ADVERTISEMENT

ಶೂದ್ರರು, ದಲಿತರು ಮಕ್ಕಳಿಗೆ ಇಂಗ್ಲಿಷ್‌ ಶಿಕ್ಷಣ ಕೊಡಿಸಿ: ಕಾಂಚಾ ಐಲಯ್ಯ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 13:26 IST
Last Updated 14 ಅಕ್ಟೋಬರ್ 2025, 13:26 IST
   

ಮೈಸೂರು: 'ಶೂದ್ರರು, ದಲಿತರು ಎಚ್ಚೆತ್ತು ಇಂಗ್ಲಿಷ್‌ ಮಾಧ್ಯಮದಲ್ಲಿಯೇ ಮಕ್ಕಳಿಗೆ ಶಿಕ್ಷಣ ಕೊಡಿಸಿದಾಗ ಮಾತ್ರ ಹಿಂದೂ ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆಯಿಂದ ವಿಮೋಚನೆ ಪಡೆಯಲು ಸಾಧ್ಯ' ಎಂದು ಚಿಂತಕ ಕಾಂಚಾ ಐಲಯ್ಯ ಪ್ರತಿಪಾದಿಸಿದರು.

ನಗರದಲ್ಲಿ ಮಂಗಳವಾರ ಆರಂಭವಾದ ಬೌದ್ಧ ಮಹಾ ಸಮ್ಮೇಳನದಲ್ಲಿ ಮಾತನಾಡಿ, ‘‘ಲೇಖಕರಾದ ಯು.ಆರ್.ಅನಂತಮೂರ್ತಿ, ಗಿರೀಶ್‌ ಕಾರ್ನಾಡ್‌ ಕನ್ನಡ ಭಾಷೆಯ ಉಳಿವಿಗೆ ಎಲ್ಲ ಮಕ್ಕಳು ಮಾತೃಭಾಷೆಯಲ್ಲೇ ಓದಬೇಕೆಂದಿದ್ದರು. ಅವರೆದುರೇ ಆಕ್ಷೇಪ ವ್ಯಕ್ತಪಡಿಸಿದ್ದೆ. ಸೇವಕರಾಗಿ ಇರಿಸುವ ಹುನ್ನಾರವೆಂದು ಹೇಳಿದ್ದೆ. ಶೋಷಿತ ಸಮುದಾಯಗಳಿಗೆ ಇಂಗ್ಲಿಷ್‌ ಶಿಕ್ಷಣ ನೀಡಿದ್ದೇ ಆದಲ್ಲಿ, ಅವರು ರಾಜಕೀಯ ಅಧಿಕಾರಕ್ಕೆ ಬಂದೇ ಬರುತ್ತಾರೆ’ ಎಂದರು.

‘ಬೌದ್ಧ ಧರ್ಮವೂ ಪಾಳಿ– ಪ್ರಾಕೃತ ಬದಲು ಇಂಗ್ಲಿಷ್‌ನಲ್ಲಿಯೇ ಧಾರ್ಮಿಕ ಆಚರಣೆ ಹಾಗೂ ತತ್ವಗಳನ್ನು ಪಸರಿಸಬೇಕು. ಅಂಬೇಡ್ಕರ್‌ ಬರೆದದ್ದೂ ಇಂಗ್ಲಿಷ್‌ನಲ್ಲೇ. ಬೌದ್ಧ ವಿಹಾರಗಳಲ್ಲಿ ಇಂಗ್ಲಿಷ್‌ ಕಲಿಕೆ, ಅಂಬೇಡ್ಕರ್ ಓದು ನಡೆಯಬೇಕು’ ಎಂದು ಹೇಳಿದರು.

ADVERTISEMENT

‘ಬೌದ್ಧ ಧರ್ಮ ಭಾರತದಲ್ಲಿ ಇದ್ದಿದ್ದರೆ, ಆರ್‌ಎಸ್‌ಎಸ್‌– ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ. ಶೂದ್ರರು, ಶೋಷಿತರು ಬಡವರಾಗಿ ಇರುತ್ತಿರಲಿಲ್ಲ. ಚೀನಾ, ಜಪಾನ್, ಕೊರಿಯಾ ಮುಂದುವರಿದಿವೆ. ‘ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿ ಸಾಯಲಾರೆ’ ಎಂದು ಹೇಳಿ ಅಂಬೇಡ್ಕರ್‌ ಬೌದ್ಧ ಧರ್ಮ ಸ್ವೀಕರಿಸಿದ್ದೇಕೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಗೌತಮ ಬುದ್ಧ ಯುದ್ಧಗಳನ್ನು ತಪ್ಪಿಸಿದ, ಕೃಷಿ ಕ್ರಾಂತಿ ನಡೆಸಿದ, ಸಂಘದ ವ್ಯವಸ್ಥೆಯಲ್ಲಿ ಮಹಿಳೆಯರನ್ನೂ ಸೇರಿಸಿ ಸಮಾನತೆ ನೀಡಿದ. ಅವನ ಕ್ರಾಂತಿಕಾರಕ ಹೆಜ್ಜೆಗಳಿಂದ ಪ್ರಾಚೀನ ಭಾರತದ ಅರ್ಥ ವ್ಯವಸ್ಥೆಯು ಶ್ರೀಮಂತವಾಗಿತ್ತು’ ಎಂದರು.

‘ಕೊಂದವರು ಉಳಿಯುವುದಿಲ್ಲ’

‘ಅಸಮಾನತೆಯನ್ನು ಜೀವಂತವಾಗಿರಿಸುತ್ತಿರುವ ಆರ್‌ಎಸ್‌ಎಸ್‌ ಟೀಕಿಸುತ್ತಿರುವುದರಿಂದ ನನ್ನನ್ನು ಕೊಲ್ಲುವುದಾಗಿ ಹೇಳುತ್ತಾರೆ. ಇತಿಹಾಸದಲ್ಲಿ ಕೊಂದವರ ಹೆಸರು ಉಳಿಯುವುದಿಲ್ಲ. ಕೊಲೆಯಾದವರು ಮಹಾತ್ಮರಾಗಿದ್ದಾರೆ’ ಎಂದು ಕಾಂಚಾ ಐಲಯ್ಯ ಹೇಳಿದರು.

‘ಬ್ರಾಹ್ಮಣರಿಗಿಂತಲೂ ಶೂದ್ರ ಸಮುದಾಯಗಳು ದಲಿತರನ್ನು ಗೌರವದಿಂದ ಕಾಣಬೇಕು. ಆಗ ಮಾತ್ರವೇ ಸಾಂಸ್ಕೃತಿಕ ಯಜಮಾನಿಕೆ ಕೊನೆಯಾಗಣಿಸಬಹುದು’ ಎಂದರು.

‘ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ನಿಜವಾದ ಬೌದ್ಧ. ತಮ್ಮತ್ತ ಶೂ ತೂರಿದವನ ಬಗ್ಗೆ ಕೋಪಗೊಳ್ಳದೇ ಕ್ಷಮಿಸಿದರು. ಯಾವುದೇ ಕ್ರಮ ಕೈಗೊಳ್ಳದಂತೆ ಸೂಚಿಸಿದರು. ಇದಲ್ಲವೇ ಬುದ್ಧ ಹಾಗೂ ಅಂಬೇಡ್ಕರ್‌ ಮಾರ್ಗ’ ಎಂದು ಹೇಳಿದರು. ಅದಕ್ಕೆ ಸಭೆಯ ಎಲ್ಲರೂ ಎದ್ದು ನಿಂತು ಚಪ್ಪಾಳೆ ಮೂಲಕ ಗೌರವ ಸಲ್ಲಿಸಿದರು.

‘ರಾಹುಲ್ ಹೋರಾಟ’

‘ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರಿಗಿಂತಲೂ ರಾಹುಲ್ ಗಾಂಧಿ ಹೆಚ್ಚು ಓದಿಕೊಂಡಿದ್ದಾರೆ. ಸಂವಿಧಾನ ರಕ್ಷಣೆ, ಜನರ ಹಕ್ಕುಗಳಿಗೆ ಹೋರಾಡುತ್ತಿದ್ದಾರೆ. ಸಾಮಾನ್ಯ ಟೀ ಶರ್ಟ್‌ ಧರಿಸಿ, ವಿಚಾರಗಳಿಂದ ಯುವ ಸಮೂಹದ ಮೇಲೆ ಪ್ರಭಾವ ಬೀರುತ್ತಿದ್ದಾರೆ’ ಎಂದು ಕಾಂಚಾ ಐಲಯ್ಯ ಹೇಳಿದರು.

‘140 ವರ್ಷದ ಕಾಂಗ್ರೆಸ್‌ ಇತಿಹಾಸದಲ್ಲಿ ಮಲ್ಲಿಕಾರ್ಜುನ ಖರ್ಗೆ ದಲಿತ ಸಮುದಾಯದ ಎರಡನೇ ಅಧ್ಯಕ್ಷರಾಗಿದ್ದಾರೆ. ಅವರ ಇಂಗ್ಲಿಷ್‌ ಮತ್ತು ಹಿಂದಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗಿಂತಲೂ ಸುಂದರವಾಗಿದೆ. ರಾಜ್ಯಸಭೆಯಲ್ಲಿ ಒಂದು ಮಾತಿನಿಂದಲೇ ಎಲ್ಲರನ್ನು ನಡುಗಿಸುವ ಶಕ್ತಿ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.