ADVERTISEMENT

‘ಆರೋಗ್ಯಕರ ವೃದ್ಧಾಪ್ಯಕ್ಕೆ ಜಾಗೃತಿ ಅಗತ್ಯ’

‘ಕಾಗ್ನಿಸೆನ್ಸ್‌ ಪ್ಲಸ್‌– 2025’ ಅಂತರರಾಷ್ಟ್ರೀಯ ಸಮಾವೇಶ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 7:08 IST
Last Updated 11 ಜುಲೈ 2025, 7:08 IST
ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ‘ಕಾಗ್ನಿಸೆನ್ಸ್‌ ಪ್ಲಸ್‌– 2025’ ಅಂತರರಾಷ್ಟ್ರೀಯ ಸಮಾವೇಶವನ್ನು ಡಾ.ಅನಿಲ್‌ ಎಸ್‌.ಬಿಳಿಮಲೆ, ಡಾ.ಸಿ.ಪಿ.ಮಧು, ಎಚ್‌.ಬಸವನಗೌಡಪ್ಪ, ಡಾ.ರಾಧಾ ಎಸ್‌.ಮೂರ್ತಿ, ಡಾ.ದೀಪ್ತಿ ನವರತ್ನ ಹಾಗೂ ಡಾ.ಡಿ.ನಾರಾಯಣಪ್ಪ ಉದ್ಘಾಟಿಸಿದರು
ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ‘ಕಾಗ್ನಿಸೆನ್ಸ್‌ ಪ್ಲಸ್‌– 2025’ ಅಂತರರಾಷ್ಟ್ರೀಯ ಸಮಾವೇಶವನ್ನು ಡಾ.ಅನಿಲ್‌ ಎಸ್‌.ಬಿಳಿಮಲೆ, ಡಾ.ಸಿ.ಪಿ.ಮಧು, ಎಚ್‌.ಬಸವನಗೌಡಪ್ಪ, ಡಾ.ರಾಧಾ ಎಸ್‌.ಮೂರ್ತಿ, ಡಾ.ದೀಪ್ತಿ ನವರತ್ನ ಹಾಗೂ ಡಾ.ಡಿ.ನಾರಾಯಣಪ್ಪ ಉದ್ಘಾಟಿಸಿದರು   

ಮೈಸೂರು: ‘ಜಗತ್ತಿನಾದ್ಯಂತ ಡಿಮೆನ್ಷಿಯಾ (ಬುದ್ಧಿಮಾಂದ್ಯತೆ) ಪ್ರಕರಣ ಹೆಚ್ಚುತ್ತಿದ್ದು, ಜನರ ಆರೋಗ್ಯಯುತ ವೃದ್ಧಾಪ್ಯಕ್ಕೆ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಅಗತ್ಯ’ ಎಂದು ಡಿಮೆನ್ಷಿಯಾ ಇಂಡಿಯಾ ಅಲಯನ್ಸ್ (ಡಿಐಎ) ಅಧ್ಯಕ್ಷೆ ರಾಧಾ ಎಸ್‌.ಮೂರ್ತಿ ಹೇಳಿದರು.

ನಗರದ ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿನಿಂದ ಜೆಎಸ್ಎಸ್‌ ಆಸ್ಪತ್ರೆ ಸಭಾಂಗಣದಲ್ಲಿ ಗುರುವಾರ ಆರಂಭಗೊಂಡ ದೀರ್ಘಾಯುಷ್ಯಕ್ಕಾಗಿ ಬುದ್ಧಿಮಾಂದ್ಯತೆಯ ಅರಿವು, ಆರೋಗ್ಯಕರ ವೃದ್ಧಾಪ್ಯ ಮತ್ತು ಅರಿವಿನ ಆರೋಗ್ಯಕ್ಕೆ ಸಂಬಂಧಿಸಿದ 2 ದಿನಗಳ ‘ಕಾಗ್ನಿಸೆನ್ಸ್‌ ಪ್ಲಸ್‌– 2025’ ಅಂತರರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಹಿರಿಯ ನಾಗರಿಕರಲ್ಲಿ ಜ್ಞಾಪಕಶಕ್ತಿ ಅಥವಾ ಬುದ್ಧಿ ಮಂದವಾಗಲು ಹಲವು ಕಾರಣಗಳಿವೆ. ಇಂಥ ಪ್ರಕರಣಗಳು ರೋಗಿಗೆ ಮಾತ್ರವಲ್ಲದೇ ಅವಲಂಬಿತರು ಹಾಗೂ ಜೊತೆಗಾರರಿಗೂ ಒತ್ತಡ ಉಂಟುಮಾಡುತ್ತದೆ. ಸಮಸ್ಯೆಯನ್ನು ಪ್ರಾರಂಭದಲ್ಲಿಯೇ ಗುರುತಿಸಿ ಚಿಕಿತ್ಸೆಗೆ ಮುಂದಾಗುವುದು ಹೆಚ್ಚು ಪರಿಣಾಮಕಾರಿ. ಹಾಗಾಗಿ ಎಲ್ಲರಲ್ಲೂ ಜಾಗೃತಿ ಮೂಡಬೇಕು’ ಎಂದರು.

ADVERTISEMENT

‘ಆರೈಕೆದಾರರು ಮತ್ತು ಆರೋಗ್ಯ ಕ್ಷೇತ್ರದ ಸಿಬ್ಬಂದಿಯು ರೋಗಿಗಳಿಗಿರುವ ಸಮಗ್ರ ಆರೈಕೆ ವ್ಯವಸ್ಥೆಗಳ ಬಗ್ಗೆ ಮಾಹಿತಿ ಹಾಗೂ ಸುಧಾರಿತ ತರಬೇತಿ ಹೊಂದಬೇಕು’ ಎಂದು ಸಲಹೆ ನೀಡಿದರು.

ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್‌ನ(ನಿಯಾಸ್‌) ಟಿ.ವಿ.ರಾಮನ್‌ ಪೈ ವಿಭಾಗದ ಚೇರ್ಮನ್ ಡಾ.ದೀಪ್ತಿ ನವರತ್ನ ಮಾತನಾಡಿ, ಭಾರತೀಯ ಶಾಸ್ತ್ರೀಯ ಸಂಗೀತದ ಮೂಲಕ ‘ನ್ಯೂರೊ ಸಂಗೀತಶಾಸ್ತ್ರ’ ವಿಧಾನದಲ್ಲಿ ಅರಿವಿನ ಆರೋಗ್ಯ ಸುಧಾರಣೆಗೆ ಇರುವ ಅವಕಾಶ ಕುರಿತು ವಿವರಿಸಿದರು.

ಜೆಎಸ್ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲಪತಿ ಎಚ್.ಬಸವನಗೌಡಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಡಾ.ಪಿ.ರಜನಿ,‌ ಪ್ರಾಂಶುಪಾಲ ಡಿ.ನಾರಾಯಣಪ್ಪ ಮಾತನಾಡಿದರು.

ಆಸ್ಪತ್ರೆ ನಿರ್ದೇಶಕ ಡಾ.ಸಿ.ಪಿ.ಮಧು, ಅಕಾಡೆಮಿ ಆಡಳಿತಾಧಿಕಾರಿ ಎಸ್‌.ಆರ್‌.ಸತೀಶ್‌ಚಂದ್ರ ಉಪಸ್ಥಿತರಿದ್ದರು.

ಸಮ್ಮೇಳನದಲ್ಲಿ 200ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. 20ಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳಿಂದ ಸಂವಾದ, 60ಕ್ಕೂ ಹೆಚ್ಚು ವೈಜ್ಞಾನಿಕ ಸಂಶೋಧನೆ ಪ್ರಸ್ತುತಪಡಿಸಲಾಗುತ್ತದೆ.

ಬುದ್ಧಿಮಾಂದ್ಯತೆಯುಳ್ಳ ರೋಗಿಗಳ ಆರೈಕೆಯಲ್ಲಿ ಜಾಗತಿಕ ಪಾಲುದಾರಿಕೆ ಮತ್ತು ಸಂಶೋಧನೆಗಳು ಅಗತ್ಯ ಡಾ.ಎಚ್.ಬಸವನಗೌಡಪ್ಪ ಜೆಎಸ್ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲಪತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.