
ಮೈಸೂರು: ‘ರಂಗಾಯಣದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವು ಜ.11ರಿಂದ 18ರವರೆಗೆ ನಡೆಯಲಿದ್ದು, ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಈ ಬಾರಿ 25 ವರ್ಷದ ಆಚರಣೆಯಾಗಿದ್ದು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳ ಕುರಿತು ನಾಟಕೋತ್ಸವ ನಡೆಯುತ್ತಿರುವುದು ವಿಶೇಷವಾಗಿದೆ’ ಎಂದರು.
‘ರಂಗಾಯಣದ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಬೇಕು. ಕುಡಿಯುವ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ನೋಡಲ್ ಅಧಿಕಾರಿ ನಿಯೋಜಿಸಬೇಕು’ ಎಂದರು.
‘ಸಾವಿರಾರು ಮಂದಿ ಭಾಗವಹಿಸುವುದರಿಂದ ಅಗತ್ಯ ಬಂದೋಬಸ್ತ್ ಕೈಗೊಳ್ಳಬೇಕು. ನೂಕು ನುಗ್ಗಲು ಉಂಟಾಗದಂತೆ ನೋಡಿಕೊಳ್ಳಬೇಕು. ವಾಹನ ನಿಲುಗಡೆಗೆ ಉತ್ತಮ ವ್ಯವಸ್ಥೆ ಕಲ್ಪಿಸಬೇಕು. ಕೆಎಸ್‌ಆರ್‌ಟಿಸಿಯಿಂದ ನಗರದ ಮುಖ್ಯ ಸ್ಥಳಗಳಿಂದ ಸಂಜೆ 6ರಿಂದ 10ರವರೆಗೆ ರಂಗಾಯಣಕ್ಕೆ ಬಸ್ ವ್ಯವಸ್ಥೆ ಮಾಡಬೇಕು. ಅಗ್ನಿಶಾಮಕ ವಾಹನವನ್ನು ದಿನದ 24 ಗಂಟೆಯೂ ನಿಯೋಜಿಸಬೇಕು’ ಎಂದು ತಿಳಿಸಿದರು.
‘ಮಕ್ಕಳ ಬಹುರೂಪಿಯು ಜ.11ರಿಂದ 18ರವರೆಗೆ ಬೆಳಗಿನ ಅವಧಿಯಲ್ಲಿ ನಡೆಯಲಿದೆ. ಶಿಕ್ಷಣ ಇಲಾಖೆಯಿಂದ ರಂಗಾಯಣಕ್ಕೆ ಮಕ್ಕಳ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಬೇಕು’ ಎಂದರು.
ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಮಾತನಾಡಿ, ‘ಅಂಬೇಡ್ಕರ್ ನೀಡಿರುವ ಸಂವಿಧಾನದಿಂದ ಪ್ರತಿಯೊಬ್ಬರಿಗೂ ಸಮಾನವಾಗಿ ಬದುಕುವ ಅವಕಾಶ ದೊರಕಿದೆ. ಅವರಿಗೆ ಗೌರವ ಸಲ್ಲಿಸುವ ರೀತಿಯಲ್ಲಿ ನಾಟಕೋತ್ಸವ ಆಯೋಜಿಸಲಾಗುತ್ತಿದೆ. ವಿವಿಧ ಭಾಷೆಗಳ 24 ನಾಟಕ ಹಾಗೂ ಮಕ್ಕಳ 6 ನಾಟಕಗಳು, ವಿಚಾರಸಂಕಿರಣ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯಲಿದೆ’ ಎಂದು ಮಾಹಿತಿ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ರಂಗಾಯಣದ ಉಪ ನಿರ್ದೇಶಕ ಎಂ.ಡಿ.ಸುದರ್ಶನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.