ಮೈಸೂರು: ತ್ಯಾಗ, ಬಲಿದಾನದ ಪ್ರತೀಕವಾಗಿರುವ ಈದ್-ಉಲ್-ಅಝಾ (ಬಕ್ರೀದ್) ಅನ್ನು ನಗರದ ನಗರದ ವಿವಿಧೆಡೆ ಶನಿವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಈದ್ಗಾ ಮೈದಾನಗಳಿಗೆ ತೆರಳಿದ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಇಲ್ಲಿನ ತಿಲಕ್ ನಗರದಲ್ಲಿರುವ ಈದ್ಗಾ ಮೈದಾನದಲ್ಲಿ ಬೆಳಿಗ್ಗೆಯಿಂದಲೇ ಜನರು ಸಾಮೂಹಿಕ ಪ್ರಾರ್ಥನೆಗಾಗಿ ಹೆಜ್ಜೆ ಹಾಕಿದರು. ಸಾವಿರಾರು ಜನರು ಪ್ರಾರ್ಥನೆ ಸಲ್ಲಿಸಿದರು. ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ ಮೃತಪಟ್ಟವರಿಗಾಗಿ ಪ್ರಾರ್ಥಿಸಿ, ಸಂತಾಪ ಸೂಚಿಸಿದರು.
ರಾಜೀವ್‌ನಗರ, ಗೌಸಿಯಾ ನಗರ, ಉದಯಗಿರಿ, ಅಶೋಕ ರಸ್ತೆ ಸೇರಿದಂತೆ ನಗರದಾದ್ಯಂತ ಇರುವ 30ಕ್ಕೂ ಹೆಚ್ಚು ಸ್ಥಳಗಳಲ್ಲಿನ ಈದ್ಗಾ ಮೈದಾನ ಮತ್ತು ಮಸೀದಿಗಳಲ್ಲಿ ಪ್ರಾರ್ಥನೆ ನಡೆಯಿತು.
ತಿಲಕ್ ನಗರದ ಈದ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ನಂತರ, ಧರ್ಮಗುರು ಹಜರತ್ ಮೌಲಾನಾ ಮೊಹಮ್ಮದ್ ಉಸ್ಮಾನ್ ಷರೀಫ್ ಧರ್ಮ ಸಂದೇಶ ನೀಡಿದರು.
‘ಬಕ್ರೀದ್ ತ್ಯಾಗ-ಬಲಿದಾನದ ಪ್ರತೀಕ. ಪ್ರವಾದಿ ಹಜರತ್ ಇಬ್ರಾಹಿಂ ಅವರ ತ್ಯಾಗ, ಅಲ್ಲಾಹುನ ಮೇಲೆ ಅವರು ಇರಿಸಿದ ಅಚಲ ಭಕ್ತಿ, ನಂಬಿಕೆಯ ಪ್ರತೀಕವಾಗಿ ಆಚರಿಸಲಾಗುತ್ತದೆ. ಬದುಕಿನ ದಾರಿ ತೋರಿದ ಪ್ರವಾದಿಗಳ ಜೀವನಾದರ್ಶಗಳು ನಮಗೆ ಇಂದಿಗೂ ಮಾರ್ಗದರ್ಶಿಯಾಗಿವೆ’ ಎಂದು ಸ್ಮರಿಸಿದರು.
ಸಾಮೂಹಿಕ ಪ್ರಾರ್ಥನೆ ನಂತರ ಹಿರಿಯರ ಸಮಾಧಿಯ ಬಳಿ ತೆರಳಿದ ಸಮುದಾಯದವರು ಆಶೀರ್ವಾದ ಪಡೆದರು. ನಿರ್ಗತಿಕರು, ಬಡವರು ಹಬ್ಬ ಆಚರಿಸಲಿ ಎನ್ನುವ ಉದ್ದೇಶದಿಂದ ಮಾಂಸ ಮತ್ತು ಇತರ ಆಹಾರ ಪದಾರ್ಥವನ್ನು ಉಳ್ಳವರು ದಾನ ಮಾಡಿದರು.
ಬಕ್ರೀದ್ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಸಂಭ್ರಮ ಮನೆ ಮಾಡಿತ್ತು. ಹೊಸ ಧಿರಿಸು, ವಿಶೇಷ ಟೋಪಿ, ಕಣ್ಣಿಗೆ ಕಾಡಿಗೆ ಇಟ್ಟ ಚಿಣ್ಣರು ಎಲ್ಲರ ಗಮನ ಸೆಳೆದರು. ನಮಾಜ್ ಬಳಿಕ ಪರಸ್ಪರ ‘ಈದ್ ಮುಬಾರಕ್’ ಎಂದು ಶುಭಾಶಯ ವಿನಿಮಯ ಮಾಡಿಕೊಂಡರು.
ನಂತರ ಬಂಧು–ಬಾಂಧವರ ಮನೆಗಳಿಗೆ ತೆರಳಿ ಆತಿಥ್ಯ ನೀಡಿದರು. ಮನೆಗಳಲ್ಲಿ ಹಬ್ಬದ ಅಡುಗೆಯ ವಾಸನೆ ಘಮ್ಮೆಂದಿತ್ತು. ಹಬ್ಬಕ್ಕೆಂದೇ ಮಾಡಿದ ವಿಶೇಷ ಬಗೆಯ ಸಿಹಿ ತಿನಿಸು, ಮಾಂಸಾಹಾರದ ಖಾದ್ಯಗಳನ್ನು ಸವಿದರು.
ಪ್ರಾರ್ಥನಾ ಸ್ಥಳಗಳಲ್ಲಿ ಪೊಲೀಸರು ಭದ್ರತೆ ಕಲ್ಪಿಸಿದ್ದರು. ಬೆಳಿಗ್ಗೆ ಕೆಲವೆಡೆ ವಾಹನ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.