ADVERTISEMENT

ಹುಣಸೂರು: ಬಸ್ ನಿಲ್ದಾಣದಲ್ಲಿ ವ್ಯಾಪಾರಕ್ಕೆ ನಿರ್ಬಂಧನೆ ತೆರವಿಗೆ ಶಾಸಕರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 8 ಮೇ 2025, 15:58 IST
Last Updated 8 ಮೇ 2025, 15:58 IST
ಹುಣಸೂರು ನಗರದ ಬಸ್ ನಿಲ್ದಾಣದಲ್ಲಿ ಸೌತೆಕಾಯಿ ಮತ್ತು ಇತರ ಆಹಾರ ಪದಾರ್ಥಗಳನ್ನು ಹೊತ್ತು ಮಾರಾಟ ಮಾಡುವುದನ್ನು ನಿರ್ಬಂಧಿಸಿದ ಸಾರಿಗೆ ಇಲಾಖೆ ನಿಯಮವನ್ನು ತೆರವುಗೊಳಿಸುವಂತೆ ಗುರುವಾರ ಶಾಸಕ ಜಿ.ಡಿ.ಹರೀಶ್ ಗೌಡ ಅವರನ್ನು ವ್ಯಾಪಾರಿಗಳು ಮನವಿ ಮಾಡಿದರು
ಹುಣಸೂರು ನಗರದ ಬಸ್ ನಿಲ್ದಾಣದಲ್ಲಿ ಸೌತೆಕಾಯಿ ಮತ್ತು ಇತರ ಆಹಾರ ಪದಾರ್ಥಗಳನ್ನು ಹೊತ್ತು ಮಾರಾಟ ಮಾಡುವುದನ್ನು ನಿರ್ಬಂಧಿಸಿದ ಸಾರಿಗೆ ಇಲಾಖೆ ನಿಯಮವನ್ನು ತೆರವುಗೊಳಿಸುವಂತೆ ಗುರುವಾರ ಶಾಸಕ ಜಿ.ಡಿ.ಹರೀಶ್ ಗೌಡ ಅವರನ್ನು ವ್ಯಾಪಾರಿಗಳು ಮನವಿ ಮಾಡಿದರು   

ಹುಣಸೂರು: ‘ನಗರದ ಬಸ್ ನಿಲ್ದಾಣದಲ್ಲಿ ಸೌತೆಕಾಯಿ, ಕಲ್ಲಂಗಡಿ, ಕಡ್ಲೆಕಾಯಿ ಮತ್ತು ಇತರ ಆಹಾರ ಪದಾರ್ಥಗಳನ್ನು ಹೊತ್ತು ಮಾರಾಟ ಮಾಡುತ್ತಿರುವವರಿಗೆ ನಿರ್ಬಂಧ ಹಾಕಿ ಬದುಕು ಕಸಿದುಕೊಳ್ಳಲಾಗಿದೆ. ಕೂಡಲೇ ಈ ನಿರ್ಬಂಧ ತೆರವುಗೊಳಿಸಬೇಕು’ ಎಂದು ವ್ಯಾಪಾರಿಗಳು ಶಾಸಕ ಜಿ.ಡಿ.ಹರೀಶ್ ಗೌಡ ಅವರಿಗೆ ಮನವಿ ಮಾಡಿದರು.

ಕೆಎಸ್‌ಆರ್‌ಟಿಸಿ ಮೈಸೂರು ಡಿಪೊ ಅಧಿಕಾರಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಶಾಸಕರು, ‘ನಿತ್ಯ ಹೊಟ್ಟೆಪಾಡಿಗೆ ಬಸ್ ನಿಲ್ದಾಣದ ಪ್ರಯಾಣಿಕರನ್ನೇ ಅವಲಂಬಿಸಿ ವ್ಯಾಪಾರ ಮಾಡಿ ಬದುಕು ಕಟ್ಟಿಕೊಂಡವರಿಗೆ ನಿರ್ಬಂಧ ಹಾಕಿರುವುದನ್ನು ಸಡಿಲಗೊಳಿಸುವಂತೆ’ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ, ‘ನಿಲ್ದಾಣದಲ್ಲಿ ಹರಾಜಿನಲ್ಲಿ ಅಂಗಡಿ, ಹೊಟೇಲ್ ಪಡೆದವರಿಗೆ ಈ ವ್ಯಾಪಾರಿಗಳಿಂದ ನಷ್ಟವಾಗುತ್ತಿದ್ದು, ಗ್ರಾಹಕರು ಚಿಲ್ಲರೆ ಅಂಗಡಿಗೆ ಬಂದು ವ್ಯಾಪಾರ ಮಾಡುತ್ತಿಲ್ಲ. ಇದರಿಂದ ಅಂಗಡಿ ಖಾಲಿ ಮಾಡಿ ಸಂಸ್ಥೆಗೆ ನಷ್ಟವಾಗಿದೆ’ ಎಂದರು.

ಶಾಸಕರು ಪ್ರತಿಕ್ರಿಯಿಸಿ, ‘25 ವರ್ಷದಿಂದ ಬಸ್ ನಿಲ್ದಾಣದ ವ್ಯಾಪಾರವನ್ನೇ ನಂಬಿಕೊಂಡು ಬದುಕಿದ್ದಾರೆ. ಬಡವರಿಗೆ ಅವಕಾಶ ಕಲ್ಪಿಸಿ’ ಎಂದು ಮನವಿ ಮಾಡಿದರು.

ADVERTISEMENT

ಸೌತೆಕಾಯಿ ಮಾರಾಟ ಮಾಡುವ ರವಿ, ಲಕ್ಷ್ಮಯ್ಯ, ವಾಜಿದ್, ಜಗದೀಶ್, ಅಫ್ಸರ್ ಅಹಮದ್, ಕುಮಾರ್, ಜಾವಿದ್, ಪ್ರೇಮಕುಮಾರ್ ಮಾತನಾಡಿ, ‘ನಿಲ್ದಾಣದಲ್ಲಿ ಮಾರಾಟಕ್ಕೆ ಅವಕಾಶ ನೀಡದಿದ್ದರೆ ಅಧಿಕಾರಿಗಳ ಹೆಸರು ಬರೆದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಶಾಸಕರ ಗಮನಕ್ಕೆ ತಂದರು. ಶಾಸಕರು ಸಮಾಧಾನಪಡಿಸಿ, ಅವಕಾಶ ಕಲ್ಪಿಸುತ್ತೇನೆ ವಿಶ್ವಾಸವಿಡುವಂತೆ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.