರಜ್ಞಾನ ನೆರವಿನಲ್ಲಿ ಕಾರ್ಯಾಚರಿಸುವ ‘ಕ್ಯಾಮೆರಾ’ ಮತ್ತು ‘ಸ್ಪೀಕರ್’ ಅಳವಡಿಸಲು ಮುಂದಾಗಿದೆ. ಆನೆ ಬರುತ್ತಿದ್ದಂತೆ ಜೇನುಗಳು ‘ಗುಂಯ್’ ಎನ್ನುವಂತೆ ಶಬ್ದ ಮಾಡುತ್ತಿದ್ದು, ಜನರೂ ಹೊಸ ತಂತ್ರಜ್ಞಾನಕ್ಕೆ ಅಚ್ಚರಿ ಪಟ್ಟಿದ್ದಾರೆ.
ನೆಗಳು ನಾಡಿನತ್ತ ಹೆಚ್ಚು ಬರುತ್ತಿರುವ ಜಾಗಗಳನ್ನು ಗುರುತಿಸಿ ಎಐ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಸಿಬ್ಬಂದಿ ಹಾಗೂ ಜನರನ್ನು ಎಚ್ಚರಿಸುತ್ತದೆ.ಕೆ.ಪರಮೇಶ, ಮೈಸೂರು ವಿಭಾಗದ ಡಿಸಿಎಫ್ (ಪ್ರಾದೇಶಿಕ)
ವೀರನಹೊಸಹಳ್ಳಿ ಅರಣ್ಯ ವಲಯ ವ್ಯಾಪ್ತಿಯ ಬೊಮ್ಮಲಾಪುರ ಹಾಡಿ ಜಮೀನಿನಲ್ಲಿ ಈ ಹೊಸ ಸೌಲಭ್ಯ ಅಳವಡಿಸಿದ್ದು, ಯಶ ಕಂಡಿದೆ. ಕ್ಯಾಮೆರಾದಲ್ಲಿ ಆನೆ ಬರುತ್ತಿರುವಾಗ ಕೂಗಿದ್ದು, ಅಲ್ಲಿಂದ ಪಲಾಯನ ಮಾಡಿದೆ. ಜಮೀನಿನ ಕಾವಲುಗಾರನಂತೆ ಕೆಲಸ ಮಾಡುತ್ತಿದೆ. ಆನೆಯನ್ನು ಗುರುತಿಸಿ ಕ್ರಿಯಾಶೀಲ
ವಾಗುವಂತಹ ಪ್ರೋಗ್ರಾಂ ಮಾತ್ರ ಅಳವಡಿಸಲಾಗಿದೆ. ಈ ತಂತ್ರಜ್ಞಾನವು ಆನೆಯ ರೂಪ ಕಣ್ಣಿಗೆ ಕಂಡದ್ದೆ ತಡ ತನ್ನ ಕೆಲಸವನ್ನು ಕ್ಷಣಾರ್ಧದಲ್ಲಿ ಶುರು ಮಾಡಿಕೊಂಡು ಬಿಡುತ್ತದೆ.
ಭಯ ಬೀಳಿಸುವ ಸದ್ದು: ಆನೆಗೆ ಜೇನುನೋಣವೆಂದರೆ ಭಯ. ಕಿವಿಗಡಚಿಕ್ಕುವಂತೆ ‘ಗುಂಯ್’ ಎಂದು ಸದ್ದು ಮಾಡುವ ರೀತಿಯಲ್ಲಿ ಕ್ಯಾಮೆರಾ– ಸ್ಪೀಕರ್‌ನಿಂದ ಕೂಗು ಹೊಮ್ಮುತ್ತದೆ. ಇದರೊಂದಿಗೆ ಜನರು ಕೂಗುವ, ತಟ್ಟೆ ಬಾರಿಸುವ, ಪಟಾಕಿ ಸಿಡಿಯುವ ಶಬ್ಧ ಸೇರಿದಂತೆ 20ಕ್ಕೂ ಹೆಚ್ಚು ಬಾರಿ ಸದ್ದುಗಳನ್ನು ಸಮೀಕರಿಸಿ ಹೊಸ ಶಬ್ದ ಮೊಳಗುತ್ತದೆ. ಆನೆ ಹಿಮ್ಮೆಟ್ಟುವ ತನಕ ಶಬ್ದವನ್ನು ನಿಲ್ಲಿಸುವುದಿಲ್ಲ.
ದೂರದಲ್ಲಿ ಗುರುತು ಪತ್ತೆ: ಕ್ಯಾಮೆರದಿಂದ 500ರಿಂದ 750 ಮೀಟರ್ ದೂರದಲ್ಲಿಯೇ ಆನೆಗಳು ಕಂಡರೆ ಕ್ಯಾಮೆರಾ ಗುರುತು ಹಿಡಿಯುತ್ತದೆ. ಇದರ ಬೆಲೆ ಲಕ್ಷಾಂತರ ರೂಪಾಯಿ ಆಗಿದ್ದು, ಆಯಕಟ್ಟಿನ ಜಾಗಗಳಲ್ಲಿ ಅಳವಡಿಕೆಗೆ ಇಲಾಖೆಯು ಮುಂದಾಗಿದೆ. ಬೊಮ್ಮಲಾಪುರ ಹಾಡಿ ಪ್ರದೇಶದ ಭೂ ಸ್ವರೂಪ ಭಿನ್ನವಾಗಿದ್ದು, ಸೋಲಾರ್ ಬೇಲಿ, ರೈಲು ಕಂಬಿ ಬ್ಯಾರಿಕೇಡ್ ಅಳವಡಿಕೆ ಕಷ್ಟ ಸಾಧ್ಯ. ಹೀಗಾಗಿ ಹೊಸ ಪ‍್ರಯೋಗ ಯಶಸ್ಸು ಕಂಡಿದೆ.
‘ಹಳ್ಳ–ಕೊಳ್ಳಗಳಿರುವ ಆನೆ ದಾಟುವ ದಾರಿಗಳಲ್ಲಿ ಕ್ಯಾಮೆರಾ ಇಡಲಾಗುತ್ತಿದೆ. ಸರಗೂರು, ಎಚ್.ಡಿ.ಕೋಟೆಯ ಬೂದನೂರು, ಹುಣಸೂರು ಗ್ರಾಮಗಳಲ್ಲಿ ಅಳವಡಿಸಲಾಗುತ್ತಿದೆ. ಬೊಮ್ಮಲಾಪುರ ಹಾಡಿಯಲ್ಲಿ ಅಳವಡಿಕೆಯಿಂದ ರೈತರಿಗೆ ಅನುಕೂಲವಾಗಿದೆ. ಮಾನವ– ವನ್ಯಜೀವಿ ಸಂಘರ್ಷ ತಡೆಯಲು ಇಲಾಖೆಗೆ ಬದ್ಧವಾಗಿದೆ. ಮುಂದಿನ ದಿನಗಳಲ್ಲಿ ಹುಲಿ, ಚಿರತೆ ಗುರುತಿಸಿ, ಎಚ್ಚರಿಕೆ ನೀಡುವ ಪ್ರಯೋಗದ ಬಗ್ಗೆಯೂ ಕ್ರಮವಹಿಸಲಾಗುತ್ತಿದೆ’ ಎಂದು ಮೈಸೂರು ವಿಭಾಗದ ಡಿಸಿಎಫ್ (ಪ್ರಾದೇಶಿಕ) ಕೆ.ಪರಮೇಶ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.