ADVERTISEMENT

ಮೈಸೂರು | ಬೇನಾಮಿ ಹೆಸರಿನಲ್ಲಿ ಬಿಲ್‌ ಆರೋಪ: ಎಐಟಿಯುಸಿ ಸದಸ್ಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 3:19 IST
Last Updated 12 ನವೆಂಬರ್ 2025, 3:19 IST
‘ಬೇನಾಮಿ ಹೆಸರಿನಲ್ಲಿ ಗುತ್ತಿಗೆದಾರ ಕಂಪನಿಯೊಂದು ಕಾರ್ಮಿಕರ ಹಣ ಪಡೆಯುತ್ತಿದೆ’ ಎಂದು ಆರೋಪಿಸಿ ಎಐಟಿಯುಸಿ ಸದಸ್ಯರು ಮಂಗಳವಾರ ಮೈಸೂರಿನ ಕ್ರಾಫರ್ಡ್ ಭವನದ ಎದುರು ಪ್ರತಿಭಟನೆ ನಡೆಸಿದರು 
‘ಬೇನಾಮಿ ಹೆಸರಿನಲ್ಲಿ ಗುತ್ತಿಗೆದಾರ ಕಂಪನಿಯೊಂದು ಕಾರ್ಮಿಕರ ಹಣ ಪಡೆಯುತ್ತಿದೆ’ ಎಂದು ಆರೋಪಿಸಿ ಎಐಟಿಯುಸಿ ಸದಸ್ಯರು ಮಂಗಳವಾರ ಮೈಸೂರಿನ ಕ್ರಾಫರ್ಡ್ ಭವನದ ಎದುರು ಪ್ರತಿಭಟನೆ ನಡೆಸಿದರು    

ಮೈಸೂರು: ‘152 ಮಂದಿ ಭದ್ರತಾ ಕಾರ್ಮಿಕರು ಹಾಗೂ ಒಬ್ಬ ಮೇಲ್ವಿಚಾರಕ ಸಿಬ್ಬಂದಿ ಬದಲು 125 ಸಿಬ್ಬಂದಿಯನ್ನು ನಿಯೋಜಿಸಿ 27 ಮಂದಿಯ ಬಿಲ್‌ ಅನ್ನು ಬೇನಾಮಿ ಹೆಸರಿನಲ್ಲಿ ಗುತ್ತಿಗೆದಾರ ಕಂಪನಿಯೊಂದು ಪಡೆಯುತ್ತಿದೆ’ ಎಂದು ಆರೋಪಿಸಿ ಎಐಟಿಯುಸಿ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು.  

ನಗರದ ಕ್ರಾಫರ್ಡ್ ಭವನದ ಎದುರು ಜಮಾಯಿಸಿದ ಪ್ರತಿಭಟನಕಾರರು, ‘ಇರುವ ಸಿಬ್ಬಂದಿಗೆ ವಾರದ ರಜೆ, ವಾರ್ಷಿಕ ಭತ್ಯೆ ನೀಡದೇ ಒತ್ತಾಯಪೂರ್ವಕವಾಗಿ ಕೆಲಸ ಮಾಡಿಸಿ ಕಾರ್ಮಿಕರ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ’ ಎಂದು ದೂರಿದರು. 

ಸಂಘಟನೆಯ ಚಂದ್ರಶೇಖರ ಮೇಟಿ ಮಾತನಾಡಿ, ‘55ರಿಂದ 60 ಬೇನಾಮಿ ಹೆಸರುಗಳನ್ನು ನೀಡಿ 7 ಬಿಲ್‌ ಪಡೆದು, ಶೋಷಣೆ ನಡೆಸಿದ್ದಾರೆ. ಇದರಲ್ಲಿ ಆಡಳಿತ ಮಂಡಳಿಯ ಪಾತ್ರವೂ ಇದ್ದು, ಟೆಂಡರ್‌ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಮನವಿ ನೀಡುವ ವೇಳೆಯಲ್ಲೂ ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ಸಣ್ಣ ಗುತ್ತಿಗೆದಾರರು ಬೆಳೆಯಲು ಅವಕಾಶ ನೀಡಿ ಎಂದಿದ್ದಾರೆ. ವಿಶ್ವವಿದ್ಯಾಲಯದ ಅಣತಿಯಂತೆ ಎಲ್ಲವೂ ನಡೆಯುತ್ತಿದೆ’ ಎಂದು ಆರೋಪಿಸಿದರು. 

ADVERTISEMENT

‘ನ.3ರಂದು ನೀಡಿರುವ ಬೇಡಿಕೆಗಳನ್ನು ಈಡೇರಿಸಬೇಕು. ಭದ್ರತಾ ಸಿಬ್ಬಂದಿ ಮೇಲ್ವಿಚಾರಕರನ್ನು ಕೆಲಸದಿಂದ ವಜಾ ಮಾಡಬೇಕು. ಗುತ್ತಿಗೆದಾರರರ ಅವ್ಯವಹಾರದ ತನಿಖೆ ಮಾಡಬೇಕು. ಕಾರ್ಮಿಕರ ಕುಂದುಕೊರತೆ ಸಭೆಯನ್ನು ನಡೆಸಬೇಕು’ ಎಂದು ಆಗ್ರಹಿಸಿದರು. 

‘ಮನವಿ ಸ್ವೀಕರಿಸಿದ ಉಪ ಕುಲಸಚಿವ ಚನ್ನಕೇಶವ ವಾರದೊಳಗೆ ಪರಿಶೀಲಿಸಿ, ಕ್ರಮವಹಿಸುವುದಾಗಿ ತಿಳಿಸಿದ್ದಾರೆ’ ಎಂದರು.

ಮುಖಂಡರಾದ ಪಿ.ಎಚ್‌.ಸಂಧ್ಯಾ, ಯಶೋಧರ, ಹರೀಶ್‌ ಮುದ್ದುಕೃಷ್ಣ, ಸತೀಶ್‌, ಸಿಂಡಿಕೇಟ್‌ ಸದಸ್ಯ ಶಬ್ಬೀರ್ ಮುಸ್ತಫಾ, ಸರ್ವೋದಯ ಕರ್ನಾಟಕದ ಉಗ್ರನರಸಿಂಹೇಗೌಡ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.