ADVERTISEMENT

ಸಾಂಸ್ಕೃತಿಕ ನಗರಿಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 14:01 IST
Last Updated 13 ಆಗಸ್ಟ್ 2022, 14:01 IST
   

ಮೈಸೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ‘ಹರ್‌ ಘರ್‌ ತಿರಂಗಾ’ ಕರೆಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಹುತೇಕರು ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜಗಳನ್ನು ಕಟ್ಟಿದ್ದಾರೆ. ಎರಡು ದಿನಗಳು ಮುಂಚಿನಿಂದಲೇ ನಗರದಾದ್ಯಂತ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆ ಮಾಡಿದೆ. ಬಹುತೇಕ ಬಾವುಟಗಳು ಪಾಲಿಸ್ಟರ್‌ ಬಟ್ಟೆಯಿಂದ ತಯಾರಿಸಿದವಾಗಿವೆ.

ಅಪಾರ್ಟ್‌ಮೆಂಟ್‌ಗಳು, ಕಚೇರಿಗಳು, ಮಳಿಗೆಗಳಲ್ಲೂ ರಾಷ್ಟ್ರಧ್ವಜಗಳನ್ನು ಹಾಕಲಾಗಿದೆ. ಶನಿವಾರ ವಿವಿಧ ಶಾಲಾ–ಕಾಲೇಜಿನವರು, ಬಿಜೆಪಿಯವರು, ಪೊಲೀಸ್‌ ಇಲಾಖೆಯವರು ಮೆರವಣಿಗೆ ನಡೆಸುವ ಮೂಲಕ ಜಾಗೃತಿ ಮೂಡಿಸಿದರು. ಜನರಲ್ಲಿ ದೇಶಭಕ್ತಿಯ ಭಾವನೆ ಉದ್ದೀಪಿಸಲು ಕಾರಣವಾದರು. ಸ್ವಾತಂತ್ರ್ಯ ಸೇನಾನಿಗಳ ಹೋರಾಟ, ತ್ಯಾಗ–ಬಲಿದಾನವನ್ನು ಸ್ಮರಿಸಿದರು.

ADVERTISEMENT

ಗಮನಸೆಳೆದ ದಂಡಿಯಾತ್ರೆ

ನಟರಾಜ ಪ್ರತಿಷ್ಠಾನ ಮತ್ತು ನಟರಾಜ ಶಿಕ್ಷಣ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ‘ದಂಡಿಯಾತ್ರೆ’ ಕಾರ್ಯಕ್ರಮ ಜನರ ಗಮನಸೆಳೆಯಿತು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಸರಸ್ವತಿ ವಿಷ್ಣು ಕೋಸಂದರ್ ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಅಲ್ಲಿಂದ ಖಿಲ್ಲೆ ಮೊಹಲ್ಲಾದಲ್ಲಿರುವ ನಟರಾಜ ಶಿಕ್ಷಣ ಸಂಸ್ಥೆಗಳ ಆವರಣದವರೆಗೆ (2 ಕಿ.ಮೀ.) ವಿದ್ಯಾರ್ಥಿಗಳು ಶಿಸ್ತು ಮತ್ತು ಉತ್ಸಾಹದಿಂದ ದಂಡಿಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಗಾಂಧಿ ಮಾರ್ಗಿ ವೇಮಗಲ್ ಸೋಮಶೇಖರ್‌ ಅವರು ಗಾಂಧೀಜಿ ವೇಷಧಾರಿಯಾಗಿ ಭಾಗವಹಿಸಿದ್ದು ಆಕರ್ಷಿಸಿತು.

ಸಂಸ್ಥೆಯ ಆವರಣದಲ್ಲಿ ನಡೆದ ವೇದಿಕೆ ಸಮಾರಂಭ ಉದ್ಘಾಟಿಸಿದ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ವೂಡೇ ಪಿ. ಕೃಷ್ಣ ಮಾತನಾಡಿ, ‘ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಬೇಕು. ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಪಡೆಯುವುದು ಮುಖ್ಯವಾಗುತ್ತದೆ. ಕಟ್ಟ ಕಡೆಯ ವ್ಯಕ್ತಿಯ ಬದುಕು ಹಸನಾದಾಗ ಮಾತ್ರ ದೇಶದ ಉಳಿವು ಸಾಧ್ಯ’ ಎಂದು ತಿಳಿಸಿದರು.

ಮೇಯರ್‌ ಸುನಂದಾ ಫಾಲನೇತ್ರ, ‘ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಪ್ರತಿ ಮನೆಯಲ್ಲೂ ಹಬ್ಬದಂತೆ ಆಚರಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ’ ಎಂದು ಹೇಳಿದರು.

‘ಸರಳ ಜೀವನ, ಉದಾತ್ತ ಚಿಂತನೆಗಳಿಗೆ ಗಾಂಧೀಜಿ ಮಾದರಿಯಾಗಿದ್ದರು. ಅವರ ಬಗ್ಗೆ ಓದಿ ತಿಳಿದುಕೊಳ್ಳಬೇಕು. ಅವರ ತತ್ವಗಳು ಮತ್ತು ಸಂದೇಶಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಗಾಂಧಿ ಮಾರ್ಗಿ ವೇಮಗಲ್ ಸೋಮಶೇಖರ್ ತಿಳಿಸಿದರು.

ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ, ‘ಗಾಂಧಿ, ಅಂಬೇಡ್ಕರ್ ತತ್ವಾದರ್ಶಗಳನ್ನು ಜಗತ್ತಿನಲ್ಲಿ ಮರೆಯಲಾಗದು’ ಎಂದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಹೊಸಮಠದ ಅಧ್ಯಕ್ಷ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚೂಡಾಮಣಿ ಪ್ರಾರ್ಥಿಸಿದರು. ಡಾ.ಎಂ.ಶಾರದಾ ಸ್ವಾಗತಿಸಿದರು. ಸುನೀತಾರಾಣಿ ವಿ.ಡಿ. ನಿರೂಪಿಸಿದರು. ಡಾ.ಜಿ.ಪ್ರಸಾದಮೂರ್ತಿ ವಂದಿಸಿದರು.

‌ಸ್ಕೌಟ್ಸ್‌, ಗೈಡ್ಸ್‌ನಿಂದ ಮೆರವಣಿಗೆ

ಭಾರತ್‌ ಸ್ಕೌಟ್ಸ್ ಮತ್ತು ಗೈಡ್ಸ್‌ ವತಿಯಿಂದ ನಗರದ ಬೇಡನ್ ಪೊವೆಲ್ ಪಬ್ಲಿಕ್‌ ಶಾಲೆ ಆವರಣದಿಂದ ‘ರಾಷ್ಟ್ರಧ್ವಜದೊಂದಿಗೆ ಜಾಥಾ’ ನಡೆಸಲಾಯಿತು.

ವಿವಿಧ ಶಾಲೆಗಳ ಸ್ಕೌಟ್ಸ್, ಗೈಡ್ಸ್, ರೋವರ್ಸ್‌–ರೇಂಜರ್‌ಗಳು ತ್ರಿವರ್ಣ ಧ್ವಜ ಹಿಡಿದು ಶಿಸ್ತುಬದ್ಧ ಮೆರವಣಿಗೆ ನಡೆಸಿದರು.

ಸಮವಸ್ತ್ರಧಾರಿಗಳಾಗಿದ್ದ ಸಾವಿರಾರು ಮಕ್ಕಳು ತ್ರಿವರ್ಣ ಧ್ವಜ ಹಿಡಿದು ಜಾಥಾ ನಡೆಸಿ ಸ್ವಾತಂತ್ರ್ಯೋತ್ಸವದ ರಂಗು ಹೆಚ್ಚಿಸಿದರು.

ಜಯಚಾಮರಾಜೇಂದ್ರ ಸ್ಕೌಟ್ಸ್ ಮತ್ತು ಗೈಡ್ಸ್ ಭವನದ ಮೈದಾನದಿಂದ ಆರಂಭವಾದ ಜಾಥಾ ಮೈಸೂರು ವಿ.ವಿ ಕ್ರಾಫರ್ಡ್ ಹಾಲ್ ಎದುರಿನ ರಸ್ತೆ, ಕೌಟಿಲ್ಯ ವೃತ್ತ, ಮಹಾರಾಜ ಕಾಲೇಜು ರಸ್ತೆ, ರಾಮಸ್ವಾಮಿ ವೃತ್ತ, ಜೆಎಲ್‌ಬಿರಸ್ತೆ, ಮುಡಾ ವೃತ್ತ, ಮೆಟ್ರೋಪೋಲ್ ವೃತ್ತ, ವಿನೋಬಾ ರಸ್ತೆಯ ಮೂಲಕ ಸಂಚರಿಸಿತು. ಮಾರ್ಗದುದ್ದಕ್ಕೂ ಮಕ್ಕಳು ಭಾರತ ಮಾತೆ, ಗಾಂಧೀಜಿಗೆ ಜೈಕಾರ ಮೊಳಗಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಮಾತನಾಡಿ, ‘ದೇಶವು ಈಗ ಬಲಿಷ್ಠ ರಾಷ್ಟ್ರವಾಗಿದೆ. ಪ್ರಪಂಚಕ್ಕೆ ಮಾರ್ಗದರ್ಶನ ನೀಡುವಷ್ಟರ ಮಟ್ಟಿಗೆ ಬೆಳೆದಿದೆ. ಇದಕ್ಕೆ ಹಲವರ ತ್ಯಾಗ–ಬಲಿದಾನ ಕಾರಣವಾಗಿದೆ. ದೇಶದ ಬಗ್ಗೆ ಎಲ್ಲರೂ ಹೆಮ್ಮೆ–ಅಭಿಮಾನ ಪಡಬೇಕು’ ಎಂದರು.

ಮೇಯರ್ ಸುನಂದಾ ಫಾಲನೇತ್ರ, ಶಾಸಕ ಎಲ್.ನಾಗೇಂದ್ರ, ಡಿಡಿಪಿಐ ರಾಮಚಂದ್ರರಾಜೇ ಅರಸ್, ಪಿ.ವಿಶ್ವನಾಥ್, ಅಬ್ದುಲ್ ಜಮೀಲ್, ಪುಷ್ಪವಲ್ಲಿ, ಟಿ.ಎಸ್.ರವಿಶಂಕರ್, ಗುಂಡಪ್ಪಗೌಡ, ವರಪ್ರಸಾದ್, ಬಿ.ಕೆ.ಬಸವರಾಜು ಭಾಗವಹಿಸಿದ್ದರು.

ಸ್ಕೌಟ್ಸ್‌ನ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಜಮೀಲ್ ಸ್ವಾಗತಿಸಿದರು.

ಪೊಲೀಸರಿಂದ ‘ಸಂಕಲ್ಪ ನಡಿಗೆ’

ನಗರ ಪೊಲೀಸರು ರಾಷ್ಟ್ರಧ್ವಜ ಹಿಡಿದು ‘ಸಂಕಲ್ಪ ನಡಿಗೆ’ ಕಾರ್ಯಕ್ರಮದ ಮೂಲಕ ಗಮನಸೆಳೆದರು.

ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಿಂದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದವರೆಗೆ ಮೆರವಣಿಗೆ ನಡೆಯಿತು. ನಗರದ ಎಲ್ಲ ಠಾಣೆಗಳ ಪೊಲೀಸರು, ಸಂಚಾರ ಪೊಲೀಸರು, ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪಡೆ, ನಗರ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ, ಗೃಹರಕ್ಷಕ ದಳದ ಸಿಬ್ಬಂದಿ, ಮೌಂಟೆಡ್‌ ಪೊಲೀಸರು, ಅಶ್ವಾರೋಹಿ ದಳದವರು ಹೈವೇ ಸರ್ಕಲ್, ಬಂಬೂಬಜಾರ್ ಮಾರ್ಗ, ಹಳೆಯ ಆರ್‌ಎಂಸಿ ರಸ್ತೆ, ಆಯುರ್ವೇದ ವೃತ್ತ, ಸಯ್ಯಾಜಿರಾವ್ ರಸ್ತೆ, ಕೆ.ಆರ್.ವೃತ್ತ–ನಗರ ಬಸ್ ನಿಲ್ದಾಣದ ರಸ್ತೆಯ ಮೂಲಕ ಅರಮನೆ ಆವರಣ ತಲುಪಿದರು. ಭಾರತ ಮಾತೆಗೆ ಜೈಕಾರ ಮೊಳಗಿತು.

ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಡಿಸಿಪಿಗಳಾದ ಪ್ರದೀಪ್ ಗುಂಟಿ, ಎಂ.ಎಸ್. ಗೀತಾ ಪ್ರಸನ್ನ ಕುದುರೆ ಸವಾರಿ ಮಾಡಿದರು. ಎಸಿಪಿಗಳಾದ ಎಂ.ಶಿವಶಂಕರ್, ಕೆ.ಅಶ್ವಥ್ ನಾರಾಯಣ, ಎಂ.ನಾರಾಯಣಸ್ವಾಮಿ, ಪರಶುರಾಮಪ್ಪ, ಎಂ.ಜಿ.ನಾಗರಾಜು, ಎಚ್.ಎಂ.ಚಂದ್ರಶೇಖರ್, ಇನ್‌ಸ್ಪೆಕ್ಟರ್‌ಗಳಾದ ರವಿಶಂಕರ್, ವೆಂಕಟೇಶ್ ಪಾಲ್ಗೊಂಡಿದ್ದರು.

ಬಿಜೆಪಿಯಿಂದ ಬೈಕ್ ರ‍್ಯಾಲಿ

ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಹಾಗೂ ಬೆಂಬಲಿಗರು ದ್ವಿಚಕ್ರವಾಹನಗಳಿಗೆ ತ್ರಿವರ್ಣ ಧ್ವಜ ಕಟ್ಟಿಕೊಂಡು ನಗರದಲ್ಲಿ ರ‍್ಯಾಲಿ ನಡೆಸಿದರು.

ಡಾ.ರಾಜ್‌ಕುಮಾರ್‌ ಉದ್ಯಾನ ಆರಂಭವಾದ ರ‍್ಯಾಲಿಗೆ ಸಂಸದ ಪ್ರತಾಪ ಸಿಂಹ ಚಾಲನೆ ನೀಡಿ, ಬುಲೆಟ್‌ ಸವಾರಿ ಮಾಡಿದರು.

ಹಾರ್ಡಿಂಜ್ ವೃತ್ತ, ವಸ್ತುಪ್ರದರ್ಶನ ಪ್ರಾಧಿಕಾರದ ರಸ್ತೆ, ಗನ್ ಹೌಸ್ ವೃತ್ತ, ಬಸವೇಶ್ವರ ವೃತ್ತ, ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತ, ಜೆಎಲ್‌ಬಿ ರಸ್ತೆ, ದಾಸಪ್ಪ ವೃತ್ತ, ಬಾಬು ಜಗಜಗಜೀವನ್ ರಾಂ ವೃತ್ತ, ಆಯುರ್ವೇದ ವೃತ್ತ, ಅಶೋಕ ವೃತ್ತ, ದೊಡ್ಡ ಗಡಿಯಾರ ರಸ್ತೆಯ ಮಾರ್ಗವಾಗಿ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದವರೆಗೆ ರ‍್ಯಾಲಿ ಸಂಚರಿಸಿತು. ಭಾರತ್ ಮಾತಾ ಕಿ ಜೈ ಘೋಷಣೆಗಳು ಮೊಳಗಿದವು. ಕೆಲವರು ಆಟೊರಿಕ್ಷಾಗಳಲ್ಲಿ ಪಾಲ್ಗೊಂಡಿದ್ದರು.

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಜಯಶಂಕರ್, ಪ್ರಧಾನ ಕಾರ್ಯದರ್ಶಿಗಳಾದ ಎಚ್.ಜಿ.ಗಿರಿಧರ್, ವಿ.ಸೋಮಸುಂದರ್, ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ಎಂ.ಜೆ.ಕಿರಣ್‌ಗೌಡ, ಮುಖಂಡ ಎಂ.ಕೆ.ಶಂಕರ್ ಪಾಲ್ಗೊಂಡಿದ್ದರು.

ನೈರುತ್ಯ ರೈಲ್ವೆ ಮೈಸೂರು ವಿಭಾಗ

ನೈರುತ್ಯ ರೈಲ್ವೆ ಮೈಸೂರು ವಿಭಾಗದ ಸಿಬ್ಬಂದಿ ‘ಹರ್ ಘರ್ ತಿರಂಗಾ’ ಕಾರ್ಯಕ್ರಮದ ಅಂಗವಾಗಿ ಮನೆಗಳಲ್ಲಿ ಹಾಗೂ ವಿಭಾಗದಾದ್ಯಂತ ಎಲ್ಲ 118 ರೈಲು ನಿಲ್ದಾಣಗಳಲ್ಲಿ ರಾಷ್ಟ್ರಧ್ವಜವನ್ನು ಶನಿವಾರ ಹಾರಿಸಿದರು.

ಮೈಸೂರು ವಿಭಾಗದ ಸಿಬ್ಬಂದಿ ಶಾಖೆಯಿಂದ, ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ನೌಕರರಿಗೆ 6,500 ತ್ರಿವರ್ಣ ಧ್ವಜಗಳನ್ನು ವಿತರಿಸಲಾಯಿತು. ನಿಲ್ದಾಣಗಳ ಪ್ರಮುಖ ಸ್ಥಳಗಳಲ್ಲಿ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಗಿದೆ. ಮೈಸೂರು, ಹಾಸನ, ಸುಬ್ರಹ್ಮಣ್ಯ ರೋಡ್, ಅರಸೀಕೆರೆ, ಶಿವಮೊಗ್ಗ ಟೌನ್, ದಾವಣಗೆರೆ, ಹರಿಹರ, ಚಿತ್ರದುರ್ಗ ಮತ್ತು ಮೈಸೂರಿನ ವಿಭಾಗೀಯ ಕಛೇರಿಯಲ್ಲಿ ‘ಆಜಾದಿ ಕಾ ಅಮೃತ್ ಮಹೋತ್ಸವ್’ ಮತ್ತು ‘ಹರ್ ಘರ್ ತಿರಂಗಾ’ದ ಕುರಿತಾದ ಸೆಲ್ಫಿ ಸ್ಟ್ಯಾಂಡ್‌ಗಳನ್ನು ಸ್ಥಾಪಿಸಲಾಗಿದೆ. ರೈಲು ಎಂಜಿನ್‌ಗಳು ಮತ್ತು ಬೋಗಿಗಳ ಮೇಲೆ ‘ಹರ್ ಘರ್ ತಿರಂಗಾದ’ದ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ.

ಮೈಸೂರು ರೈಲು ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಪರವಾನಗಿ ಪಡೆದಿರುವ ರೈಲ್ವೆ ಸಹಾಯಕರು ಮತ್ತು ಗುತ್ತಿಗೆ ಆದಾರದಲ್ಲಿ ಕೆಲಸ ಮಾಡುವ ಸ್ವಚ್ಛತಾ ಸಿಬ್ಬಂದಿಗೆ ಉಚಿತವಾಗಿ ರಾಷ್ಟ್ರಧ್ವಜಗಳನ್ನು ವಿತರಿಸಲಾಯಿತು.

ನೈರುತ್ಯ ರೈಲ್ವೆ ಮೈಸೂರು ವಿಭಾಗದ ಮಹಿಳಾ ಕ್ಷೇಮಾಭಿವೃದ್ಧಿ ಸಂಘಟನೆಯ ಅಧ್ಯಕ್ಷೆ ಪೂಜಾ ಅಗರ್‌ವಾಲ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.