ADVERTISEMENT

‘ಎಐ: ಸಿನಿಮಾ, ರಂಗಭೂಮಿ ಪ್ರಭಾವಿಸದು’

ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಅಭಿಮತ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 16:14 IST
Last Updated 9 ಜೂನ್ 2025, 16:14 IST
ಮೈಸೂರಿನ ರಂಗಾಯಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹರಿಶ್ಚಂದ್ರ ಕಿರುಚಿತ್ರದ ನಿರ್ದೇಶಕ ರಾಜ‍ಪ್ಪ ದಳವಾಯಿ, ಕಲಾವಿದರಾದ ನಾಗರಾಜ ಆದವಾನಿ, ಎಸ್.ಜಿ.ಸೋಮಶೇಖರ್ ರಾವ್ ಅವರನ್ನು ಗೌರವಿಸಲಾಯಿತು
ಮೈಸೂರಿನ ರಂಗಾಯಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹರಿಶ್ಚಂದ್ರ ಕಿರುಚಿತ್ರದ ನಿರ್ದೇಶಕ ರಾಜ‍ಪ್ಪ ದಳವಾಯಿ, ಕಲಾವಿದರಾದ ನಾಗರಾಜ ಆದವಾನಿ, ಎಸ್.ಜಿ.ಸೋಮಶೇಖರ್ ರಾವ್ ಅವರನ್ನು ಗೌರವಿಸಲಾಯಿತು   

ಮೈಸೂರು: ‘ಕೃತಕ ಬುದ್ಧಿಮತ್ತೆ (ಎಐ) ಯುಗದಲ್ಲೂ ಸಿನಿಮಾ ಮತ್ತು ರಂಗಭೂಮಿ ಕ್ಷೇತ್ರಗಳು ಶಕ್ತಿಯುತವಾಗಿ ಬೆಳೆಯುತ್ತಿರುವುದು ಆಶಾದಾಯಕ’ ಎಂದು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಹೇಳಿದರು. 

ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ಭಾನುವಾರ ನಡೆದ ‘ಹರಿಶ್ಚಂದ್ರ’ ಕಿರುಚಿತ್ರದ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.

‘ಸಿನಿಮಾ, ರಂಗಭೂಮಿಗಳು ಮಾನವ ಸಂಪನ್ಮೂಲ ಹಾಗೂ ಸೃಜನಶೀಲತೆ ಬೇಡುತ್ತವೆ. ‘ಎಐ’ ಪ್ರಭಾವ ಇವುಗಳಿಗೆ ಬೀರುವುದಿಲ್ಲ. ಲೇಖಕ ರಾಜಪ್ಪ ದಳವಾಯಿ ನಿರ್ದೇಶನದ ಹರಿಶ್ಚಂದ್ರ ಚಿತ್ರವು ಕೋಲ್ಕತ್ತದಲ್ಲಿ ಈಚೆಗೆ ನಡೆದ ಅಂತರರಾಷ್ಟ್ರೀಯ ಕಿರುಚಿತ್ರ ಸ್ಪರ್ಧೆಯಲ್ಲಿ 8 ‍ಪ್ರಶಸ್ತಿ ಪಡೆದಿರುವುದು ಪ್ರಶಂಸನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ADVERTISEMENT

‘ಕಿರುಚಿತ್ರಗಳು ಕಡಿಮೆ ಸಮಯದಲ್ಲಿ ಬದುಕಿನ ತತ್ವವನ್ನು ಗಾಢವಾಗಿ ಕಟ್ಟಿಕೊಡುತ್ತವೆ. ಬದುಕನ್ನು ಅರ್ಥಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತವೆ’ ಎಂದು ಹೇಳಿದರು. 

ಲೇಖಕ ಬಿ.ಎ.ಮಧು ಮಾತನಾಡಿ, ‘ಕಿರುಚಿತ್ರಗಳೇ ಇಂದು ಹೆಚ್ಚು ಜನರನ್ನು ಆಕರ್ಷಿಸುತ್ತಿವೆ. ರಾಜಪ್ಪ ದಳವಾಯಿ ಅವರು ಆಯ್ಕೆ ಮಾಡಿಕೊಂಡಿರುವ ಮಾರ್ಗ ಸುಂದರವಾಗಿದೆ. ಹರಿಶ್ಚಂದ್ರ ಕಿರುಚಿತ್ರದಲ್ಲಿ ಬರುವ ಸ್ಮಶಾನದ ದೃಶ್ಯವೊಂದರಲ್ಲೇ ಇಡೀ ಜೀವನದ ಕಥೆಯನ್ನೇ ಹೇಳಲಾಗಿದೆ’ ಎಂದರು. 

‘ಬೆಂಕಿ ಎಂಬುದು ಜೀವನ; ಬೂದಿ ಎಂಬುದು ಸಾವು. ಎಷ್ಟೇ ಸಂಪಾದನೆ, ಏನೇ ಸಾಧನೆ ಮಾಡಿದರೂ ಕಡೆಗೆ ಒಂದು ದಿನ ಸ್ಮಶಾನಕ್ಕೆ ಬರಬೇಕು ಎಂಬುದನ್ನು ಸರಳವಾಗಿ ಹೇಳಲಾಗಿದೆ’ ಎಂದು ತಿಳಿಸಿದರು. 

ನಿರ್ದೇಶಕ ರಾಜಪ್ಪ ದಳವಾಯಿ, ಕಲಾವಿದರಾದ ನಾಗರಾಜ ಆದವಾನಿ, ಎಸ್.ಜಿ.ಸೋಮಶೇಖರ್ ರಾವ್ ಅವರನ್ನು ಗೌರವಿಸಲಾಯಿತು.

ರಂಗಕರ್ಮಿ ರಾಜಶೇಖರ ಕದಂಬ, ನಟರಾಜ್‌ ಶಿವು ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.