ADVERTISEMENT

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ: ಅಸ್ಸಾಂ–ಮೈಸೂರು ಬೆಸೆದ ಉತ್ಸವ

ದಾಖಲೆ ನಿರ್ಮಿಸಿದ ವಲಸಿಗ ಕನ್ನಡತಿ ಭಾಗೀರಥಿ ಬಾಯಿ ಕದಂ

ಕೆ.ನರಸಿಂಹ ಮೂರ್ತಿ
Published 8 ಜನವರಿ 2026, 4:18 IST
Last Updated 8 ಜನವರಿ 2026, 4:18 IST
   

ಮೈಸೂರು: ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೂ– ಅಸ್ಸಾಂನಲ್ಲಿರುವ ವಲಸಿಗ ಕನ್ನಡತಿ ಭಾಗೀರಥೀಬಾಯಿ ಕದಂ ಅವರಿಗೂ ವಿಶೇಷ ನಂಟು. ಉತ್ಸವವು ಮೈಸೂರು ಮತ್ತು ಅಸ್ಸಾಂ ಅನ್ನು ಬೆಸೆದಿರುವುದರಿಂದ ಇದು ವಿಶೇಷ ಅನುಬಂಧವೂ ಹೌದು.

ಉತ್ಸವಕ್ಕೆ ಮುನ್ನುಡಿ ಬರೆದ ‘ಅಕ್ಕ’ ಉತ್ಸವಕ್ಕೆ ನಾಟಕವನ್ನು ನಿರ್ದೇಶಿಸಲು ಅಂದಿನ ನಿರ್ದೇಶಕ ಪ್ರಸನ್ನ ಅವರ ಆಹ್ವಾನದ ಮೇರೆಗೆ ಅಸ್ಸಾಂನಿಂದ ಬಂದಿದ್ದ ಭಾಗೀರಥಿಯವರು, ಒಂದೂವರೆ ದಶಕದ ಬಳಿಕ ರಂಗಾಯಣದ ನಿರ್ದೇಶಕರಾಗಿ ಬಂದಿದ್ದು ವಿಶೇಷ. ನಂತರ ಎರಡು ಬಾರಿ ಉತ್ಸವವನ್ನು ಆಯೋಜಿಸಿದ್ದು ದಾಖಲೆ. ಉತ್ಸವದಲ್ಲಿ ನಟಿ, ಪ್ರೇಕ್ಷಕಿಯಾಗಿದ್ದ ಅವರು ಉತ್ಸವಗಳನ್ನು ಆಯೋಜಿಸಿದ ರಂಗಾಯಣದ ಏಕೈಕ ಮಹಿಳಾ ನಿರ್ದೇಶಕರೆಂಬ ಹೆಗ್ಗಳಿಕೆಯೂ ಇದೆ.

ಮದುವೆಯಾದ ಬಳಿಕ ಪತಿಯ ಊರಾದ ಅಸ್ಸಾಂಗೆ ತೆರಳಿ, ಅಲ್ಲಿಯೇ ರಂಗಕರ್ಮಿಯಾಗಿ, ವಲಸೆಯ ಜೀವನವನ್ನು ಕಂಡುಂಡ ಅವರು 2018ರ ಉತ್ಸವದಲ್ಲಿ ‘ವಲಸೆ’ ಎಂಬುದನ್ನೇ ಆಶಯನ್ನಾಗಿಸಿದ್ದು ಇನ್ನೊಂದು ವಿಶೇಷ. ಮಹಿಳೆಯಾಗಿ ಲಿಂಗ ಅಸಮಾನತೆಯನ್ನು ಎದುರುಗೊಂಡ ಕಾರಣಕ್ಕೆ 2019ರಲ್ಲಿ ‘ಲಿಂಗ ಸಮಾನತೆ‘ ಆಶಯದಲ್ಲೇ ಉತ್ಸವವನ್ನು ರೂಪಿಸಿದ್ದರು.

ADVERTISEMENT

ಸರಸಮ್ಮನ ಸಮಾಧಿ: ‘ಗುವಾಹಟಿಯ ಮನೆಯಲ್ಲಿದ್ದಾಗ ಪ್ರಸನ್ನ ಅವರಿಂದ ಕರೆ ಬಂತು. ಅಕ್ಕ ಉತ್ಸವಕ್ಕಾಗಿ ರಂಗಾಯಣ ಕಲಾವಿದರ ಸಹಯೋಗದಲ್ಲಿ ನಾಟಕವೊಂದನ್ನು ನಿರ್ದೇಶಿಸಬೇಕು ಎಂದು ಕೇಳಿದ್ದರು. ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಪದವಿ ಪಡೆದು ಹೊರ ಬಂದ ಬಳಿಕ, ಬಿ.ವಿ.ಕಾರಂತರ ಕೋರಿಕೆ ಮೇರೆಗೆ ರಂಗಾಯಣ ಕಲಾವಿದರಿಗೆ ಒಂದು ಕಾರ್ಯಾಗಾರ ನಡೆಸಿಕೊಟ್ಟಿದ್ದೆ. ಅದೇ ಕಲಾವಿದರಿಗೆ ನಾಟಕವೊಂದನ್ನು ನಿರ್ದೇಶಿಸುವ ಸವಾಲು ಎದುರಾಗಿತ್ತು. ಆದರೂ ಒಂದೂವರೆ ವರ್ಷದ ಮಗಳನ್ನು ಮಡಿಲಲ್ಲಿಟ್ಟುಕೊಂಡು ರೈಲಿನಲ್ಲಿ ಮೂರು ರಾತ್ರಿ, ಮೂರು ಹಗಲು ಪಯಣಿಸಿ ಮೈಸೂರಿಗೆ ಬಂದೆ’ ಎಂದು ಅವರು ಸ್ಮರಿಸಿದರು.

‘ಯಾವ ನಾಟಕವನ್ನು ನಿರ್ದೇಶಿಸಬೇಕು ಎಂದೂ ಆಲೋಚಿಸಿರಲಿಲ್ಲ. ಅದು ಮೊದಲ ರಾಷ್ಟ್ರೀಯ ನಾಟಕೋತ್ಸವ. ಶಿವರಾಮ ಕಾರಂತರ ‘ಸರಸಮ್ಮನ ಸಮಾಧಿ’ ಕೃತಿಯನ್ನೇ ನಾಟಕವಾಗಿಸಲು ನಿರ್ಧರಿಸಿದೆ. ಅದೇ ವೇಳೆ ಭೂಮಿಗೀತ ರಂಗಮಂದಿರದ ನವೀಕರಣವೂ ನಡೆಯುತ್ತಿತ್ತು. ನಾಟಕವೂ ರೂಪು ತಳೆಯುತ್ತಿತ್ತು. ಅದು, ರಂಗಮಂದಿರದ ಹೊಸ ರಂಗಮಂಚದಲ್ಲಿ ಪ್ರದರ್ಶನಗೊಂಡ ಮೊದಲ ನಾಟಕ. ಆಗ ಬಿ.ವಿ.ಕಾರಂತರ ಉಪಸ್ಥಿತಿಯೂ ಇದ್ದುದು ಸಂತಸದ ನೆನಪು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಬಹುರೂಪಿ ಉತ್ಸವವನ್ನು ಸಂಘಟಿಸಲು ದೊರಕಿದ ಅವಕಾಶಗಳ ಜೊತೆಗೇ ಹಲವು ಕಠಿಣ ಪರಿಸ್ಥಿತಿಗಳನ್ನು ಎದುರಿಸಿದೆ. ಅದು ನನ್ನ ರಂಗ ಜೀವನದ ಕಲಿಕೆಯಾಯಿತು
ಭಾಗೀರಥಿ ಬಾಯಿ ಕದಂ

ಆಕ್ಸಿಜನ್‌ ಪೈಪ್‌ ಧರಿಸಿ ಬಂದಿದ್ದ ಗಿರೀಶ್‌ ಕಾರ್ನಾಡ್‌‌

‘ವಲಸೆ ಆಶಯದ ಅಡಿ ನಡೆದ ಉತ್ಸವವನ್ನು ಉದ್ಘಾಟಿಸಲು ನಾಟಕಕಾರ ಗಿರೀಶ್‌ ಕಾರ್ನಾಡ್‌ ಅವರು ಅನಾರೋಗ್ಯದ ನಡುವೆಯೂ, ಆಕ್ಸಿಜನ್‌ ಪೈಪ್‌ಗಳನ್ನು ಧರಿಸಿಯೇ ಬಂದಿದ್ದರು’ ಎಂದು ಭಾಗೀರಥಿ ಸ್ಮರಿಸಿದರು.

‘80ರ ದಶಕದಲ್ಲಿ ನಾನು ನೀನಾಸಂ ವಿದ್ಯಾರ್ಥಿಯಾಗಿದ್ದಾನಿಂದಲೂ ಕಾರ್ನಾಡರು ಪರಿಚಯವಿದ್ದರು. ಕಾನೂರು ಸುಬ್ಬಮ್ಮ ಹೆಗ್ಗಡತಿ ಕಾದಂಬರಿಯ ಹಿಂದಿ ಧಾರಾವಾಹಿಯಲ್ಲಿ ಹೆಗ್ಗಡತಿಯಾಗಿ ಅವರೊಂದಿಗೆ ಅಭಿನಯಿಸಿದ್ದೆ. ಉತ್ಸವಕ್ಕೆ ಕರೆದ ಕೂಡಲೇ ಒಪ್ಪಿಕೊಂಡರು. ಉದ್ಘಾಟನೆಗೆ ಬಂದ ಅವರನ್ನು ಎದುರುಗೊಂಡಾಗ ಅಚ್ಚರಿಯಾಗಿತ್ತು. ಏಕೆಂದರೆ ಅವರ ಮೂಗಿನಲ್ಲಿ ಆಕ್ಸಿಜನ್‌ ಪೈಪ್‌ಗಳಿದ್ದವು. ಕೈಯಲ್ಲಿ ಆಕ್ಸಿಜನ್‌ ಬಾಟಲ್‌ ಇತ್ತು’ ಎಂದು ಆ ದಿನಗಳನ್ನು ನೆನಪಿಸಿಕೊಂಡರು.

‘ಉತ್ಸವದ ಎಲ್ಲ ವೇದಿಕೆಗಳಿಗೂ ಅವರನ್ನು ನಡೆದುಕೊಂಡೇ ಕರೆದೊಯ್ದ ಕಾರಣ, ಚಿತ್ರಕಲಾ ಪ್ರದರ್ಶನದ ಉದ್ಘಾಟನೆಗೆ ಕಲಾಮಂದಿರದ ಬಳಿ ಹೆಚ್ಚು ದಣಿವಾಗಿ ಮೆಟ್ಟಿಲು ಹತ್ತಲಾಗದೆ ಕುಳಿತುಬಿಟ್ಟರು. ವಾತಾವರಣ ಗಂಭೀರವಾಯಿತು. ಸುದ್ದಿ ಛಾಯಾಗ್ರಾಹಕರು ಸುತ್ತುವರಿದರು. ನಂತರ, ಆ ಘಟನೆ ಬಗ್ಗೆ ಕಾರ್ನಾಡರು ಬೇಸರ ವ್ಯಕ್ತಪಡಿಸಿದರೂ ಉತ್ಸವ ಚೆನ್ನಾಗಿ ನಡೆದ ಬಗ್ಗೆ ಪ್ರಶಂಶಿಸಿದ್ದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.