ಮೈಸೂರು: ಮಕ್ಕಳ ಹಸಿವು ನೀಗಿಸುವ ಉದ್ದೇಶದಿಂದ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ನೀಡುತ್ತಿರುವ ಮಾದರಿಯಲ್ಲಿಯೇ, ಇಲ್ಲಿನ ಕುವೆಂಪುನಗರದ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ಬೋಧಕರು ಹಾಗೂ ಬೋಧಕೇತರರು ತಮ್ಮ ಸ್ವಂತ ಖರ್ಚಿನ ಜೊತೆಗೆ ದೇಣಿಗೆ ಸಂಗ್ರಹಿಸಿ ಈ ಕಾರ್ಯಕ್ರಮ ರೂಪಿಸಿರುವುದು ವಿಶೇಷ.
ದಾಖಲಾತಿ ಹೆಚ್ಚಿಸುವುದು ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಹಸಿವು ನೀಗಿಸುವ ದೃಷ್ಟಿಯಿಂದ ‘ಪದವಿ ಅಕ್ಷಯ ದಾಸೋಹ’ ಹೆಸರಿನಡಿ ಊಟ ನೀಡಲು ಕಾಲೇಜು ಅಭಿವೃದ್ಧಿ ಸಮಿತಿ ಹಾಗೂ ಬೋಧಕ, ಬೋಧಕೇತರರು ತೀರ್ಮಾನಿಸಿದ್ದು, ಶನಿವಾರ (ಮಾರ್ಚ್ 1ರಂದು) ಚಾಲನೆ ದೊರೆಯಲಿದೆ.
1996ರಲ್ಲಿ ಆರಂಭವಾದ ಈ ಕಾಲೇಜಿನಲ್ಲಿ ಬಿ.ಎ., ಬಿ.ಎಸ್ಸಿ., ಬಿ.ಕಾಂ., ಬಿಬಿಎ ಕೋರ್ಸ್‌ಗಳಿವೆ. ಇಲ್ಲಿ ಪ್ರಸ್ತುತ 1,649 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳು ಹೆಚ್ಚಾಗಿದ್ದಾರೆ. 280 ವಿದ್ಯಾರ್ಥಿನಿಯರು ಕಲಿಯುತ್ತಿದ್ದಾರೆ.
ಕೈಜೋಡಿಸಿದ ಶಾಸಕ: ‘ಗ್ರಾಮೀಣ ಭಾಗದಿಂದ ಬರುವ 2, 4 ಹಾಗೂ 6ನೇ ಸೆಮಿಸ್ಟರ್‌ನ 80 ವಿದ್ಯಾರ್ಥಿನಿಯರಿಗೆ ರಜಾದಿನ, ಶನಿವಾರ ಹಾಗೂ ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಮಧ್ಯಾಹ್ನದ ಊಟ ನೀಡಲು ತೀರ್ಮಾನಿಸಲಾಗಿದೆ. ಸದ್ಯಕ್ಕೆ 45 ದಿನಗಳಿಗೆ ಬೇಕಾದ ₹1 ಲಕ್ಷವನ್ನು ಸಂಗ್ರಹಿಸಲಾಗಿದೆ. ಇದಕ್ಕೆ 25ಕ್ಕೂ ಹೆಚ್ಚು ಬೋಧಕರು, ಬೋಧಕೇತರರು, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಟಿ.ಎನ್. ಶ್ರೀವತ್ಸ ಹಾಗೂ ಸದಸ್ಯರು ಕೈಜೋಡಿಸಿದ್ದಾರೆ’ ಎಂದು ಕಾಲೇಜಿನ ಪ್ರಾಂಶುಪಾಲ ಪುಟ್ಟರಾಜ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕಾಲೇಜಿನಲ್ಲಿ ಈಗ ವಿದ್ಯಾರ್ಥಿನಿಯಯರ ಸಂಖ್ಯೆ ಕಡಿಮೆ ಇದೆ. ದಾಖಲಾತಿ ಹೆಚ್ಚಿಸುವುದು, ಗಂಡು–ಹೆಣ್ಣಿನ ಅನುಪಾತವನ್ನು ಸರಿದೂಗಿಸುವುದು ಹಾಗೂ ಜ್ಞಾನ ವೃದ್ಧಿಸುವುದು ‘ಪದವಿ ಅಕ್ಷಯ ದಾಸೋಹ’ ಕಾರ್ಯಕ್ರಮದ ಉದ್ದೇಶವಾಗಿದೆ’ ಎನ್ನುತ್ತಾರೆ ಅವರು.
‘ವಿದ್ಯಾರ್ಥಿನಿಯರಿಗೆ ಊಟ ನೀಡಲು ಅಕ್ಷಯ ಫೌಂಡೇಷನ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಅವರು ಊಟ ಸಿದ್ಧಪಡಿಸಿ ತರಲಿದ್ದಾರೆ. ಅನ್ನ, ಸಾಂಬಾರು, ಪಲ್ಯ ಹಾಗೂ ಮೊಸರು ಇರುತ್ತದೆ. ಒಂದು ಊಟಕ್ಕೆ ₹27 ವೆಚ್ಚವಾಗಲಿದೆ’ ಎಂದು ಹೇಳಿದರು.
‘ಗ್ರಾಮೀಣ ಭಾಗದ ಎಷ್ಟೋ ವಿದ್ಯಾರ್ಥಿನಿಯರು ಮನೆಯಿಂದ ಊಟ ತಂದಿರುವುದಿಲ್ಲ. ಹೋಟೆಲ್‌ನಲ್ಲಿ ತಿನ್ನಲು ಅವರ ಬಳಿ ಹಣವಿರುವುದಿಲ್ಲ. ಹಸಿವು ತಡೆದುಕೊಂಡು ಸಂಜೆಯವರೆಗೂ ತರಗತಿಗಳಲ್ಲಿ ಕೂರುವುದು ಕಷ್ಟ. ಇಂಥವರಿಗೆ ‘ಪದವಿ ಅಕ್ಷಯ ದಾಸೋಹ’ ನೆರವಾಗಲಿದೆ’ ಎಂಬ ಆಶಯ ನಮ್ಮದು ಎನ್ನುತ್ತಾರೆ ಅವರು.
ಗ್ರಾಮೀಣ ಬಡ ವಿದ್ಯಾರ್ಥಿನಿಯರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ದಾನಿಗಳ ನೆರವಿನಿಂದ ಈ ಯೋಜನೆಯನ್ನು ಮುಂದುವರಿಸುತ್ತೇವೆ ಪುಟ್ಟರಾಜ ಪ್ರಾಂಶುಪಾಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಕುವೆಂಪುನಗರ ಮೈಸೂರು
ಉದ್ಘಾಟನೆ ಇಂದು ‘ಪದವಿ ಅಕ್ಷಯ ದಾಸೋಹ’ ಕಾರ್ಯಕ್ರಮವನ್ನು ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಶನಿವಾರ (ಮಾರ್ಚ್ 1) ಬೆಳಿಗ್ಗೆ 11ಕ್ಕೆ ಉದ್ಘಾಟಿಸುವರು. ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅತಿಥಿಯಾಗಿ ಭಾಗವಹಿಸುವರು. ಪ್ರಾಂಶುಪಾಲ ಪುಟ್ಟರಾಜ ಅಧ್ಯಕ್ಷತೆ ವಹಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.