ADVERTISEMENT

ಸುತ್ತೂರು ಜಾತ್ರೆ: 25 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ; ಸಮಗ್ರ ವಿವರ ಇಲ್ಲಿದೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 13:02 IST
Last Updated 12 ಜನವರಿ 2026, 13:02 IST
   

ಸುತ್ತೂರು (ಮೈಸೂರು ಜಿಲ್ಲೆ): ಇಲ್ಲಿನ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದಿಂದ ಜ.15ರಿಂದ 20ರವರೆಗೆ ಆಯೋಜಿಸಲಾಗಿರುವ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ 25 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದಕ್ಕೆ ಪೂರಕವಾಗಿ ಪ್ರಸಾದದ ವ್ಯವಸ್ಥೆ, ಕಾರ್ಯಕ್ರಮಗಳಿಗೆ ವೇದಿಕೆಯನ್ನು ಸಜ್ಜುಗೊಳಿಸಲಾಗುತ್ತಿದೆ.

ಶಿವರಾತ್ರೀಶ್ವರ ಶಿವಯೋಗಿಗಳ ಕರ್ತೃಗದ್ದುಗೆ ಆವರಣದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ಶಾಲೆಯ ಸಮೀಪದ 15 ಎಕರೆ ಜಾಗದಲ್ಲಿ ವಸ್ತುಪ್ರದರ್ಶನ, ಕೃಷಿ ಮೇಳ, ಕಲಾವೈಭವ ಹಾಗೂ ಕಲಾಮೇಳ ಮೊದಲಾದವುಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪೀಠಾಧಿಪತಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಉತ್ಸವ ಜರುಗಲಿದೆ.

ಇಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್‌ ಉತ್ಸವದ ವಿವರ ನೀಡಿದರು. ‘ಪ್ರತಿ ಕಾರ್ಯಕ್ರಮದಲ್ಲೂ ವಿವಿಧ ಮಠಗಳ ಮಠಾಧೀಶರು ಸಾನ್ನಿಧ್ಯ ವಹಿಸುವರು’ ಎಂದು ತಿಳಿಸಿದರು.

ADVERTISEMENT

ಸಚಿವರು, ಶಾಸಕರು ಭಾಗಿ:

ಮೊದಲ ದಿನವಾದ ಜ.15ರಂದು ಸಂಜೆ 4ಕ್ಕೆ ವಸ್ತುಪ್ರದರ್ಶನ, ಕೃಷಿ ಮೇಳ, ಸಾಂಸ್ಕೃತಿಕ ಮೇಳ, ಆರೋಗ್ಯ ತಪಾಸಣಾ ಶಿಬಿರ, ದೋಣಿ ವಿಹಾರ ಉದ್ಘಾಟನೆಗೊಳ್ಳಲಿವೆ. ಗೃಹ ಸಚಿವ ಜಿ. ಪರಮೇಶ್ವರ್, ಸಚಿವರಾದ ಶಿವಾನಂದ ಎಸ್.ಪಾಟೀಲ, ಶರಣಬಸಪ್ಪ ದರ್ಶನಾಪುರ, ಲಕ್ಷ್ಮಿ ಹೆಬ್ಬಾಳಕರ, ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ನೆರವೇರಿಸುವರು. ಸಂಸದ ಜಗದೀಶ್ ಶೆಟ್ಟರ ಅಧ್ಯತೆ ವಹಿಸುವರು. 16ರಂದು ಬೆಳಿಗ್ಗೆ 10ಕ್ಕೆ ಸರ್ವ ಧರ್ಮೀಯರ ಸಾಮೂಹಿಕ ವಿವಾಹ ಉಚಿತವಾಗಿ ನಡೆಯಲಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಉದ್ಘಾಟಿಸುವರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆ ವಹಿಸುವರು’ ಎಂದು ವಿವರ ನೀಡಿದರು.

‘16ರಂದು ಸಂಜೆ 4ಕ್ಕೆ ರಾಜ್ಯಮಟ್ಟದ ಭಜನಾ ಮೇಳ, ದೇಸಿ ಆಟಗಳು, ಸೋಬಾನೆ ಪದ, ರಾಗಿಬೀಸುವುದು ಹಾಗೂ ರಂಗೋಲಿ ಸ್ಪರ್ಧೆ ಉದ್ಘಾಟನೆ ನಡೆಯಲಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಜನಾ ಮೇಳ ಉದ್ಘಾಟಿಸುವರು. 17ರಂದು ಬೆಳಿಗ್ಗೆ 11ಕ್ಕೆ ರಥೋತ್ಸವ ಹಾಗೂ 11.30ಕ್ಕೆ ಧಾರ್ಮಿಕ ಸಭೆ ನಡೆಯಲಿದೆ. ಸಂಸದ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ವಹಿಸುವರು. ಆಹಾರ ಸಚಿವ ಕೆ.ಎಚ. ಮುನಿಯಪ್ಪ ಉದ್ಘಾಟಿಸುವರು. ‘ಚನ್ನಬಸವಣ್ಣನವರ ವಚನ ವ್ಯಾಖ್ಯಾನ’ ಕೃತಿಯನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಬಿಡುಗಡೆ ಮಾಡುವರು’ ಎಂದು ತಿಳಿಸಿದರು.

55ನೇ ದನಗಳ ಪರಿಷೆ:

‘17ರಂದು ಚಿತ್ರಕಲೆ, ಗಾಳಿಪಟ ಸ್ಪರ್ಧೆ ಮತ್ತು 55ನೇ ದನಗಳ ಪರಿಷೆ ಉದ್ಘಾಟನೆ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅಧ್ಯಕ್ಷತೆ ವಹಿಸುವರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಪರಿಷೆ ಉದ್ಘಾಟಿಸುವರು. 18ರಂದು ಬೆಳಿಗ್ಗೆ 10.30ಕ್ಕೆ ಕೃಷಿ ವಿಚಾರಸಂಕಿರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅಧ್ಯಕ್ಷತೆ ವಹಿಸುವರು. ಪ್ರಗತಿಪರ ರೈತರು ಹಾಗೂ ರೈತ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕ್ರಾಪ್‌ ಇಂಪ್ರೂಮೆಂಟ್‌, ಕ್ರಾಪ್ ಪ್ರೊಡಕ್ಷನ್ ಹಾಗೂ ಕ್ರಾಪ್‌ ಪ್ರೊಟೆಕ್ಷನ್’ ಕೃತಿಗಳನ್ನು ಬಿಡುಗಡೆ ಮಾಡಲಾಗುವುದು’ ಎಂದು ವಿವರಿಸಿದರು.

‘ಸಂಜೆ 4.30ಕ್ಕೆ ಕೃಷಿ ವಿಚಾರಸಂಕಿರಣ ಸಮಾರೋಪ ನಡೆಯಲಿದ್ದು, ಕಂದಾಯ ಸಚಿವ ಕೃಷ್ಣ ಭೈರೇಗೌಡ ಅಧ್ಯಕ್ಷತೆ ವಹಿಸುವರು. ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಸಮಾರೋಪ ಭಾಷಣ ಮಾಡುವರು. 19ರಂದು ಬೆಳಿಗ್ಗೆ 10ಕ್ಕೆ ಭಜನಾಮೇಳದ ಸಮಾರೋಪ ಸಮಾರಂಭ ಆಯೋಜನೆಗೊಂಡಿದ್ದು, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಸಮಾರೋಪ ಭಾಷಣ ಮಾಡುವರು’ ಎಂದರು.

19ರಂದು ಕುಸ್ತಿ:

‘19ರಂದು ಮಧ್ಯಾಹ್ನ 2ಕ್ಕೆ ಕುಸ್ತಿ ಪಂದ್ಯಾವಳಿಗೆ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜ್‌ ಚಾಲನೆ ನೀಡುವರು. ಸುತ್ತೂರು ಕೇಸರಿ, ಸುತ್ತೂರು ಕುಮಾರ ಹಾಗೂ ಸುತ್ತೂರು ಕಿಶೋರ ಪ್ರಶಸ್ತಿಗಾಗಿ ಪೈಲ್ವಾನರು ಪೈಪೋಟಿ ನೀಡಲಿದ್ದಾರೆ. ಅಂದು ಸಂಜೆ 5ಕ್ಕೆ ಕೃಷಿ ಮೇಳ ಹಾಗೂ ದನಗಳ ಪರಿಷೆ ಸಮಾರೋಪ ನಡೆಯಲಿದೆ. ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಸಮಾರೋಪ ಭಾಷಣ ಮಾಡುವರು. ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಬಹುಮಾನ ವಿತರಿಸುವರು’ ಎಂದು ತಿಳಿಸಿದರು.

‘20ರಂದು ಬೆಳಿಗ್ಗೆ 10.30ಕ್ಕೆ ಸಾಂಸ್ಕೃತಿಕ ಮೇಳ ಹಾಗೂ ವಸ್ತುಪ್ರದರ್ಶನದ ಸಮಾರೋಪದೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಸಮಾರೋಪ ಭಾಷಣ ಮಾಡಿದರೆ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಧ್ಯಕ್ಷತೆ ವಹಿಸುವರು. ಜನಪ್ರತಿನಿಧಿಗಳು, ವಿವಿಧ ಕ್ಷೇತ್ರದ ಗಣ್ಯರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದರು.

ಸಾಂಸ್ಕೃತಿಕ ಮೇಳ:

‘ಜೆಎಸ್‌ಎಸ್‌ ಅಂತರ ಸಂಸ್ಥೆಗಳ ಸಾಂಸ್ಕೃತಿಕ ಮೇಳದಲ್ಲಿ 3,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವರು. 400ಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆಯಲಿವೆ. ಗದ್ದುಗೆ ಆವರಣದಲ್ಲಿ ಗಾಯನ, ನೃತ್ಯ ಹಾಗೂ ನಾಟಕ ಪ್ರದರ್ಶನ ನಡೆಯಲಿದೆ. ಲಿಂಗ ದೀಕ್ಷೆಯನ್ನೈ ನೀಡಲಾಗುವುದು. ಪ್ರತಿ ದಿನ ಬೆಳಿಗ್ಗೆ ಮೇಗಳಾಪುರ–ಮಾಧವಗೆರೆ, ಸುತ್ತೂರು, ಕೀಳನಪುರ. ಹದಿನಾರು, ಹೊಸಕೋಟ ಹಾಗೂ ಡಣನಾಯಕನಪುರ ಗ್ರಾಮಗಳಲ್ಲಿ ಸ್ನೇಹ–ಸೌಹಾರ್ದ–ಶಾಂತಿ ಪ್ರಾರ್ಥನಾ ಸಂಚಲನದ ಪ್ರಭಾತ್ ಪೇರಿ ನಡೆಯಲಿದೆ. ಶ್ರೀಗಳಿಂದ ಧರ್ಮ ಸಂದೇಶ ಇರುತ್ತದೆ’ ಎಂದು ಮಾಹಿತಿ ನೀಡಿದರು.

ಜಾತ್ರಾ ಮಹೋತ್ಸವ ಸಮಿತಿಯ ಕಾರ್ಯದರ್ಶಿ ಶಿವಕುಮಾರಸ್ವಾಮಿ, ದಾಸೋಹ ಸಮಿತಿಯ ಸಂಚಾಲಕ ಪ್ರೊ.ಸುಬ್ಬಪ್ಪ, ಸುತ್ತೂರು ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಉದಯಶಂಕರ್‌ ಪಾಲ್ಗೊಂಡಿದ್ದರು.

ತಪ್ಪಕ್ಕೆ ‘ಹೊಸತನ’ದ ಸ್ಪರ್ಶ

ಈ ವರ್ಷದ ಜಾತ್ರೆಯಲ್ಲಿ ವಿಶೇಷವಾದ ನೂತನ ತೆಪ್ಪವನ್ನು ಸಿದ್ಧಪಡಿಸಲಾಗಿದೆ. ತೆಪ್ಪದ ಸುತ್ತಲೂ 16 ನಂದಿಗಳನ್ನು ಸ್ಥಾಪಿಸಲಾಗಿದೆ. ಆಕರ್ಷಕ ವಿನ್ಯಾಸದ 8 ಕಂಬಗಳು ಹಾಗೂ ಚಿತ್ರಗಳನ್ನು ಒಳಗೊಂಡ ಭವ್ಯವಾದ ಮಂಟಪವಿದೆ. ಮೋಟಾರ್‌ಚಾಲಿತ ಈ ತೆಪ್ಪಕ್ಕೆ ವಿಶೇಷವಾದ ದೀಪಾಲಂಕಾರವಿದೆ. ಬಾಣಬಿರುಸುಗಳ ಹಿನ್ನೆಲೆಯಲ್ಲಿ ತೆಪ್ಪೋತ್ಸವವು ನೋಡುಗರ ಕಣ್ಮನಸೆಳೆಯಲಿದೆ ಎಂದು ಮಂಜುನಾಥ್‌ ವಿವರ ನೀಡಿದರು.

‘19ರಂದು ತೆಪ್ಪೋತ್ಸವ ಜೊತೆಗೆ ಕಪಿಲಾರತಿಯೂ ನಡೆಯಲಿದೆ’ ಎಂದರು.

ಜಾತ್ರೆಯಲ್ಲಿ ‘ಕಾರ್ಯಕ್ರಮಗಳ ಯಾತ್ರೆ’

  • ಸೋಬಾನೆ ಪದ ಸ್ಪರ್ಧೆಯಲ್ಲಿ 150ಕ್ಕೂ ಹೆಚ್ಚು ತಂಡಗಳು ಭಾಗವಹಿಸಲಿವೆ. ಮಹಿಳೆಯರಿಗೆ ಜ.18ರಂದು ರಾಗಿ ಬೀಸುವ ಸ್ಪರ್ಧೆ ಹಮ್ಮಿಕೊಂಡಿರುವುದು ಈ ಬಾರಿಯ ವಿಶೇಷ.

  • 32ನೇ ರಾಜ್ಯಮಟ್ಟದ ಭಜನಾ ಮತ್ತು ಏಕತಾರಿ ಸ್ಪರ್ಧೆಗಳಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ 750ಕ್ಕೂ ಹೆಚ್ಚು ಪುರುಷ, ಮಹಿಳಾ ಹಾಗೂ ಮಕ್ಕಳ ತಂಡಗಳು ಭಾಗಿ.

  • 16ರಂದು 12ನೇ ಶತಮಾನದ ಶರಣ-ಶರಣೆಯರು ಹಾಗೂ ವಚನಗಳು - ವಿಷಯ ಕುರಿತು ರಸಪ್ರಶ್ನೆ ಸ್ಪರ್ಧೆಯನ್ನು ಮಹಿಳೆಯರಿಗಾಗಿ ಏರ್ಪಡಿಸಲಾಗಿದೆ.

  • ವಸ್ತುಪ್ರದರ್ಶನದಲ್ಲಿ ಕೈಗಾರಿಕಾ ಉತ್ಪನ್ನಗಳು, ಕೈಮಗ್ಗ, ಜವಳಿ, ಗ್ರಾಮೀಣ ಕರಕುಶಲ ಉತ್ಪನ್ನಗಳು, ಸ್ವಸಹಾಯ ಸಂಘಗಳು, ಸ್ತ್ರೀಶಕ್ತಿ ಸಂಘಗಳು ತಯಾರಿಸಿದ ಗೃಹಬಳಕೆ ಉತ್ಪನ್ನಗಳು ಹಾಗೂ ಗುಡಿ ಕೈಗಾರಿಕೆ ವಸ್ತುಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ.

  • ಈ ವರ್ಷ ವಿಶೇಷಾವಾಗಿ ಕೃತಕ ಬುದ್ಧಿಮತ್ತೆ (ಎಐ) ಬಗ್ಗೆ ಮಾಹಿತಿ ನೀಡಲಾಗುವುದು. ಜೆಎಸ್‌ಎಸ್ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಸಿದ್ದಪಡಿಸಿದ 200ಕ್ಕೂ ಹೆಚ್ಚು ಶಿಕ್ಷಣ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಮಾದರಿಗಳು ಇರಲಿವೆ.

  • 18ರಂದು ಮಹಿಳೆಯರಿಗೆ ಕೃಷಿ ರಸಪ್ರಶ್ನೆ ಸ್ಪರ್ಧೆ ಆಯೋಜನೆ.

  • 18ರಂದು 1ರಿಂದ 10ನೇ ತರಗತಿಯ ಜೆಎಸ್ಎಸ್ ಸಂಸ್ಥೆಗಳ ಹಾಗೂ ಇತರ ಶಾಲೆಗಳ ವಿದ್ಯಾರ್ಥಿಗಳಿಗೆ 4 ವಿಭಾಗಗಳಲ್ಲಿ ಚಿತ್ರಕಲಾ ಸ್ಪರ್ಧೆ.

  • 18 ರಂದು ಗಾಳಿಪಟ ಸ್ಪರ್ಧೆ.

  • ಕಲಾಮೇಳದಲ್ಲಿ ರಾಜ್ಯ ಹಾಗೂ ಹೊರ ರಾಜ್ಯ ಕಲಾವಿದರ ಕಲಾಕೃತಿಗಳ ಪ್ರದರ್ಶನ, ಮಾರಾಟ ಹಾಗೂ ಸ್ಥಳದಲ್ಲೇ ಸಾರ್ವಜನಿಕರ ಭಾವಚಿತ್ರ ಬಿಡಿಸಿ ಮಾರುವ ವ್ಯವಸ್ಥೆ ಇರಲಿದೆ.

  • 17ರಂದು ಗ್ರಾಮೀಣ ಪುರುಷರಿಗೆ ಮತ್ತು 18ರಂದು ಮಹಿಳೆಯರು, ಜೆಎಸ್ಎಸ್ ಸಂಸ್ಥೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 17ರ 19ರವರೆಗೆ ದೇಸಿ ಆಟಗಳ ಸ್ಪರ್ಧೆ.