ADVERTISEMENT

ಕಲಾವಿದನಿಗೆ ಐತಿಹಾಸಿಕ ಪ್ರಜ್ಞೆ ಅಗತ್ಯ: ದೃಶ್ಯಕಲಾ ವಿಮರ್ಶಕ ಕೆ.ವಿ.ಸುಬ್ರಹ್ಮಣ್ಯ

ದಸರಾ ಶಿಲ್ಪಕಲಾ ಶಿಬಿರಕ್ಕೆ ಚಾಲನೆ; ಕಲಾ ವಿಮರ್ಶಕ ಕೆ.ವಿ.ಸುಬ್ರಹ್ಮಣ್ಯಂ ಅಭಿಮತ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 2:06 IST
Last Updated 3 ಸೆಪ್ಟೆಂಬರ್ 2025, 2:06 IST
ಮೈಸೂರಿನ ಕಾವಾದಲ್ಲಿ ‘ದಸರಾ ಮಹೋತ್ಸವ’ದ ಪ್ರಯುಕ್ತ ಆಯೋಜಿಸಿರುವ ‘ಟೆರ‍್ರಾಕೋಟಾ ಭಿತ್ತಿ ಶಿಲ್ಪಕಲಾ ಶಿಬಿರ’ಕ್ಕೆ ಕಲಾ ವಿಮರ್ಶಕ ಕೆ.ವಿ.ಸುಬ್ರಹ್ಮಣ್ಯಂ ಮಂಗಳವಾರ ಚಾಲನೆ ನೀಡಿದರು ಪ್ರಜಾವಾಣಿ ಚಿತ್ರ 
ಮೈಸೂರಿನ ಕಾವಾದಲ್ಲಿ ‘ದಸರಾ ಮಹೋತ್ಸವ’ದ ಪ್ರಯುಕ್ತ ಆಯೋಜಿಸಿರುವ ‘ಟೆರ‍್ರಾಕೋಟಾ ಭಿತ್ತಿ ಶಿಲ್ಪಕಲಾ ಶಿಬಿರ’ಕ್ಕೆ ಕಲಾ ವಿಮರ್ಶಕ ಕೆ.ವಿ.ಸುಬ್ರಹ್ಮಣ್ಯಂ ಮಂಗಳವಾರ ಚಾಲನೆ ನೀಡಿದರು ಪ್ರಜಾವಾಣಿ ಚಿತ್ರ    

ಮೈಸೂರು: ‘ಕಲೆ ಎಂಬುದು ಜೀವಂತ ಪರಂಪರೆ. ಹೀಗಾಗಿ ಕಲಾವಿದನಿಗೆ ಐತಿಹಾಸಿಕ ಪ್ರಜ್ಞೆ ಅಗತ್ಯ’ ಎಂದು ದೃಶ್ಯಕಲಾ ವಿಮರ್ಶಕ ಕೆ.ವಿ.ಸುಬ್ರಹ್ಮಣ್ಯ ಪ್ರತಿಪಾದಿಸಿದರು. 

ನಗರದ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ ‘ಮೈಸೂರು ದಸರಾ ಮಹೋತ್ಸವ’ದ ಪ್ರಯುಕ್ತ ‘ದಸರಾ ಲಲಿತಕಲೆ ಮತ್ತು ಕರಕುಶಲಕಲೆ ಉಪಸಮಿತಿ’ಯು ‘ರಾಜ್ಯ ಶಿಲ್ಪಕಲಾ ಅಕಾಡೆಮಿ’ ಸಹಯೋಗದಲ್ಲಿ ಆಯೋಜಿಸಿರುವ ‘ಟೆರ‍್ರಾಕೋಟಾ ಭಿತ್ತಿ ಶಿಲ್ಪಕಲಾ ಶಿಬಿರ’ಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

‘ಯಾವುದೇ ಕಲೆ ಸೃಷ್ಟಿಸುವ ಮೊದಲು ಈ ಹಿಂದಿನ ಕಲಾಕೃತಿಗಳ ಪರಿಶೀಲನೆ, ಸೂಕ್ಷ್ಮ ಅವಲೋಕನ ಮಾಡಬೇಕು. ಕಲಾಕೃತಿ ಸೃಷ್ಟಿಸುವಾಗ, ನೋಡುವಾಗ ಹಾಗೂ ಖರೀದಿಸುವಾಗ ಸಂತೋಷ ಕೊಡುತ್ತದೆ. ಅವಸರವಿದ್ದರೆ ಕಲೆಯು ಸಹಜವಾಗಿ ಅರಳುವುದಿಲ್ಲ. ತಾಳ್ಮೆಯ ಜೊತೆಗೆ ಮತ್ತೆ ಮತ್ತೆ ಓದುವ ಹವ್ಯಾಸ ಇರಬೇಕು. ಹುಡುಕಾಟವನ್ನು ನಡೆಸಬೇಕು. ಸಮಯವನ್ನು ಕಲಾಕೃತಿಗೆ ಒತ್ತೆ ಇಡಬೇಕು’ ಎಂದು ಸಲಹೆ ನೀಡಿದರು. 

ADVERTISEMENT

‘ಪ್ರಭಾವದ ಆತಂಕ ಕಲಾವಿದನಿಗೆ ಇರುತ್ತದೆ. ಅದರಿಂದ ಕಳಚಿಕೊಳ್ಳುವುದು ಸುಲಭವಲ್ಲ. ನಕಲು ಮಾಡಿದರೆ ಮುಂದಿನ ಪೀಳಿಗೆಗೆ ನಾವು ನೆನಪಾಗಿಯೂ ಉಳಿಯುವುದಿಲ್ಲ. ನಮ್ಮೊಳಗಿನ ಸೃಜನಶೀಲತೆಗೆ ಸಾಣೆ ಹಿಡಿಯಬೇಕು. ಸ್ವಂತಿಕೆಯನ್ನು ತೋರುವ ದಿಟದ ಜಾಣ ಕಲಾವಿದರಾಗಬೇಕು’ ಎಂದು ಸಲಹೆ ನೀಡಿದರು.  

ಗುರುತಿಸಿ:

‘ಕಲೆಯು ಬೆಳೆದು ಬಂದ ದಾರಿಯಲ್ಲಿ ಸಾವಿರಾರು ಮಂದಿ ತಮ್ಮ ಗುರುತು ಉಳಿಸಿ ಹೋಗಿದ್ದಾರೆ. ಮುಂದೆಯೂ ಬರುತ್ತಾರೆ. ಆದರೆ, ಕಲೆಯನ್ನು ಗುರುತಿಸುವ ಕೆಲಸವನ್ನು ಸಹೃದಯರು, ಕಲಾಭಿಮಾನಿಗಳು ಮಾಡಬೇಕು’ ಎಂದು ಸುಬ್ರಹ್ಮಣ್ಯ ಹೇಳಿದರು. 

‘ಕಲೆಯ ಪೂರ್ವಸೂರಿಗಳು ಸುಂದರವಾಗಿ ಬಾಳಿದ್ದಾರೆ. ತಮ್ಮ ಬಾಳುವಿಕೆಗೆ ಕರಕುಶಲತೆ ತಂದುಕೊಂಡಿದ್ದರು. ಹೀಗಾಗಿಯೇ ಅದ್ಭುತಗಳನ್ನು ಸೃಷ್ಟಿಸಿದರು’ ಎಂದರು. 

‍ಪ್ರಶ್ನೆ ಮಾಡಿ:

‘ಕಲಾವಿದರೇಕೆ ‍ಪ್ರಶ್ನೆ ಮಾಡುವುದಿಲ್ಲವೆಂದು ಚಿಂತಕ ಜಾಕ್ವೆಸ್‌ ಡೆರಿಡಾ ಪ್ರಶ್ನಿಸುತ್ತಾನೆ. ಯಾವುದನ್ನೇ ಆಗಲಿ ‍ಪ್ರಶ್ನಿಸದೇ ಒಪ್ಪಿಕೊಳ್ಳದಿರುವ ಸ್ವಾತಂತ್ರ್ಯದಲ್ಲಿ ಕಲಾವಿದ ಜೀವಿಸಬೇಕು’ ಎಂದು ಸುಬ್ರಹ್ಮಣ್ಯ ಹೇಳಿದರು. 

ಕಾವಾ ಡೀನ್ ಎ.ದೇವರಾಜು ಮಾತನಾಡಿ, ‘ದೇಶವು 5 ಸಾವಿರ ವರ್ಷಗಳ ಕಲಾ ಇತಿಹಾಸ ಹೊಂದಿದೆ. ಒಂದು ಕಡೆ ಕುಳಿತು ಚರ್ಚಿಸಿದರೆ ಆಗದು, ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಕ್ಷೇತ್ರಕಾರ್ಯ ಮಾಡಬೇಕು’ ಎಂದು ಸಲಹೆ ನೀಡಿದರು. 

‘ದೇವಾಲಯ, ಮಸೀದಿಗಳ ವಾಸ್ತುಶಿಲ್ಪದಲ್ಲಿ ಟೆರ‍್ರಾಕೋಟಾ ಭಿತ್ತಿಚಿತ್ರ ಕಾಣಬಹುದು’ ಎಂದು ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಎಂ.ಸಿ.ರಮೇಶ್‌ ಹೇಳಿದರು.

ಆಡಳಿತಾಧಿಕಾರಿ ನಿರ್ಮಲಾ ಮಠಪತಿ, ಶಿಬಿರದ ನಿರ್ದೇಶಕ ಉಲ್ಲಾಸ್ಕರ್‌ ಡೇ, ಶಿಲ್ಪಿಗಳಾದ ಗಣೇಶ್ ಶೆರ್ಮಿ, ರುಕ್ಕಪ್ಪಾ ಕುಂಬಾರ, ವಿಠ್ಠಲ್ ದೇವೇಂದ್ರ ಗವಿ, ಸಿ.ಎನ್.ವಿಜಯ್ ಕುಮಾರ್ ಸಿ.ಎನ್, ಮಹದೇವಸ್ವಾಮಿ, ವಿನ್ಯಾಸ್ ಕಾಟೇನಹಳ್ಳಿ, ಕೆ. ರಾಘವೇಂದ್ರ ಪಾಲ್ಗೊಂಡಿದ್ದರು.

ಪ್ರಭಾವದ ಆತಂಕ ಕಳಚಬೇಕು ನಕಲು ಮಾಡಿದರೆ ನೆನಪಾಗುವುದಿಲ್ಲ ಎಲ್ಲವನ್ನೂ ಪ್ರಶ್ನೆ ಮಾಡುತ್ತಿರಬೇಕು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.