ADVERTISEMENT

ಮಾದಕವಸ್ತು ವಿರುದ್ಧ ಜಾಗೃತಿ

ಜಿಲ್ಲಾ ಅಥ್ಲೆಟಿಕ್ಸ್‌ ಅಸೋಸಿಯೇಷನ್‌ ಆಯೋಜನೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 8:50 IST
Last Updated 29 ಡಿಸೆಂಬರ್ 2025, 8:50 IST
ಮೈಸೂರಿನ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಭಾನುವಾರ 60ನೇ ರಾಜ್ಯ ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್‌ ಸ್ಪರ್ಧೆಯ 16 ವರ್ಷದೊಳಗಿನ ಬಾಲಕಿಯರ 2 ಕಿ.ಮೀ ಓಟ ವಿಭಾಗದಲ್ಲಿ ವಿಜೇತರಾದವರಿಗೆ ಶಾಸಕ ಜಿ.ಟಿ.ದೇವೇಗೌಡ ಹಾಗೂ ಕೆ.ಹರೀಶ್‌ ಗೌಡ ಬಹುಮಾನ ವಿತರಿಸಿದರು
ಮೈಸೂರಿನ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಭಾನುವಾರ 60ನೇ ರಾಜ್ಯ ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್‌ ಸ್ಪರ್ಧೆಯ 16 ವರ್ಷದೊಳಗಿನ ಬಾಲಕಿಯರ 2 ಕಿ.ಮೀ ಓಟ ವಿಭಾಗದಲ್ಲಿ ವಿಜೇತರಾದವರಿಗೆ ಶಾಸಕ ಜಿ.ಟಿ.ದೇವೇಗೌಡ ಹಾಗೂ ಕೆ.ಹರೀಶ್‌ ಗೌಡ ಬಹುಮಾನ ವಿತರಿಸಿದರು   

ಮೈಸೂರು: ಮೈ ಕೊರೆಯುವ ಚಳಿಯಲ್ಲೂ ಬಿಸಿ ಉಸಿರನ್ನು ಹೊಮ್ಮಿಸುತ್ತಲೇ ಮುನ್ನುಗ್ಗಿದ ಸ್ಪರ್ಧಿಗಳು ವಿವಿಧ ವಿಭಾಗಗಳಲ್ಲಿ ಕ್ರಾಸ್ ಕಂಟ್ರಿ ಓಟವನ್ನು ಪೂರೈಸಿ ಸಂಭ್ರಮಿಸಿದರು. ಜತೆಗೆ ‘ಡ್ರಗ್ಸ್‌ ಬೇಡ, ಕ್ರೀಡೆ ಬೇಕು’ ಎಂಬ ಘೋಷಣೆಯ ಜಾಗೃತಿ ಓಟವನ್ನೂ ನಡೆಸಿ ಗಮನಸೆಳೆದರು.

ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಅಕಾಡೆಮಿ ಟ್ರಸ್ಟ್‌ನಿಂದ ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಭಾನುವಾರ 400ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಓಟದಲ್ಲಿ ವಿಜೇತರಾದ ಆರು ಮಂದಿಗೆ (ಪ್ರತಿ ವಿಭಾಗದಲ್ಲಿ) ನಗದು ಬಹುಮಾನ ನೀಡಲಾಯಿತು.

ಅಂತರರಾಷ್ಟ್ರೀಯ ಅಥ್ಲೀಟ್‌ಗಳಾದ ಕೆ.ಆರ್‌.ಸತ್ಯನಾರಾಯಣ, ಎಚ್‌.ಎನ್‌.ಆನಂದ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು. 

ADVERTISEMENT

ಅಧ್ಯಕ್ಷತೆ ದೈಹಿಕ ಶಿಕ್ಷಣ ಶಿಕ್ಷಕರ ಅಕಾಡೆಮಿ ಟ್ರಸ್ಟ್ ಮೈಸೂರು ಘಟಕದ ಅಧ್ಯಕ್ಷ ಸಿ.ಕೃಷ್ಣ, ‘ಮೈಸೂರು ವಿ.ವಿಯು ಆರ್ಥಿಕವಾಗಿ ಬಹಳ ಶೋಚನೀಯ ಸ್ಥಿತಿಯಲ್ಲಿದ್ದು, ಕ್ರೀಡಾ ಚಟುವಟಿಕೆಗೆ ಹಿಂದಿನಂತೆ ಪ್ರೋತ್ಸಾಹ ದೊರೆಯುತ್ತಿಲ್ಲ. ವಿದ್ಯಾರ್ಥಿಗಳು ಸ್ವಂತ ಖರ್ಚಿನಲ್ಲಿ ಪಾಲ್ಗೊಳ್ಳುವ ಅನಿವಾರ್ಯತೆ ಇದೆ. ಸರ್ಕಾರ ಸೂಕ್ತ ಅನುದಾನ ನೀಡಿ ಪಠ್ಯೇತರ ಚಟುವಟಿಕೆಗೆ ಪ್ರೋತ್ಸಾಹಿಸಬೇಕು. ಶಾಸಕರು ಈ ಬಗ್ಗೆ ಕ್ರಮ ವಹಿಸಬೇಕು’ ಎಂದು ಕೋರಿದರು.

ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್, ಜಿಲ್ಲಾ ಅಥ್ಲೆಟಿಕ್ ಅಸೋಷಿಯೇಷನ್ (ಎಂಡಿಎಎ) ಅಧ್ಯಕ್ಷ ಎಸ್.ಸೋಮಶೇಖರ್, ಸ್ವಾಗತ ಸಮಿತಿ ಚೇರ್ಮನ್‌ ಅಭಿಲಾಷ್‌ ನಾಯರ್‌, ಕಾರ್ಯದರ್ಶಿ ಬಿ.ಶ್ರೀಕಾಂತ್, ಖಜಾಂಚಿ ಎಂ.ಉಮೇಶ್ ಹಾಜರಿದ್ದರು.

‘ಕ್ರೀಡೆಯಿಂದ ಶಿಕ್ಷಣದಲ್ಲಿ ಯಶಸ್ಸು’ ‘ಶಿಕ್ಷಣದಲ್ಲಿ ಯಶಸ್ಸು ಪಡೆಯಲು ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಅತ್ಯಗತ್ಯ’ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು. ಬಹುಮಾನ ವಿತರಿಸಿದ ಅವರು ‘ಕ್ರೀಡೆಯಲ್ಲಿ ಹಲವು ಅವಕಾಶವಿದ್ದು ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಪ್ರೋತ್ಸಾಹ ನೀಡಬೇಕು’ ಎಂದರು. ಶಾಸಕ ಕೆ.ಹರೀಶ್‌ಗೌಡ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.