
ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಆಯೋಜಿಸಿದ್ದ ‘ವಾಕ್ ಮತ್ತು ಸಂಗೀತ ಸಂಶೋಧನೆ’ ಕುರಿತ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಐಐಐಟಿ–ಧಾರವಾಡ ನಿರ್ದೇಶಕ ಪ್ರೊ.ಎಸ್.ಆರ್.ಮಹದೇವ ಪ್ರಸನ್ನ ಬಿಡುಗಡೆ ಮಾಡಿದರು
ಮೈಸೂರು: ‘ಕೃತಕ ಬುದ್ಧಿಮತ್ತೆ ಸೇರಿ ಆಧುನಿಕ ತಂತ್ರಜ್ಞಾನಗಳು ವಾಕ್ ಮತ್ತು ಶ್ರವಣ ದೋಷಗಳ ನಿವಾರಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ವಿಜ್ಞಾನ ಸಂಯೋಜಕಿ ಸುನಿತಾ ವರ್ಮಾ ಪ್ರತಿಪಾದಿಸಿದರು.
ನಗರದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಸಚಿವಾಲಯದ ಸಹಯೋಗದಲ್ಲಿ ಗುರುವಾರ ಆರಂಭವಾದ ವಾಕ್ ಮತ್ತು ಸಂಗೀತ ಸಂಶೋಧನೆ ಕುರಿತು ಸಮ್ಮೇಳನದಲ್ಲಿ ವರ್ಚ್ಯುವಲ್ ಮೂಲಕ ಮಾತನಾಡಿ, ‘ಸಚಿವಾಲಯವು ಶ್ರವಣ ಸಾಧನಗಳ ಸಂಶೋಧನೆ ಹಾಗೂ ಆವಿಷ್ಕಾರಕ್ಕೆ ನೆರವಾಗುತ್ತಿದೆ’ ಎಂದರು.
‘ವೈದ್ಯಕೀಯ ಸಮಸ್ಯೆಗಳನ್ನು ಬಗೆಹರಿಸಲು ವಿಜ್ಞಾನಿಗಳು, ತಂತ್ರಜ್ಞರ ಸಮನ್ವಯ ಮತ್ತು ಸಾಂಘಿಕ ಶ್ರಮವು ಅಗತ್ಯ. ಎಂಆರ್‌ಐ ಸೇರಿದಂತೆ ವೈದ್ಯಕೀಯ ಸಾಧನಗಳನ್ನು ದೇಶಿಯವಾಗಿ ತಯಾರಿಸಲು ಸಚಿವಾಲಯವು ತನ್ನ ಸಂಸ್ಥೆಗಳ ಮೂಲಕ ನೆರವಾಗುತ್ತಿದೆ. ಜನರಿಗೆ ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಸೇವೆಗಳು ಸಿಗಲಿವೆ’ ಎಂದು ಹೇಳಿದರು.
‘ಕೇಂದ್ರ ಸರ್ಕಾರಿ ಆರೋಗ್ಯ ಯೋಜನೆ (ಸಿಜಿಎಚ್‌ಎಸ್) ಅಡಿ ಸ್ವಾಸ್ಥ್ಯ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಹಿರಿಯ ನಾಗರಿಕರ ಆರೋಗ್ಯ ಕಾಪಾಡುವಲ್ಲಿ ನೆರವಾಗಲಿವೆ. ಆಧುನಿಕ ವೈದ್ಯಕೀಯ ಪರಿಕರಗಳು ಅಲ್ಲಿವೆ. ಆಯುಷ್ಮಾನ್ ಭಾರತ್ ಯೋಜನೆಯಡಿ ನಾಗರಿಕರ ಆರೋಗ್ಯ ಕಾಯಲಾಗುತ್ತಿದೆ’ ಎಂದು ತಿಳಿಸಿದರು.
‘ಸೆಮಿಕಂಡಕ್ಟರ್, ಎಐ ಮಿಷನ್ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದ್ದು, ವಿಕಸಿತ ಭಾರತದ ಕನಸು ಸಾಕಾರಗೊಳ್ಳಲಿದೆ. ಅದಕ್ಕೆ ಎಲ್ಲ ವಿಜ್ಞಾನಿಗಳು, ತಂತ್ರಜ್ಞರು ಹಾಗೂ ಸಂಶೋಧಕರ ಶ್ರಮ ಅಗತ್ಯ’ ಎಂದು ಹೇಳಿದರು.
ಧಾರವಾಡದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ನಿರ್ದೇಶಕ ಪ್ರೊ.ಎಸ್.ಆರ್.ಮಹದೇವ ಪ್ರಸನ್ನ, ‘ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಪ್ರದರ್ಶಕ ಕಲೆಗಳಲ್ಲೂ ಬಳಸಲಾಗುತ್ತಿದೆ. ವಾಕ್ ಮತ್ತು ಶ್ರವಣ ದೋಷ ಇರುವವರಿಗೆ ಸಾಧನಗಳನ್ನು ಉನ್ನತೀಕರಿಸುವುದು ತಂತ್ರಜ್ಞರ ಜವಾಬ್ದಾರಿಯಾಗಿದೆ’ ಎಂದರು.
‘ಸಾರ್ವಜನಿಕರಿಗೂ ತಂತ್ರಜ್ಞಾನದ ಪ್ರಯೋಜನ ತಲುಪಬೇಕು. ಆಯಿಷ್ ಮತ್ತು ಐಐಐಟಿ ಜಂಟಿಯಾಗಿ ವಾಕ್ ಮತ್ತು ಶ್ರವಣ ಪೀಡಿತರ ಸಮಸ್ಯೆ ಬಗೆಹರಿಸಲು ಶ್ರಮಿಸುತ್ತಿವೆ’ ಎಂದು ತಿಳಿಸಿದರು.
ಜಾಧವ್‌ಪುರ ವಿಶ್ವವಿದ್ಯಾಲಯದ ಪ್ರೊ.ಶಂಖ ಸನ್ಯಾಲ್, ಆಯಿಷ್ ಪ್ರಭಾರ ನಿರ್ದೇಶಕಿ ಪ್ರೊ.ಪಿ.ಮಂಜುಳಾ, ಮೂಲಸೌಕರ್ಯ ಡೀನ್ ಪ್ರೊ.ಅಜೀಶ್ ಕೆ.ಅಬ್ರಾಹಂ, ವಾಕ್ ತಜ್ಞ ಕಾರ್ತಿಕ್ ವೆಂಕಟ್ ಶ್ರೀಧರನ್ ಪಾಲ್ಗೊಂಡಿದ್ದರು.
- ‘ಮಾನವತೆ ಕಡೆಗೆ ಬಳಸಬೇಕು’ ‘
ಕೃತಕ ಬುದ್ಧಮತ್ತೆ ತಂತ್ರಜ್ಞಾನವು ವೇಗವಾಗಿ ಬೆಳೆಯುತ್ತಿದೆ. ಅದನ್ನು ಎಲ್ಲ ಕ್ಷೇತ್ರದಲ್ಲೂ ಬಳಸಲಾಗುತ್ತಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಇದುವರೆಗೂ ಸಾಧಿಸಿದ್ದು ಮುಂದಿನ 10 ವರ್ಷಗಳಲ್ಲಿ ಆವಿಷ್ಕಾರಗಳಿಗೆ ಸಮನಾಗಿದೆ. ಹೀಗಾಗಿ ಎಐ ಅನ್ನು ಮಾನವತೆಯ ಕಡೆಗೆ ಬಳಸುವುದು ತಂತ್ರಜ್ಞರು ವೈದ್ಯರ ಹೊಣೆ’ ಎಂದು ಪ್ರೊ.ಎಸ್.ಆರ್.ಮಹದೇವ ಪ್ರಸನ್ನ ಅಭಿಪ್ರಾಯಪಟ್ಟರು. ‘ಯಾವುದೇ ತಾಂತ್ರಿಕ ಸಾಧನ ತಯಾರಾಗಲು ಬಹಳ ವರ್ಷದ ಸಂಶೋಧನೆ ಬೇಕಾಗುತ್ತದೆ. ಟೆಕ್ನೋಕ್ರಾಟ್ಸ್‌ಗಳು ಆಯಿಷ್‌ನ ತಂತ್ರಜ್ಞರನ್ನು ಬಳಸಿಕೊಂಡು ಸುಧಾರಿತ ಎಲ್ಲರಿಗೂ ಸುಲಭ ಬೆಲೆಯಲ್ಲಿ ಸಿಗಬಹುದಾದ ಪರಿಕರಗಳನ್ನು ಆವಿಷ್ಕರಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.