ADVERTISEMENT

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ: ‘ಬಹುರೂಪಿ’ ಬೆಳ್ಳಿಹಬ್ಬಕ್ಕೆ ಭರದ ಸಿದ್ಧತೆ

ಬಾಬಾಸಾಹೇಬ್‌ರ ಆಶಯಕ್ಕೆ ರಂಗಾನುಸಂಧಾನ l ರಂಗಾಯಣದಲ್ಲಿ 11ರಿಂದ ಉತ್ಸವ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 4:22 IST
Last Updated 8 ಜನವರಿ 2026, 4:22 IST
ಮೈಸೂರಿನ ರಂಗಾಯಣದಲ್ಲಿ ಬುಧವಾರ ‘ಬಹುರೂಪಿ ಬಾಬಾಸಾಹೇಬ್’ ರಾಷ್ಟ್ರೀಯ ನಾಟಕೋತ್ಸವದ ಪೋಸ್ಟರ್ ಅನ್ನು ನಿರ್ದೇಶಕ ಸತೀಶ್‌ ತಿಪಟೂರು ಬಿಡುಗಡೆ ಮಾಡಿದರು. ಸುರೇಶ್‌ ಬಾಬು, ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಬಸವರಾಜ ದೇವನೂರು, ಪ್ರೊ.ಎಸ್.ನರೇಂದ್ರ ಕುಮಾರ್, ಪ್ರೊ.ಜೆ.ಸೋಮಶೇಖರ್, ಎಂ.ಡಿ.ಸುದರ್ಶನ, ಕೆ.ಆರ್.ನಂದಿನಿ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ
ಮೈಸೂರಿನ ರಂಗಾಯಣದಲ್ಲಿ ಬುಧವಾರ ‘ಬಹುರೂಪಿ ಬಾಬಾಸಾಹೇಬ್’ ರಾಷ್ಟ್ರೀಯ ನಾಟಕೋತ್ಸವದ ಪೋಸ್ಟರ್ ಅನ್ನು ನಿರ್ದೇಶಕ ಸತೀಶ್‌ ತಿಪಟೂರು ಬಿಡುಗಡೆ ಮಾಡಿದರು. ಸುರೇಶ್‌ ಬಾಬು, ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಬಸವರಾಜ ದೇವನೂರು, ಪ್ರೊ.ಎಸ್.ನರೇಂದ್ರ ಕುಮಾರ್, ಪ್ರೊ.ಜೆ.ಸೋಮಶೇಖರ್, ಎಂ.ಡಿ.ಸುದರ್ಶನ, ಕೆ.ಆರ್.ನಂದಿನಿ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ   
ಜ.18ರ ವರೆಗೆ ರಂಗಸುಗ್ಗಿ | 24 ನಾಟಕಗಳ ಪ್ರದರ್ಶನ ಚಿತ್ರಕಲೆ, ಕರಕುಶಲ ಮೇಳ

ಮೈಸೂರು: ರಂಗಾಯಣದ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ಕ್ಕೆ 25ರ ಸಂಭ್ರಮ. ಈ ಬಾರಿಯ ಉತ್ಸವ 11ರಿಂದ ಗರಿಗೆದರಲಿದೆ. ರಂಗ ಸಂಕ್ರಾಂತಿಗೆ ಭರದ ಸಿದ್ಧತೆಗಳೂ ನಡೆದಿವೆ. 

‘ಬಹುರೂಪಿ ಬಾಬಾ ಸಾಹೇಬ್‌– ಸಮತೆಯೆಡೆಗೆ ನಡಿಗೆ’ ಆಶಯದಲ್ಲಿ ಉತ್ಸವ ಕಟ್ಟಲಾಗಿದ್ದು, ಡಾ.ಬಿ.ಆರ್.ಅಂಬೇಡ್ಕರ್‌‌ ಅವರನ್ನು ನಾಟಕ, ಚಲನಚಿತ್ರ, ವಿಚಾರ ಸಂಕಿರಣ, ಗಾಯನ, ಜನಪದ ನೃತ್ಯದ ಮೂಲಕ ‘ಅನುಸಂಧಾನ’ ನಡೆಸಲಾಗುತ್ತಿದೆ. 

ಸಾಂಚಿ ಸ್ತೂಪ‍ದ ಕಮಾನುಗಳು ರಂಗಾಯಣದ ಅಂಗಳದಲ್ಲಿ ನಿಂತಿವೆ. ಅಲ್ಲಿ ಬುದ್ಧ– ಭೀಮಯಾನದ ನೋಟವನ್ನು ತೆರೆದಿಡಲಾಗಿದೆ. ಅಂಬೇಡ್ಕರ್ ನಡೆಸಿದ ಸಾಮಾಜಿಕ ಹೋರಾಟಕ್ಕಾಗಿ ರಂಗದ ಪ್ರತಿಸ್ಪಂದನೆಯ ನಾಟಕಗಳು ಬಹುರೂಪಿಯಲ್ಲಿ ಜ.11ರಿಂದ ಬಿಡುಗಡೆಯಾಗಲಿದ್ದು, ಬಹುಜನರ, ಬಹುಭಾಷೆ– ಸಂಸ್ಕೃತಿಯ ‘ಬಹುರೂಪಿ’ ಅನಾವರಣಗೊಳ್ಳಲಿದೆ. 

ADVERTISEMENT

ಜ.18ರವರೆಗೆ ಇಲ್ಲಿ ವಿವಿಧ ಭಾಷೆಗಳ ನಾಟಕಗಳು, ಜಾನಪದೋತ್ಸವ, ಚಲನಚಿತ್ರೋತ್ಸವ, ಚಿತ್ರಕಲಾ ಪ್ರದರ್ಶನ, ಬಾಬಾಸಾಹೇಬ್ ಸಂಗೀತ ಸ್ಮೃತಿ, ರಾಷ್ಟ್ರೀಯ ವಿಚಾರಸಂಕಿರಣ, ಪುಸ್ತಕ– ಕರಕುಶಲ– ಆಹಾರ ಮೇಳಗಳು ಮೇಳೈಸಲಿವೆ. ‌

‘ಬಾಬಾಸಾಹೇಬರನ್ನು ಸಾಂಸ್ಕೃತಿಕ ಅನುಸಂಧಾನ ಮಾಡುವ ನಿಟ್ಟಿನಲ್ಲಿ ಉತ್ಸವ ರೂಪಿಸಲಾಗಿದೆ. ಇದೇ ಮೊದಲ ಬಾರಿ 8 ದಿನ ನಡೆಯಲಿದೆ ಎಂದು ರಂಗಾಯಣ ನಿರ್ದೇಶಕ ಸತೀಶ್‌ ತಿ‍ಪಟೂರು, ಬುಧವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಂಗೀತ– ಹಾಡುಗಳ ಮೂಲಕ ಬಾಬಾ ಸಾಹೇಬರನ್ನು ಕಟ್ಟಿಕೊಟ್ಟಿರುವ ಹಾಡುಗಾರರಾದ ಎಚ್‌.ಜನಾರ್ಧನ್, ಅನಿರುದ್ಧ ವಂಕರ್, ಪಂಜಾಬ್‌ನ ಗಿನ್ನಿಮಾಹಿ ಮತ್ತು ತಂಡದವರು ಕಲಾಮಂದಿರದಲ್ಲಿ ಹಾಡಲಿದ್ದಾರೆ. ಭಿನ್ನರೂಪಗಳಲ್ಲಿ ಬಾಬಾ ಸಾಹೇಬರನ್ನು ನೋಡುವ ಪ್ರಯತ್ನವಿದು’ ಎಂದು ಹೇಳಿದರು. 

‘ಉತ್ಸವ 9ರಿಂದಲೇ ಕಳೆಗಟ್ಟಲಿದ್ದು, ಅಂದು ಬೆಳಿಗ್ಗೆ 10.30ಕ್ಕೆ ಭೂಮಿಗೀತದಲ್ಲಿ ಬೀದಿನಾಟಕೋತ್ಸವಕ್ಕೆ ಪಾಲಿಕೆ ಆಯುಕ್ತ ಶೇಖ್‌ ತನ್ವೀರ್ ಆಸೀಫ್ ಚಾಲನೆ ನೀಡುವರು. ನಗರದ ವಿವಿಧೆಡೆ ರಂಗತಂಡಗಳು ಜ.12ರ ವರೆಗೆ ಬೀದಿ ನಾಟಕಗಳನ್ನು ಪ್ರದರ್ಶಿಸುವರು’ ಎಂದರು. 

‘11ರಂದು ಬೆಳಿಗ್ಗೆ 10.30ಕ್ಕೆ ಭೂಮಿಗೀತದಲ್ಲಿ ಬಹುರೂಪಿ ಚಲನಚಿತ್ರೋತ್ಸವಕ್ಕೆ ಲೇಖಕ ಬರಗೂರು ರಾಮಚಂದ್ರಪ್ಪ ಚಾಲನೆ ನೀಡಿದರೆ, ಸಂಜೆ 6ಕ್ಕೆ ಕಿಂದರಿಜೋಗಿ ಆವರಣದಲ್ಲಿ ಜನಪದ ರಂಗ ಉತ್ಸವವನ್ನು ರಾಜ್ಯ ಬಯಲಾಟ ಅಕಾಡೆಮಿ ಅಧ್ಯಕ್ಷ ದುರ್ಗಾದಾಸ್‌ ಉದ್ಘಾಟಿಸುವರು. 12ರಂದು ಸಂಜೆ 5.30ಕ್ಕೆ ವನರಂಗದಲ್ಲಿ ಬಹುರೂಪಿ ಉದ್ಘಾಟನೆ ನಡೆಯಲಿದೆ. ‘ಮಕ್ಕಳ ಬಹುರೂಪಿ’ ಅನ್ನು ಕಲಾಮಂದಿರದಲ್ಲಿ ಆಯೋಜಿಸಲಾಗಿದೆ. 12ರಿಂದ 17ರ ವರೆಗೆ 6 ಮಕ್ಕಳ ನಾಟಕಗಳು ಪ್ರದರ್ಶನಗೊಳ್ಳಲಿವೆ’ ಎಂದು ತಿಳಿಸಿದರು. 

‘ಬಹುರೂಪಿ ರಾಷ್ಟ್ರೀಯ ವಿಚಾರ ಸಂಕಿರಣವು ಜ.17ರಂದು ಬೆಳಿಗ್ಗೆ 10.30ಕ್ಕೆ ಕಿರುರಂಗಮಂದಿರದಲ್ಲಿ ಆರಂಭವಾಗಲಿದೆ. ಜಾಗತಿಕ ಪ್ರಜಾಪ್ರಭುತ್ವಕ್ಕೆ ಧಕ್ಕೆಗಳು, ಅಂಬೇಡ್ಕರ್ ಪರಿಕಲ್ಪನೆಯ ಪ್ರಜಾಪ್ರಭುತ್ವ, ಅಸಮಾನತೆ ನಿರ್ಮೂಲನೆ, ಫ್ಯಾಸಿಸಂ ವಿರುದ್ಧ ಪ್ರತಿರೋಧದ ಸಂಕೇತ ಸಂವಿಧಾನ, ಅಂಬೇಡ್ಕರ್ ಆರ್ಥಿಕ ಚಿಂತನೆಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ತಜ್ಞರು, ರಂಗಕರ್ಮಿಗಳು, ವಿಮರ್ಶಕರು ಮಂಡಿಸುವರು’ ಎಂದು ಮಾಹಿತಿ ನೀಡಿದರು.   

ಸಮಾಜ ಕಲ್ಯಾಣ ಇಲಾಖೆಯ ಗೌರವ ಸಲಹೆಗಾರ ಬಸವರಾಜ ದೇವನೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್‌.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ, ರಂಗ ಸಮಾಜದ ಸದಸ್ಯ ಸುರೇಶ್‌ ಬಾಬು, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಎಸ್.ನರೇಂದ್ರ ಕುಮಾರ್, ಪ್ರೊ.ಜೆ.ಸೋಮಶೇಖರ್, ಪರಿಸರ ತಜ್ಞ ‘ಮ್ಯಾನ್’ ಕೆ.ಮನು, ರಂಗಾಯಣ ಕಲಾವಿದರಾದ ಕೆ.ಆರ್.ನಂದಿನಿ, ಗೀತಾ ಮೋಂಟಡ್ಕ, ಬಿ.ಎನ್‌.ಶಶಿಕಲಾ ಹಾಜರಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.