
ಮೈಸೂರು: ನಗರದ ಆಡಳಿತ ತರಬೇತಿ ಸಂಸ್ಥೆಯಲ್ಲಿ (ಎಟಿಐ) ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುತ್ತಿರುವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ವಯೋಮಿತಿಯನ್ನು ನಿಯಮ ಬಾಹಿರವಾಗಿ 65 ವರ್ಷದಿಂದ 55 ವರ್ಷಕ್ಕೆ ಇಳಿಸಲಾಗಿದ್ದು, ಸಂಸ್ಥೆಯ ಮೇಲಧಿಕಾರಿಗಳ ಹಸ್ತಕ್ಷೇಪದ ಆರೋಪ ಕೇಳಿಬಂದಿದೆ.
ಅ.10ರಂದು ಸಂಸ್ಥೆಯು ಹೊರಡಿಸಿರುವ ನೇಮಕಾತಿ ಅಧಿಸೂಚನೆಯಲ್ಲಿ 55 ವರ್ಷದೊಳಗಿನ 5ರಿಂದ 7 ವರ್ಷ ಬೋಧನಾ ಅನುಭವ ಇರುವ, ಶೇ 55 ಅಂಕದೊಂದಿಗೆ ಸ್ನಾತಕೋತ್ತರ ಪದವಿ ಪಡೆದ, ಕನ್ನಡ ಭಾಷಾ ಕೌಶಲ ಇರುವ ಪಿಎಚ್‌ಡಿ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದೆಂಬ ಉಲ್ಲೇಖವಿದೆ.
ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ನೌಕರರಿಗೆ ತರಬೇತಿ ಕಾರ್ಯಾಗಾರಗಳನ್ನು ನಡೆಸಿ, ನುರಿತವರನ್ನಾಗಿ ಮಾಡುವುದು ಸಂಸ್ಥೆಯ ಜವಾಬ್ದಾರಿಯಾಗಿದ್ದು, ಅದಕ್ಕೆ ವಿವಿಧ ಕ್ಷೇತ್ರಗಳ ತಜ್ಞರು ಹಾಗೂ ಸಂಶೋಧಕರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವುದು ವಾಡಿಕೆ. ಸರ್ಕಾರಿ ಕೆಲಸದಲ್ಲಿ ನಿವೃತ್ತರಾದ ಅನುಭವಿಗಳಿಗೂ ಅರ್ಜಿ ಸಲ್ಲಿಸುವ ಅವಕಾಶವಿತ್ತು. ಇದೀಗ ವಯೋಮಿತಿ ಕಡಿಮೆಗೊಳಿಸುವುದರಿಂದ ತಜ್ಞರ ಅಭಾವ ಸೃಷ್ಟಿಯಾಗುತ್ತಿದೆ ಎನ್ನಲಾಗಿದೆ.
ಹಿಂದೆಯೂ ಉಲ್ಲಂಘನೆ: ‘2021–22ರ ನೇಮಕಾತಿಯಲ್ಲೂ ಇದೇ ಮಾದರಿ ಅನುಸರಿಸಲಾಗಿತ್ತು. ಆಗಲೂ ಆಕ್ಷೇಪ ಕೇಳಿ ಬಂದಿತ್ತು. ಯಾವ ಮಾನದಂಡ ಅನುಸರಿಸಿದ್ದೀರಿ ಎಂಬುದಕ್ಕೆ ಇದುವರೆಗೂ ಸಂಸ್ಥೆಯು ಸ್ಪಷ್ಟೀಕರಣವನ್ನೂ ನೀಡಿಲ್ಲ’ ಎನ್ನುತ್ತಾರೆ ಸಂಸ್ಥೆಯ ಗುತ್ತಿಗೆ ತರಬೇತುದಾರ ಜೆ.ಆರ್.ಪರಮೇಶ್.
‘ಸಂದರ್ಶನ ಪರೀಕ್ಷೆಯ ಜೊತೆಗೆ ಲಿಖಿತ ಪರೀಕ್ಷೆಯನ್ನೂ ನಡೆಸುತ್ತಿರುವುದರಿಂದ ವಯಸ್ಸಾದ ತಜ್ಞರು ಅರ್ಜಿ ಹಾಕಲು ಹಿಂದೇಟು ಹಾಕುತ್ತಿದ್ದಾರೆ. 2010ರಿಂದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ನಿವೃತ್ತರಾದ ಅನುಭವಿಗಳು ಇರುತ್ತಿದ್ದರು. ಹೀಗಾಗಿಯೇ 2014ರ ವರೆಗೂ ಹಲವು ಗ್ರಂಥ ಪ್ರಕಟಣೆಯನ್ನು ಮಾಡಲಾಗುತ್ತಿತ್ತು. ಈಗ ಅದೂ ನಿಂತು ಹೋಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
‘ಪ್ಯಾಕ್ ಎಂಬ ಸಂಸ್ಥೆಗೆ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ವಹಿಸಿದ್ದು, ಅಲ್ಲಿಯೂ ಇಂಗ್ಲಿಷ್‌ಗೆ ಪ್ರಾಧಾನ್ಯತೆ ನೀಡಲಾಗಿದೆ. ಆಡಳಿತ ಕನ್ನಡದಲ್ಲೇ ನಡೆಸುವ ಸರ್ಕಾರದ ಆದೇಶವನ್ನು ಸಂಸ್ಥೆಯೇ ಗಾಳಿಗೆ ತೂರಿದೆ’ ಎಂದು ಹೇಳಿದರು.
ಗುಣಮಟ್ಟ ಕ್ಷೀಣ: ‘ಈಗಾಗಲೇ 55 ವರ್ಷ ದಾಟಿದವರನ್ನು ಕೆಲಸದಿಂದ ಕೈ ಬಿಡಬೇಕಾಗುತ್ತದೆ. ಇದಕ್ಕೆ ವಿವೇಚನಾಯುಕ್ತ ಮಾನದಂಡವೂ ಇಲ್ಲ. ಅನುಭವಿ ತಜ್ಞರನ್ನು ನೇಮಕಾತಿಯಿಂದ ಹೊರಗುಳಿಸಲು, ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳಲು ಮೇಲಧಿಕಾರಿಗಳು ನಡೆಸಿದ ಹುನ್ನಾರವಾಗಿದೆ. ತರಬೇತಿ ಗುಣಮಟ್ಟ ಕಡಿಮೆಯಾಗುತ್ತಿದೆ’ ಎನ್ನುತ್ತಾರೆ ಪರಮೇಶ್.
ಕಾರಣ ನೀಡದ ಸಂಸ್ಥೆ: ‘ಹೊಸ ನಿರ್ಣಯಕ್ಕೆ ಕಾರಣವನ್ನು ಈಗಾಗಲೇ ಕರ್ತವ್ಯ ನಿರತ ಸಿಬ್ಬಂದಿಗೆ ನೀಡಿಲ್ಲ. ಗೊಂದಲ ಸೃಷ್ಟಿಸಿ, ನೇಮಕಾತಿ ಪ್ರಕ್ರಿಯೆಯನ್ನು ತರಾತುರಿಯನ್ನು ಮುಗಿಸುವ ಆಲೋಚನೆಯೂ ಆಡಳಿತ ವರ್ಗಕ್ಕಿದೆ’ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಅಭ್ಯರ್ಥಿಯೊಬ್ಬರು ಪ್ರತಿಕ್ರಿಯಿಸಿದರು.
ಈ ಬಗ್ಗೆ ಪ್ರತಿಕ್ರಿಯೆಗೆ ಸಂಸ್ಥೆಯ ಜಂಟಿ ನಿರ್ದೇಶಕಿ ವೀಣಾ ಅವರಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ.
ಯಾವ್ಯಾವ ಹುದ್ದೆಗಳು..
ಸಂಸ್ಥೆಯ ವಿಪತ್ತು ನಿರ್ವಹಣಾ ಕೇಂದ್ರ ಡಾ.ಬಿ.ಆರ್.ಅಂಬೇಡ್ಕರ್ ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಕೇಂದ್ರ ಸಾರ್ವಜನಿಕ– ಖಾಸಗಿ ಸಹಭಾಗಿತ್ವ ಕೋಶ ಇ– ಆಡಳಿತ ಮತ್ತು ದತ್ತಾಂಶ ಕೇಂದ್ರದಲ್ಲಿ ಕೆಲಸ ಮಾಡುವ ಹಿರಿಯ ಹಾಗೂ ಕಿರಿಯ ಸಿಬ್ಬಂದಿ ಹುದ್ದೆಗಳಿಗೆ ಈ ನಿಯಮ ಅನ್ವಯ ಆಗಲಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಕ್ರಮವಾಗಿ 6 ಮತ್ತು 5 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಾರ್ವಜನಿಕ ಆಡಳಿತ ಕಾನೂನು ಅರ್ಥಶಾಸ್ತ್ರ ಲಿಂಗ ಮತ್ತು ಮಕ್ಕಳ ಕೇಂದ್ರ ವ್ಯವಹಾರ ನಿರ್ವಹಣೆ ಹಾಗೂ ನಾಯಕತ್ವ ಕೌಶಲ ಮತ್ತು ಜೀವಾನೋಪಾಯದ ವಿಷಯ ತಜ್ಞರು ಹಾಗೂ 4 ದತ್ತಾಂಶ ವಿಶ್ಲೇಷಕ ಹುದ್ದೆಗಳಿಗೂ ಇವೇ ನಿಯಮ ಅನ್ವಯ ಆಗಲಿವೆ. ದತ್ತಾಂಶ ವಿಶ್ಲೇಷಕ ಹುದ್ದೆಗೆ 2–4 ವರ್ಷ ಸೇವಾನುಭವ ಇರಬೇಕೆಂದು ಹೇಳಲಾಗಿದೆ. ಬಹು ಕೆಲಸ (ಮಲ್ಟಿ ಟಾಸ್ಕಿಂಗ್ ಸ್ಟಾಫ್) ಮಾಡುವ 4 ಹುದ್ದೆಗಳಿಗೂ 55 ವರ್ಷದ ವಯೋಮಾನದ ಮಿತಿ ನಿಗದಿ ಮಾಡಲಾಗಿದ್ದು ಈ ನಿಯಮ ಆಧರಿಸಿ ನ.3ರಂದು ಒಳಗೆ ಅರ್ಜಿ ಸಲ್ಲಿಸಬೇಕೆಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಹಲವರು ಅರ್ಜಿ ಸಲ್ಲಿಸಿದ್ದಾರೆ. ಪರೀಕ್ಷೆ ಬಾಕಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.