ADVERTISEMENT

ಹಣಕೊಟ್ಟು ಗೌರವ ಡಾಕ್ಟರೇಟ್ ಆರೋಪ: ಪೊಲೀಸರ ದಾಳಿ, ಇಬ್ಬರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 22:13 IST
Last Updated 26 ಸೆಪ್ಟೆಂಬರ್ 2020, 22:13 IST
ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಪಡೆಯಲು ಬಂದವರನ್ನು ಡಿಸಿಪಿ ಎ.ಎನ್.ಪ್ರಕಾಶ್‌ಗೌಡ ಶನಿವಾರ ವಿಚಾರಣೆ ನಡೆಸಿದರು
ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಪಡೆಯಲು ಬಂದವರನ್ನು ಡಿಸಿಪಿ ಎ.ಎನ್.ಪ್ರಕಾಶ್‌ಗೌಡ ಶನಿವಾರ ವಿಚಾರಣೆ ನಡೆಸಿದರು   

ಮೈಸೂರು: ಹಣ ಪಡೆದು ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ ಎಂಬ ಆರೋಪದ ಮೇರೆಗೆ, ಇಲ್ಲಿನ ‘ರುಚಿ ದ ಪ್ರಿನ್ಸ್’ ಹೋಟೆಲ್‌ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ಮೇಲೆ ಶನಿವಾರ ದಾಳಿ ನಡೆಸಿದ ಪೊಲೀಸರು, ಕಾರ್ಯಕ್ರಮ ಆಯೋಜಕರಾದ ನಂಬಿಯಾರ್ ಮತ್ತು ಶ್ರೀನಿವಾಸ್ ಎಂಬುವವರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ.

ಮತ್ತಿಬ್ಬರನ್ನು ವಿಚಾರಣೆ ನಡೆಸಿದ್ದು, ಸ್ಮರಣಿಕೆ ಹಾಗೂ ಪ್ರಮಾಣಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

‘ದಿ ಗಂಗಮ್ಮ ದೇವಿ ಶಕ್ತಿ ಪ್ರೀಠಂ ಟ್ರಸ್ಟ್, ನ್ಯಾಷನಲ್ ಹ್ಯೂಮನ್ ರೈಟ್ಸ್ ಪೀಸ್ ಕೌನ್ಸಿಲ್ ಹಾಗೂ ಇಂಟರ್‌ನ್ಯಾಷನಲ್ ಗ್ಲೋಬಲ್ ಪೀಸ್ ಯೂನಿವರ್ಸಿಟಿ’ ಬ್ಯಾನರ್‌ ಅಡಿ ಆಯೋಜನೆಯಾಗಿದ್ದ ಈ ಕಾರ್ಯಕ್ರಮಕ್ಕೆ, ಮುಖ್ಯ ಅತಿಥಿಯಾಗಿ ಹರಿಹರ ಶಾಸಕ ಎಸ್.ರಾಮಪ್ಪ ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಅನುಮತಿ ಇಲ್ಲದೇ ಆಯೋಜಿಸಲಾಗಿದ್ದು, ಕೋವಿಡ್ ನಿಯಮಗಳ ಉಲ್ಲಂಘನೆ ಮಾಡಿರುವುದಾಗಿ ತಿಳಿಸಿದ ನಂತರ ಅವರು ವಾಪಸ್ ತೆರಳಿದರು. 142 ಮಂದಿ ಗೌರವ ಡಾಕ್ಟರೇಟ್ ಪಡೆಯಲು ಸೇರಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಆದರೆ, ಗೌರವ ಡಾಕ್ಟರೇಟ್ ಪಡೆಯಲು ಬಂದಿದ್ದವರ ಪಟ್ಟಿಯಲ್ಲಿ ಶಾಸಕ ರಾಮಪ್ಪ ಅವರ ಹೆಸರೇ ಮೊದಲಿಗಿತ್ತು. ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಂದಲೂ ಹಲವರು ಗೌರವ ಡಾಕ್ಟರೇಟ್ ಪಡೆಯಲು ಬಂದಿದ್ದರು.

ಸಮಾರಂಭಕ್ಕೆ ಬಂದಿದ್ದ ಬಹುತೇಕ ಮಂದಿ ₹ 20 ಸಾವಿರದಿಂದ ₹ 1 ಲಕ್ಷದವರೆಗೆ ಹಣ ನೀಡಿದ್ದಾಗಿ ತಿಳಿಸಿದ್ದಾರೆ. ಕೆಲವರು ಯಾವುದೇ ಹಣ ನೀಡಿಲ್ಲ ಎಂದು ಹೇಳಿದ್ದಾರೆ. ಹಣ ಕೊಟ್ಟವರ ವಿವರಗಳನ್ನು ಪೊಲೀಸರು ಪಡೆದಿದ್ದಾರೆ.

ಹಣ ನೀಡಿ ಗೌರವ ಡಾಕ್ಟರೇಟ್ ಪಡೆಯಲು ಬಂದಿದ್ದವರು ಪೊಲೀಸರ ದಾಳಿಯಿಂದ ಕಕ್ಕಾಬಿಕ್ಕಿಯಾದರು. ಕೆಲವರು ಸ್ಮರಣಿಕೆ ಹಾಗೂ ಪ್ರಮಾಣಪತ್ರಗಳನ್ನು ನೀಡುವಂತೆ ಪೊಲೀಸರಲ್ಲಿ ಪರಿಪರಿಯಾಗಿ ಕೇಳಿಕೊಂಡರು. ‘ಹಣ ನೀಡಿ ಪಡೆಯುವುದು ಗೌರವ ಡಾಕ್ಟರೇಟ್ ಅಲ್ಲ. ಇದೊಂದು ನಕಲಿ ವಿಶ್ವವಿದ್ಯಾಲಯದಂತೆ ತೋರುತ್ತಿದೆ’ ಎಂದು ಹೇಳಿ ಎಲ್ಲರನ್ನೂ ವಾಪಸ್ ಕಳುಹಿಸಲಾಯಿತು.

ಡಿಸಿಪಿ ಎ.ಎನ್‌.ಪ್ರಕಾಶಗೌಡ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ವಿಜಯನಗರ ಠಾಣೆ ಇನ್‌ಸ್ಪೆಕ್ಟರ್ ಬಾಲಕೃಷ್ಣ ಅವರು ಆಯೋಜಕರಲ್ಲಿ ನಾಲ್ವರನ್ನು ವಶಕ್ಕೆ ಪಡೆದು, ಇಬ್ಬರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಇನ್ನುಳಿದವರು ಪರಾರಿಯಾಗಿದ್ದಾರೆ.

‘ಪ್ರಜಾವಾಣಿ’ ವರದಿ ಆಧರಿಸಿ ದಾಳಿ:ಡಿಸಿಪಿ
‘ಗೌರವ ಡಾಕ್ಟರೇಟ್‌ ಪ್ರದಾನ ಸಮಾರಂಭ ಕುರಿತಾಗಿ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವರದಿ ಆಧರಿಸಿ ದಾಳಿ ನಡೆಸಲಾಯಿತು. ಈ ಹಿಂದೆಯೇ ನಾವೂ ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದೆವು. ಈ ಬಾರಿ ದಾಳಿ ನಡೆಸಿ, ವಂಚನೆ ಪ್ರಕರಣ ದಾಖಲಿಸಲಾಗಿದೆ’ ಎಂದು ಡಿಸಿಪಿ ಡಾ.ಎ.ಎನ್.ಪ್ರಕಾಶ್‌ಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.