ADVERTISEMENT

ಮೈಸೂರು: ಬಹುಮುಖ ಪ್ರತಿಭೆ ಅನುಷ್‌

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 20:30 IST
Last Updated 19 ನವೆಂಬರ್ 2021, 20:30 IST
ತಾವು ಬರೆದ ‘ಹುಲಿ‍ ಪತ್ರಿಕೆ’ ಕಾದಂಬರಿಯೊಂದಿಗೆ ಅನುಷ್‌ ಎ. ಶೆಟ್ಟಿ
ತಾವು ಬರೆದ ‘ಹುಲಿ‍ ಪತ್ರಿಕೆ’ ಕಾದಂಬರಿಯೊಂದಿಗೆ ಅನುಷ್‌ ಎ. ಶೆಟ್ಟಿ   

ಮೈಸೂರು: ದಶಕದ ಹಿಂದೆ ಹುಣಸೂರಿನಿಂದ ಮೈಸೂರಿನ ಮಹಾರಾಜ ಕಾಲೇಜಿಗೆ ಓದಲು ಬಂದ ಅನುಷ್‌ ಎ.ಶೆಟ್ಟಿ, ಕಾದಂಬರಿಕಾರ ಆಗುತ್ತೇನೆಂದೇನೂ ಅಂದುಕೊಂಡಿರಲಿಲ್ಲ. ಆದರೆ, 2014ರಿಂದ ವರ್ಷಕ್ಕೊಂದರಂತೆ 6 ಕಾದಂಬರಿ ಬರೆದಿರುವ ಇವರು, ಕನ್ನಡದ ಬಹುಮುಖ ಪ್ರತಿಭೆ.

ಪುಸ್ತಕ ಪ್ರಕಾಶನ, ರಂಗಭೂಮಿ ಹಾಗೂ ಸಿನಿಮಾಗೆ ಹಿನ್ನೆಲೆ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ, ಸಂಗೀತ ಕಚೇರಿಗಳಿಗೆ ಮೃದಂಗ– ತಬಲಾ ವಾದ್ಯದ ಸಾಥ್‌ ನೀಡಿರುವ ಇವರು ಕನ್ನಡ ಆಡಿಯೊ ಪುಸ್ತಕಗಳನ್ನು ಹೊರ ತರುತ್ತಿದ್ದಾರೆ.

ಅನುಷ್‌ ಅವರ ಮೊದಲ ಕಾದಂಬರಿ ‘ಆಹುತಿ’ 2014ರಲ್ಲಿ ಬಿಡುಗಡೆಯಾಯಿತು. ನಂತರ ‘ಕಳ್ಬೆಟ್ಟದ ದರೋಡೆಕೋರರು’, ‘ಜೋಡ್ಪಾಲ’, ‘ನೀನು ನಿನ್ನೊಳಗೆ ಖೈದಿ’, ‘ಹುಲಿ ಪತ್ರಿಕೆ– 1’, ‘ಹುಲಿ ಪತ್ರಿಕೆ –2’ ಹೊರತಂದರು. ಎಲ್ಲ ಪುಸ್ತಕಗಳು ಮೂರಕ್ಕೂ ಹೆಚ್ಚು ಮುದ್ರಣ ಕಂಡಿವೆ.

ADVERTISEMENT

‘ಆಹುತಿ’ ಪ್ರಕಟಿಸಲು ಹಲವು ಪ್ರಕಾಶಕರ ಕಚೇರಿಗೆ ಅಲೆದರೂ ಅವಕಾಶ ಸಿಗದಾದಾಗ ತಮ್ಮದೇ ಆದ ‘ಅನುಗ್ರಹ ಪ್ರಕಾಶನ’ದಿಂದ ಪ್ರಕಟಿಸಿದರು. ನಂತರದಲ್ಲಿ ಇವರ ಐದು ಕಾದಂಬರಿಗಳು, ಕಥೆಗಾರ ಅಬ್ದುಲ್‌ ರಶೀದರ ಎಲ್ಲ ಕಥೆಗಳ ಗುಚ್ಛ ‘ಹೊತ್ತುಗೊತ್ತಿಲ್ಲದ ಕಥೆಗಳು’, ಪುಟಾಣಿ ಸುರಭಿ ಕೊಡವೂರು ಬರೆದ ‘ಮೊಬೈಲ್‌ ಮೈಥಿಲಿ’ ಕಥಾ ಸಂಕಲನ ‘ಅನುಗ್ರಹ’ ಪ್ರಕಾಶನದಲ್ಲಿ ಪ್ರಕಟಗೊಂಡ ಪುಸ್ತಕಗಳು.

‘ರಂಗಾಯಣ’, ‘ನಟನ ರಂಗಶಾಲೆ’, ‘ಶೇಷಗಿರಿ’, ‘ಬೆನಕ’, ‘ಉಡುಪಿ ರಂಗಭೂಮಿ’, ‘ಸಂಗಮ ಕಲಾವಿದರು’, ‘ಬಹುಮುಖಿ’ಯ 50ಕ್ಕೂ ಹೆಚ್ಚು ನಾಟಕಗಳಿಗೆ ರಂಗ ಸಂಗೀತ ಹಾಗೂ ವಾದ್ಯಕಾರರಾಗಿ ಕೆಲಸ ಮಾಡಿದ್ದಾರೆ.

ಪೂರ್ಣಚಂದ್ರ ತೇಜಸ್ವಿ ಅವರ ‘ಕರ್ವಾಲೊ’, ‘ಜುಗಾರಿಕ್ರಾಸ್‌’, ‘ಚಿದಂಬರ ರಹಸ್ಯ’ ಕಾದಂಬರಿಗಳ ಆಡಿಯೊ ಬುಕ್‌ ಅನ್ನು ಹೊರತಂದಿದ್ದು, ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಆಡಿಯೊ ಬುಕ್‌ ರೆಕಾರ್ಡಿಂಗ್‌ ನಡೆಯುತ್ತಿದೆ.

ಬರವಣಿಗೆ, ಸಂಗೀತದೊಂದಿಗೆ ಸುಂದರೇಶ್‌ ದೇವಪ್ರಿಯಂ ಜೊತೆ ‘ನಾವು’ ಬ್ಯಾಂಡ್‌ ಕಟ್ಟಿ, ವಚನ, ತತ್ವ ಪದಗಳಿಗೆ ರಾಗ ಸಂಯೋಜಿಸುತ್ತಿರುವ ಅನುಷ್‌, ಆಡಿಯೊ ಪುಸ್ತಕಗಳನ್ನು ‘ನಾವು ಸ್ಟುಡಿಯೊ’ ಮೂಲಕವೇ ಹೊರತರುತ್ತಿದ್ದಾರೆ.

‘2010ರಲ್ಲಿ ಪತ್ರಿಕೋದ್ಯಮ ಓದಲು ಮಹಾರಾಜ ಕಾಲೇಜು ಸೇರಿದೆ. ಅದುವೇ ಕನ್ನಡ ಸಾಹಿತ್ಯ, ಸಂಗೀತದ ಅಭಿರುಚಿಗೆ ದಾರಿ ತೋರಿತು. ತೇಜಸ್ವಿ ಸಾಹಿತ್ಯ, ಗ್ರಂಥಾಲಯದ ಪತ್ರಿಕೆಗಳ ಓದು, ಅಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಸ್ಪರ್ಧೆಗಳು ಸ್ಫೂರ್ತಿ ನೀಡಿದವು’ ಎಂದು ಅನುಷ್‌ ಹೇಳಿದರು.

‘ಬ್ಯಾಂಡ್‌ ಮೂಲಕ ನಾಡಿನ ವಿಶಿಷ್ಟ ಸಂಗೀತ ಪರಂಪರೆಗಳನ್ನು ದಾಖಲಿಸುವ ಆಲೋಚನೆಯಿದೆ. ಇದೀಗ ನಾಟಕ ರಚನೆ ತಯಾರಿಯಲ್ಲಿ ತೊಡಗಿದ್ದೇನೆ’ ಎಂದರು.

ಅನುಷ್‌ ಕೃತಿಗಳಲ್ಲಿ ಪರಿಸರ, ನಿಗೂಢ ಲೋಕವನ್ನು ಕಾಣಬಹುದು. ಇವರ ‘ಕಳ್ಬೆಟ್ಟದ ದರೋಡೆಕೋರರು’ ಸಿನಿಮಾ ಆಗಿ 2019ರಲ್ಲಿ ತೆರೆಕಂಡಿದ್ದರೆ, ‘ನೀನು ನಿನ್ನೊಳಗೆ ಖೈದಿ’ಯ ಚಿತ್ರೀಕರಣ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.