ADVERTISEMENT

ಮೈಸೂರು | ಜನವಿರೋಧಿ ಕೇಂದ್ರ ಬಜೆಟ್: ಸಿಐಟಿಯು ಸದಸ್ಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2025, 16:06 IST
Last Updated 6 ಫೆಬ್ರುವರಿ 2025, 16:06 IST
ಮೈಸೂರಿನ ಹಳೇ ಜಿಲ್ಲಾಧಿಕಾರಿ ಕಚೇರಿ ಎದುರು ಕೇಂದ್ರ ಸರ್ಕಾರ ಬಜೆಟ್‌ ಜನವಿರೋಧಿ ಎಂದು ಖಂಡಿಸಿ ಸಿಐಟಿಯು ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ
ಮೈಸೂರಿನ ಹಳೇ ಜಿಲ್ಲಾಧಿಕಾರಿ ಕಚೇರಿ ಎದುರು ಕೇಂದ್ರ ಸರ್ಕಾರ ಬಜೆಟ್‌ ಜನವಿರೋಧಿ ಎಂದು ಖಂಡಿಸಿ ಸಿಐಟಿಯು ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ   

ಮೈಸೂರು: ಕೇಂದ್ರ ಸರ್ಕಾರ ಬಜೆಟ್‌ ಜನವಿರೋಧಿಯಾಗಿದೆ ಎಂದು ಆರೋಪಿಸಿ ಸಿಐಟಿಯು ಸಂಘಟನೆ ಸದಸ್ಯರು ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಸಿಐಟಿಯು ರಾಜ್ಯಾಧ್ಯಕ್ಷೆ ಎಸ್‌.ವರಲಕ್ಷ್ಮಿ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಜೆಟ್‌ ಬಂಡವಾಳಶಾಹಿಗಳ ಪರವಾಗಿದೆ. ಕಾರ್ಮಿಕರು, ಬಡವರ ವಿರೋಧಿಯಾಗಿದೆ. ಜನ ಹಾಗೂ ಅಭಿವೃದ್ಧಿ ಪರವಾಗಿಲ್ಲ’ ಎಂದು ಆರೋಪಿಸಿದರು.

‘ನಿರುದ್ಯೋಗ ಹಾಗೂ ಹಣದುಬ್ಬರ ನಿಯಂತ್ರಣಕ್ಕೆ ಯಾವುದೇ ಕ್ರಮ ವಹಿಸಿಲ್ಲ. ಸಾರ್ವಜನಿಕ ಉದ್ಯಮಗಳನ್ನು ವ್ಯವಸ್ಥಿತವಾಗಿ ಖಾಸಗೀಕರಣಗೊಳಿಸುವುದು ಮುಂದುವರಿದಿದೆ. ಗ್ರಾಮೀಣ ರಸ್ತೆಯಿಂದ ಬಾಹ್ಯಾಕಾಶ ತಂತ್ರಜ್ಞಾನದವರೆಗೆ ಖಾಸಗಿ ಕ್ಷೇತ್ರದವರಿಗೆ ಲಾಭ ಮಾಡಿಕೊಡುವ ಉದ್ದೇಶವನ್ನು ಬಜೆಟ್‌ ಹೊಂದಿದೆ’ ಎಂದು ಟೀಕಿಸಿದರು.

ADVERTISEMENT

‘ಆರ್ಥಿಕತೆಯು ಕುಂಟುತ್ತಾ ಸಾಗಿದೆ. ಸಾರ್ವಜನಿಕ ಸಂಪತ್ತನ್ನು ಮಾರಾಟಕ್ಕಿಡುತ್ತಿದೆ. ವಿತ್ತೀಯ ಕೊರತೆಯು ಹೆಚ್ಚಿದೆ. ಕಾರ್ಪೊರೇಟ್‌ ತೆರಿಗೆ ಹೆಚ್ಚಳ ಶೇ 10.4ರಷ್ಟಿದೆ. ಆದರೆ, ಜನರ ಮೇಲೆ ನೇರ ಹಾಗೂ ಪರೋಕ್ಷ ತೆರಿಗೆಯನ್ನು ಹೆಚ್ಚಿಸುವುದು ಮುಂದುವರಿದಿದೆ’ ಎಂದು ಕಿಡಿಕಾರಿದರು. 

‘ಬಡವರು, ರೈತರು, ಕೃಷಿ ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಕೃಷಿಯ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರೂ, ಬಜೆಟ್‌ನಲ್ಲಿ ಕಡಿಮೆ ಅನುದಾನ ಮೀಸಲಿಡಲಾಗಿದೆ. ಕಾರ್ಮಿಕರ ಪರವಾಗಿ ಯಾವುದೇ ಯೋಜನೆಯಿಲ್ಲ. ಒಕ್ಕೂಟದ ರಾಜ್ಯಗಳ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮುಂದುವರಿದಿದೆ’ ಎಂದು ಕಳವಳ ವ್ಯಕ್ತಪಡಿಸಿದರು. 

ಪ್ರಧಾನ ಕಾರ್ಯದರ್ಶಿ ಎನ್.ಕೆ.ಬಾಲಾಜಿರಾವ್, ಜಿಲ್ಲಾಧ್ಯಕ್ಷ ಜಯರಾಮ್, ಸುನಂದಾ, ಪುಷ್ಪಾ, ಶಾಕುಂತಲಾ, ಲೀಲಾವತಿ, ನೀಲಮ್ಮ, ವಿಜಯಕುಮಾರ್, ಮೆಹಬೂಬ್‌, ಅಣ್ಣಪ್ಪ, ಶ್ರೀಧರ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.