ADVERTISEMENT

ಒಳ್ಳೆಯ ಸಂದೇಶ, ಭಾವನೆಗಳೊಂದಿಗೆ ಪಯಣಿಸುವ ‘ಬೈರಾಗಿ’

ಚಲನಚಿತ್ರ ಬಿಡುಗಡೆ ಪೂರ್ವ ಕಾರ್ಯಕ್ರಮ ಚಾಮರಾಜನಗರದಲ್ಲಿ ನಾಳೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 15:30 IST
Last Updated 24 ಜೂನ್ 2022, 15:30 IST
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ನಾಯಕ ನಟ ಶಿವರಾಜ್‌ ಕುಮಾರ್
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ನಾಯಕ ನಟ ಶಿವರಾಜ್‌ ಕುಮಾರ್   

ಮೈಸೂರು: ‘ಬೈರಾಗಿ’ ಚಲನಚಿತ್ರವು ಒಳ್ಳೆಯ ಸಂದೇಶ ಹೊಂದಿದ್ದು, ಭಾವನೆಗಳೊಂದಿಗೆ ಪಯಣಿಸುತ್ತದೆ. ಅಪರೂಪದ ತತ್ವವೊಂದನ್ನು ಹೇಳಲು ಪ್ರಯತ್ನಿಸಿದ್ದೇವೆ’ ಎಂದು ನಾಯಕ ನಟ ಶಿವರಾಜ್‌ ಕುಮಾರ್ ತಿಳಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಆಸೆ–ಆಕಾಂಕ್ಷೆಗಳಿಗಿಂತಲೂ ಮಾನವೀಯತೆ ದೊಡ್ಡದು ಎನ್ನುವುದನ್ನು ಕಟ್ಟಿಕೊಡಲಾಗಿದೆ. ಸಮಾಜದಲ್ಲಿ ಕೆಟ್ಟದ್ದೇನಾದರೂ ನಡೆಯುತ್ತಿದ್ದರೆ ಅದನ್ನು ನೋಡಿಕೊಂಡು ಸುಮ್ಮನಿರುವವರೇ ನಿಜವಾಗಿಯೂ ಕೆಟ್ಟವರು ಎಂಬುದನ್ನು ತೋರಿಸಲಾಗಿದೆ’ ಎಂದು ಹೇಳಿದರು.

‘ಚಲನಚಿತ್ರದ ಬಿಡುಗಡೆ ಪೂರ್ವ ಪ್ರಚಾರ ಕಾರ್ಯಕ್ರಮವನ್ನು ಜೂನ್‌ 25ರಂದು ಚಾಮರಾಜನಗರದಲ್ಲಿ ಆಯೋಜಿಸಲಾಗಿದೆ. ಆ ಆ ಜಿಲ್ಲೆ ಜೊತೆ ನಮಗೆ ಅವಿನಾಭಾವ ಸಂಬಂಧವಿದೆ. ಅಪ್ಪಾಜಿಯೊಂದಿಗೆ ಅಲ್ಲಿಗೆ ಓಡಾಡುತ್ತಿದ್ದ ಮಧುರ ನೆನಪುಗಳಿವೆ. ಗಾಜನೂರು ನಮ್ಮೂರು. ಗಡಿ ಜಿಲ್ಲೆಯಲ್ಲೂ ಚಲನಚಿತ್ರಕ್ಕೆ ಸಂಬಂಧಿಸಿದ ಕಾರ್ಯಕ್ರಮ ನಡೆಯಲಿ ಎನ್ನುವುದು ತಂಡದ ಆಶಯವಾಗಿದೆ’ ಎಂದರು.

ADVERTISEMENT

ಸಿಂಪಲ್‌ ಸಿನಿಮಾ:‘ಟಗರು’ ನಂತರ ಧನಂಜಯ ನನ್ನೊಂದಿಗೆ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕರು ಸಿನಿಮಾಕ್ಕೆ ಎಷ್ಟು ಬೇಕೋ ಅಷ್ಟು ಅದ್ಧೂರಿಯಾಗಿ ಮಾಡಿದ್ದಾರೆ. ಶಶಿಕುಮಾರ್, ವಿನೋದ್ ಆಳ್ವಾ ಕೂಡ ಅಭಿನಯಿಸಿದ್ದಾರೆ. ತುಂಬಾ ಸಿಂಪಲ್ ಸಿನಿಮಾ. ಶಿವಪ್ಪ ಎನ್ನುವ ಪಾತ್ರ ನಿರ್ವಹಿಸಿದ್ದೇನೆ. ಪ್ರತಿ ಪಾತ್ರಗಳಿಗೂ ವಿಶೇಷತೆ ಇದೆ. ಜೀವನದ ಬಗ್ಗೆ ಒಳ್ಳೆಯ ಸಂದೇಶವಿದೆ. ಇಡೀ ಕಥೆಯೇ ನಾಯಕನಂತಿದೆ. ಪ್ರತಿಯೊಬ್ಬರೂ ಅವರವರ ಪಾತ್ರಗಳನ್ನು ಬಹಳ ಚೆನ್ನಾಗಿ ನಿರ್ವಹಿಸಿದ್ದಾರೆ’ ಎಂದು ತಿಳಿಸಿದರು.

‘ವಿಜಯ್ ಮಿಲ್ಟನ್‌ ನಿರ್ದೇಶಿಸಿರುವ ಈ ಸಿನಿಮಾನದಲ್ಲಿ ಬಹಳ ಅಚ್ಚರಿ ಎನಿಸುವ ತಿರುವುಗಳಿವೆ. ನನ್ನ ಹಾಗೂ ಧನಂಜಯ ಪಾತ್ರಗಳು ‘ಟಗರು’ಗಿಂತ ಬೇರೆ ರೀತಿ ಇರುವುದು ವಿಶೇಷ. ಸಿಂಪಲ್ಲಾಗ್‌ ಇರೋದ್ ನೋಡಿ ಡಮ್ಮಿ ಪೀಸ್ ಅಂದುಕೊಂಡ್ರಾ ಎನ್ನುವ ಸರಳ ಡೈಲಾಗ್‌ಗಳು ಕೂಡ ಪಂಚ್‌ ಕೊಡುತ್ತವೆ. ಮೂರು ಹಾಡುಗಳಿವೆ. ಮಾಸ್ ಸಾಂಗ್ ವಿಭಿನ್ನವಾಗಿದೆ’ ಎಂದು ಹೇಳಿದರು.

ಜನ್ಯ ಜೊತೆ ಹಾಲಿವುಡ್ ಸಿನಿಮಾ:‘ನನ್ನ 125ನೇ ಚಲನಚಿತ್ರ ‘ವೇದ’ವನ್ನು ಪ್ಯಾನ್‌ ಇಂಡಿಯಾ ಸಿನಿಮಾ ಆಗಿ ಮಾಡುತ್ತೇವೆ. ಅರ್ಜುನ ಜನ್ಯಾ‌ ನಿರ್ದೇಶನದಲ್ಲಿ ನಮ್ಮ ಸಿನಿಮಾವನ್ನು ಕನ್ನಡ ಭಾಷೆಯೊಂದಿಗೆ ಹಾಲಿವುಡ್‌ಗೆ ತೆಗೆದುಕೊಂಡು ಹೋಗುವ ಯೋಜನೆ ಇದೆ. ಸದ್ಯಕ್ಕೆ 9 ಸಿನಿಮಾಗಳು ಕೈಲಿವೆ. ನಿರ್ದೇಶಕರು, ನಿರ್ಮಾಪಕರು ಬಯಸುವವರೆಗೂ ಪಾತ್ರಗಳನ್ನು ಮಾಡುತ್ತೇನೆ. ನಿರ್ದೇಶನ ಮಾಡುವ ಆಸೆಯನ್ನು ಸದ್ಯಕ್ಕೆ ಕೈಬಿಟ್ಟಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

‘ತಮಿಳು ಚಿತ್ರವೊಂದರಲ್ಲಿ ಸೂಪರ್‌ಸ್ಟಾರ್‌ ರಜನಿಕಾಂತ್ ‌ಜೊತೆ ಅತಿಥಿ ಪಾತ್ರ ಮಾಡುತ್ತಿದ್ದೇನೆ. ಬಹಳ ವಿಶೇಷ ಪಾತ್ರ ಅದಾಗಿದೆ. ಇದೊಂದು ಹೆಮ್ಮೆಯ ಸಂಗತಿ’ ಎಂದರು.

ಧನಂಜಯಗೆ ಸ್ಥಳದಲ್ಲೇ ಒಕೆ ಎಂದ ಶಿವಣ್ಣ:ನಟ ಧನಂಜಯ ಮಾತನಾಡಿ, ‘ಟಗರು ನಂತರ ಶಿವಣ್ಣ ಜತೆ ಕಾಂಬಿನೇಷನ್ ಮಾಡುತ್ತಿದ್ದೇನೆ. ನಮ್ಮ ಸುತ್ತಮುತ್ತ ನಡೆಯುವಂತಹ ಘಟನೆ ಆಧರಿಸಿ ಮೂಡಿ ಬಂದಿರುವ ಚಲನಚಿತ್ರವಿದು. ಗಂಭೀರ ವಿಷಯಗಳನ್ನು ಹೇಳುವ ಪ್ರಯತ್ನ ಮಾಡಿದ್ದೇವೆ. ಜುಲೈ 1ರಂದು ಬಿಡುಗಡೆ ಆಗಲಿದೆ’ ಎಂದು ತಿಳಿಸಿದರು.

‘ಸದ್ಯಕ್ಕೆ ನಿರ್ದೇಶನ ಮಾಡುವುದಿಲ್ಲ. ಶಿವಣ್ಣಗೆ ನಿರ್ದೇಶನ ಮತ್ತು ನಿರ್ಮಾಣ ಎರಡನ್ನೂ ಮಾಡಬೇಕು ಎನ್ನುವ ಆಸೆ ಇದೆ’ ಎಂದಾಗ, ‘ಕೂಡಲೇ ಡೇಟ್ ಕೊಡುತ್ತೇನೆ. ಖುಷಿಯಿಂದ ಸಿನಿಮಾ ಮಾಡೋಣ’ ಎಂದು ಶಿವರಾಜ್‌ಕುಮಾರ್‌ ಸಮ್ಮಿತಿಸಿದರು.

ನಟ ಪೃಥ್ವಿ ಅಂಬರ್, ನಿರ್ಮಾಪಕ ಕೃಷ್ಣ ಸಾರ್ಥಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.