ADVERTISEMENT

ಕ್ರೈಸ್ತ ಧರ್ಮ ಮಾರುಕಟ್ಟೆಯ ಸರಕೇ? ಪ್ರತಾಪ ಸಿಂಹ

ಮೋಸದ ಮತಾಂತರ ತಡೆಯುವುದೇ ಮತಾಂತರ ನಿಷೇಧ ಕಾಯ್ದೆಯ ಉದ್ದೇಶ: ಮೈಸೂರು ಸಂಸದ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2021, 17:10 IST
Last Updated 29 ಡಿಸೆಂಬರ್ 2021, 17:10 IST
ಪ್ರತಾಪ ಸಿಂಹ
ಪ್ರತಾಪ ಸಿಂಹ   

ಮೈಸೂರು: ‘ಕ್ರೈಸ್ತಧರ್ಮ ಮಾರುಕಟ್ಟೆಯ ಸರಕೇ? ನಿಮ್ಮ ಧರ್ಮವನ್ನು ಒಂದು ಮಾರುಕಟ್ಟೆಯ ಸರಕು ಆಗಿಸಬೇಡಿ. ಮೋಸದ ಮತಾಂತರ ತಡೆಯುವುದೇ ಮತಾಂತರ ನಿಷೇಧ ಕಾಯ್ದೆಯ ಉದ್ದೇಶ’ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.

ಮೈಸೂರಿನಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ‘ಜನರನ್ನು ಮಂಗ ಮಾಡಿ ಮತಾಂತರಿಸುವುದಕ್ಕೆ ನಮ್ಮ ವಿರೋಧವಿದೆ. ಯಾವುದೋ ಒಂದು ಉತ್ಪನ್ನ ಹೆಚ್ಚು ಮಾರಾಟವಾಗಲು ವಿವಿಧ ತಂತ್ರಗಳನ್ನು ಅನುಸರಿಸುವಂತೆ, ನಿಮ್ಮ ಧರ್ಮವನ್ನು ತಂತ್ರಗಾರಿಕೆಯಿಂದ ಪ್ರಚಾರ ಮಾಡಬೇಡಿ’ ಎಂದು ಮತಾಂತರ ನಿಷೇಧ ಕಾಯ್ದೆ ವಿರೋಧಿಸುತ್ತಿರುವವರ ಮೇಲೆ ಹರಿಹಾಯ್ದರು.

‘ನಾವು ಕ್ರೈಸ್ತರ ವಿರುದ್ಧ ನಿಂತಿಲ್ಲ. ಆದರೆ ಮೋಸದ ಮತಾಂತರವನ್ನು ವಿರೋಧಿಸುತ್ತೇವೆ. ಏಸುವನ್ನು ಪ್ರಾರ್ಥಿಸಿದರೆ ರೋಗ ಗುಣವಾಗುತ್ತದೆ ಎಂದು ಜನರನ್ನು ನಂಬಿಸುತ್ತೀರಿ. ಹಾಗಾದರೆ ನೀವು ಎಲ್ಲೂ ಆಸ್ಪತ್ರೆ ಕಟ್ಟಬೇಡಿ. ಎಲ್ಲ ಕಡೆ ಏಸುವಿನ ಮಂದಿರ ಕಟ್ಟಿ. ಕೇವಲ ಏಸುವಿನ ಪ್ರಾರ್ಥನೆಯಿಂದ ಮಾತ್ರ ರೋಗ ಗುಣವಾಗುತ್ತದೆ ಎಂಬುದನ್ನು ಸಾಬೀತುಪಡಿಸಿ’ ಎಂದು ಸವಾಲು ಹಾಕಿದರು.

ADVERTISEMENT

‘ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿ, ಇನ್ನೇನು ಗುಣಮುಖನಾಗುತ್ತಾನೆ ಎನ್ನುವಷ್ಟರಲ್ಲಿ ಏಸುವಿನ ಪ್ರತಿಮೆ ಬಳಿ ಕರೆದೊಯ್ದು ಪ್ರಾರ್ಥಿಸುವಂತೆ ಹೇಳುತ್ತೀರಿ. ಏಸುವಿನಿಂದಾಗಿಯೇ ರೋಗ ಗುಣವಾಗಿದೆ ಎಂಬ ತಪ್ಪುಕಲ್ಪನೆ ಮೂಡಿಸುವ ಕೆಲಸ ಮಾಡುತ್ತಿದ್ದೀರಿ. ಅಂತಹ ನಾಟಕ ಇನ್ನು ನಡೆಯದು’ ಎಂದು ಕಿಡಿಕಾರಿದರು.

‘ಯೂರೋಪಿನಲ್ಲಿ ಕ್ರೈಸ್ತಧರ್ಮ ನೆಲೆ ಕಳೆದುಕೊಂಡು ಎಷ್ಟೋ ವರ್ಷಗಳು ಆಗಿವೆ. ಅಲ್ಲಿ ಚರ್ಚ್‌ಗಳಿಗೆ ಯಾರೂ ಹೋಗುತ್ತಿಲ್ಲ. ಚರ್ಚ್‌ಗಳನ್ನು ಮಾರಾಟಕ್ಕೆ ಇಡಲಾಗಿದೆ. ಆದ್ದರಿಂದ ಕ್ರೈಸ್ತ ಮಿಷನರಿಗಳು ಭಾರತ ಒಳಗೊಂಡಂತೆ ಇತರ ದೇಶಗಳಲ್ಲಿ ಬಂದು ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿವೆ’ ಎಂದು ದೂರಿದರು.

ಮತಾಂತರ ನಿಷೇಧ ಕಾಯ್ದೆ ವಿರೋಧಿಸಲು ವಿಶ್ವನಾಥ್ ಕರೆ

ಮೈಸೂರು: ‘ಮಠಾಧೀಶರು ಹಾಗೂ ಧರ್ಮಾಧಿಕಾರಿಗಳು ಮತಾಂತರ ನಿಷೇಧ ಕಾಯ್ದೆಯನ್ನು ಖಂಡಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್ ವಿಶ್ವನಾಥ್ ಒತ್ತಾಯಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿಗಳ ಒಕ್ಕೂಟವು ಮಾನಸಗಂಗೋತ್ರಿಯಲ್ಲಿ ಬುಧವಾರ ಏರ್ಪಡಿಸಿದ್ದ ಕುವೆಂಪು ಜನ್ಮದಿನಾಚರಣೆಯಲ್ಲಿ ಸರ್ವಧರ್ಮಗಳ ಧರ್ಮಾಧಿಕಾರಿಗಳ ಸಮ್ಮುಖದಲ್ಲಿ ಅವರು ಮಾತನಾಡಿದರು.

‘ವಿದೇಶಿಯರನ್ನು ಹಾಗೂ ಬೇರೆ ಧರ್ಮದವರವನ್ನು ಮದುವೆ ಮಾಡಿಕೊಂಡು ಬಂದವರಿಗೆ ಲಿಂಗಧಾರಣೆ ಮಾಡುವುದು ಮತಾಂತರದಂತೆಯೇ. ಕಾಯ್ದೆ ಜಾರಿಗೆ ಬಂದರೆ ಈ ರೀತಿ ಲಿಂಗಧಾರಣೆ ಮಾಡುವ ಸ್ವಾಮೀಜಿಗಳನ್ನು ಜೈಲಿಗೆ ಕಳುಹಿಸುತ್ತಾರೆಯೇ’ ಎಂದು ಪ್ರಶ್ನಿಸಿದರು.

‘ಜಾತಿಗೊಂದು ಮಠ ಕಟ್ಟಿಕೊಂಡಿರುವ ಮಠಾಧೀಶರು ಕಾಯ್ದೆ ಬಗ್ಗೆ ಮಾತನಾಡುತ್ತಿಲ್ಲ. ಕ್ರೈಸ್ತ ಹಾಗೂ ಮುಸ್ಲಿಮರು ಹೆಚ್ಚಿರುವ ದೇಶಗಳಲ್ಲಿ ಲಕ್ಷಾಂತರ ಭಾರತೀಯರಿದ್ದರೂ, ನಮ್ಮಲ್ಲಿರುವ ಕ್ರೈಸ್ತರನ್ನು, ಮುಸ್ಲಿಮರನ್ನು ಸಹಿಸಿಕೊಳ್ಳದಿರುವುದು ಸರಿಯಲ್ಲ’ ಎಂದು ಪ್ರತಿಪಾದಿಸಿದರು.

‘ಮುಸ್ಲಿಮರ ಬಳಿಕ ಹಿಂದುತ್ವ ಬ್ರಿಗೇಡ್‌ನ ಗುರಿ ಕ್ರೈಸ್ತರು’

ನವದೆಹಲಿ: ಮುಸ್ಲಿಮರ ಬಳಿಕ ಹಿಂದುತ್ವ ಬ್ರಿಗೇಡ್‌ ಕ್ರೈಸ್ತರನ್ನು ಗುರಿ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಬುಧವಾರ ಆರೋಪಿಸಿದ್ದಾರೆ.

ನೊಬೆಲ್ ಪ್ರಶಸ್ತಿ ವಿಜೇತೆ ಮದರ್ ತೆರೆಸಾ ಮಿಷನರೀಸ್ ಆಫ್ ಚಾರಿಟಿ (ಎಂಒಸಿ) ಖಾತೆ ನವೀಕರಣವನ್ನು ನಿರಾಕರಿಸುವ ಮೂಲಕ ಬಡವರು ಹಾಗೂ ಉತ್ತಮ ಸೇವೆ ಮಾಡುತ್ತಿರುವ ಸರ್ಕಾರೇತರ ಸಂಸ್ಥೆಯ (ಎನ್‌ಜಿಎ) ಮೇಲೆ ದಾಳಿ ಮಾಡಿದೆ ಎಂದು ಆರೋಪಿಸಿದ್ದಾರೆ.

ಮುಖ್ಯ ಸುದ್ದಿ ವಾಹಿನಿಗಳು ಈ ಕುರಿತುವರದಿ ಮಾಡದಿರುವುದು ಚಿದಂಬರಂ ಆಕ್ರೋಶಕ್ಕೆ ಕಾರಣವಾಗಿದೆ. ಇದು ನಿಜಕ್ಕೂ ಅವಮಾನಕರ ಎಂದು ಹೇಳಿದ್ದಾರೆ.

ಕೋಲ್ಕತ್ತ, ಪಶ್ಚಿಮ ಬಂಗಾಳದಲ್ಲಿ ಮಿಷನರೀಸ್ ಆಫ್ ಚಾರಿಟಿಗೆ ಭವಿಷ್ಯದ ವಿದೇಶ ದೇಣಿಗೆ ನಿರಾಕರಿಸಿರುವುದು ಆಶ್ಚರ್ಯಕರವಾದದ್ದೇನೂ ಇಲ್ಲ. ಇದು ಭಾರತದಲ್ಲಿ ಬಡವರು ಹಾಗೂ ದಲಿತರ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ನೊಬೆಲ್ ಪ್ರಶಸ್ತಿ ವಿಜೇತೆ ಮದರ್ ತೆರೆಸಾ ಅವರ ಸ್ಮರಣೆಗೆ ಆದ ದೊಡ್ಡ ಅವಮಾನ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.