ADVERTISEMENT

ಭೂ ಸುಧಾರಣೆ ಕಾಯ್ದೆ | ‘ತಿದ್ದುಪಡಿ: ರೈತ ಕುಲಕ್ಕೆ ಗಂಡಾಂತರ’

ಒಡನಾಡಿಯಲ್ಲಿ ರೈತ ಹುತಾತ್ಮ ದಿನಾಚರಣೆ; ವಿಚಾರಗೋಷ್ಠಿ–ಸಂವಾದ

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 16:16 IST
Last Updated 21 ಜುಲೈ 2020, 16:16 IST
ಮೈಸೂರಿನ ಒಡನಾಡಿ ಸ್ವಯಂ ಸೇವಾ ಸಂಸ್ಥೆಯಲ್ಲಿ ಮಂಗಳವಾರ 40ನೇ ರೈತ ಹುತ್ಮಾತ ದಿನದ ಅಂಗವಾಗಿ ನಡೆದ ವಿಚಾರಗೋಷ್ಠಿ ಮತ್ತು ಸಂವಾದಕ್ಕೆ ಬಡಗಲಪುರ ನಾಗೇಂದ್ರ ಚಾಲನೆ ನೀಡಿದರು
ಮೈಸೂರಿನ ಒಡನಾಡಿ ಸ್ವಯಂ ಸೇವಾ ಸಂಸ್ಥೆಯಲ್ಲಿ ಮಂಗಳವಾರ 40ನೇ ರೈತ ಹುತ್ಮಾತ ದಿನದ ಅಂಗವಾಗಿ ನಡೆದ ವಿಚಾರಗೋಷ್ಠಿ ಮತ್ತು ಸಂವಾದಕ್ಕೆ ಬಡಗಲಪುರ ನಾಗೇಂದ್ರ ಚಾಲನೆ ನೀಡಿದರು   

ಮೈಸೂರು: ‘ಬಂಡವಾಳಶಾಹಿ ಪರ, ರೈತ–ಜನ ವಿರೋಧಿ ನೀತಿಗಳನ್ನು ಜಾರಿಗೆ ತಂದಿರುವ ಸರ್ಕಾರ, ರೈತರು–ಶ್ರಮಿಕರನ್ನು ಈ ಭೂಮಿಯಿಂದಲೇ ಪಲ್ಲಟಗೊಳಿಸುವ ಪ್ರಕ್ರಿಯೆಗೆ ನಾಂದಿಯಾಡಿದೆ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆತಂಕ ವ್ಯಕ್ತಪಡಿಸಿದರು.

40ನೇ ರೈತ ಹುತ್ಮಾತ ದಿನದ ಅಂಗವಾಗಿ ಮೈಸೂರಿನ ಒಡನಾಡಿ ಸಂಸ್ಥೆಯಲ್ಲಿ ಮಂಗಳವಾರ ನಡೆದ ರೈತ ವಿರೋಧಿ ಕಾನೂನುಗಳ ಪರಿಣಾಮಗಳು ಕುರಿತ ವಿಚಾರಗೋಷ್ಠಿ ಮತ್ತು ಸಂವಾದಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ವಿದ್ಯುತ್‌ಚ್ಛಕ್ತಿ, ಎಪಿಎಂಸಿ, ಭೂ ಸುಧಾರಣೆ ಈ ಮೂರು ಕಾಯ್ದೆಗಳ ತಿದ್ದುಪಡಿಯೂ ರೈತ ಸಂಸ್ಕೃತಿ ದಮನ ಮಾಡುವ, ಗ್ರಾಮೀಣ ಆರ್ಥಿಕತೆ ಕುಂದಿಸುವ ಪ್ರಕ್ರಿಯೆ. ಇದರ ವಿರುದ್ಧ ಪ್ರಬಲ ಹೋರಾಟ ರೂಪಿಸದಿದ್ದರೆ ಉಳಿಗಾಲವಿಲ್ಲ’ ಎಂದು ಎಚ್ಚರಿಸಿದರು.

ಚಿಂತಕ ಕೆ.ಪಿ.ಸುರೇಶ್ ರೈತ ವಿರೋಧಿ ಕಾನೂನುಗಳು ವಿಚಾರ ಕುರಿತು ಮಾತನಾಡಿ, ‘ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಅಮಾನವೀಯ. ಅನ್ನ ತಿನ್ನುವ ಯಾವ ಮನುಷ್ಯ ಮಾಡಲಾಗದ ಕೃತ್ಯ. ಈ ತಿದ್ದುಪಡಿಗಳು ರೈತ ಸಂಕುಲಕ್ಕೆ ಗಂಡಾಂತರ ತಂದಿವೆ’ ಎಂದರು.

ADVERTISEMENT

‘ರಾಜ್ಯದಲ್ಲಿ 79 ಎ ಮತ್ತು ಬಿ, ಸಿ ಅಡಿ ಅಕ್ರಮವಾಗಿ ಭೂಮಿ ಖರೀದಿಸಿದ 14 ಸಾವಿರ ಪ್ರಕರಣಗಳಿವೆ. 6 ಸಾವಿರ ಎಕರೆ ಬೆಂಗಳೂರು ಸುತ್ತಮುತ್ತ ಖರೀದಿಯಾಗಿದೆ. ಒಂದು ಎಕರೆಗೆ ಸರಾಸರಿ ₹ 2 ಕೋಟಿ ಎಂದು ಲೆಕ್ಕ ಹಾಕಿದರೂ, ₹ 1 ಲಕ್ಷ ಕೋಟಿ ಹಗರಣ ನಡೆದಿದೆ’ ಎಂದು ಹೇಳಿದರು.

ಹಿರಿಯ ಹೋರಾಟಗಾರ ಬೊಕ್ಕಳ್ಳಿ ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ದಸಂಸ ಸಂಚಾಲಕರಾದ ಬೆಟ್ಟಯ್ಯಕೋಟೆ, ಅಲಗೂಡು ಶಿವಕುಮಾರ್, ಮಂಡ್ಯ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆಂಪೂಗೌಡ, ಮೈಸೂರು ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ತಾಲ್ಲೂಕು ಅಧ್ಯಕ್ಷ ಪಿ.ಮರಂಕಯ್ಯ ಉಪಸ್ಥಿತರಿದ್ದರು.

ಸ್ವರಾಜ್ಯ ಇಂಡಿಯಾದ ಮೈಸೂರು ತಾಲ್ಲೂಕು ಅಧ್ಯಕ್ಷ ಎಚ್.ಎ.ನಂಜುಂಡಸ್ವಾಮಿ ಸಂವಾದದ ಅಧ್ಯಕ್ಷತೆ ವಹಿಸಿದ್ದರು. ಅಭಿರುಚಿ ಗಣೇಶ್, ರೈತ ಮುಖಂಡ ಪ್ರಸನ್ನ ಎನ್.ಗೌಡ, ಮಧು, ದಸಂಸ ಶಂಭುಲಿಂಗಯ್ಯ, ಚೋರನಹಳ್ಳಿ ಶಿವಣ್ಣ, ಚಿಂತಕ ಉಗ್ರ ನರಸಿಂಹೇಗೌಡ, ಚುಂಚನಹಳ್ಳಿ ಮಲ್ಲೇಶ್, ಒಡನಾಡಿ ಸೇವಾ ಸಂಸ್ಥೆಯ ಸ್ಟ್ಯಾನ್ಲಿ-ಪರಶು, ಮಂಡಕಳ್ಳಿ ಮಹೇಶ್, ದಸಂಸ ತಾಲ್ಲೂಕು ಅಧ್ಯಕ್ಷ ಕಲ್ಲಹಳ್ಳಿ ಕುಮಾರ್ ಭಾಗವಹಿಸಿದ್ದರು.

ಎನ್.ಪುನೀತ್ ಸಂವಾದ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.