ADVERTISEMENT

ಮೈಸೂರು | ಪ್ಲಾಸ್ಟಿಕ್ ಕೈಚೀಲ ಬಳಕೆ ನಿಷೇಧ: ಜಾಗೃತಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 6:21 IST
Last Updated 28 ಜುಲೈ 2022, 6:21 IST
   

ಮೈಸೂರು: ಪ್ಲಾಸ್ಟಿಕ್‌ ಕೈಚೀಲ ಬಳಕೆ ನಿಷೇಧದ ಬಗ್ಗೆ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ವಿಭಾಗದ ವತಿಯಿಂದ ನಗರದ ಮಾರುಕಟ್ಟೆ ಪ್ರದೇಶ ಸೇರಿದಂತೆ ವಿವಿಧೆಡೆ ಗ್ರಾಹಕರು ಹಾಗೂ ವ್ಯಾಪಾರಿಗಳಿಗೆ ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್ ನೇತೃತ್ವದಲ್ಲಿ ಗುರುವಾರ ಜಾಗೃತಿ ಮೂಡಿಸಲಾಯಿತು.

ವಿಶ್ವ ಪರಿಸರ ಸಂರಕ್ಷಣಾ ದಿನದ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ, ಬಟ್ಟೆ ಬ್ಯಾಗ್ ಹಾಗೂ ಜಾಗೃತಿ ಕರಪತ್ರಗಳನ್ನು ನೀಡಲಾಯಿತು.

ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆಯಲ್ಲಿ ಗ್ರಾಹಕರು ಹಾಗೂ ವ್ಯಾಪಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಹಿಂದಿನ ಕಾಲದಂತೆ ಈಗಲೂ ನಾವು ಬಟ್ಟೆಯ ಕೈ ಚೀಲಗಳನ್ನು ಹಿಡಿದು ಮಾರುಕಟ್ಟೆಗೆ ಹೋಗುವುದನ್ನು ರೂಢಿ ಮಾಡಿಕೊಳ್ಳಬೇಕು. ಈ ಮೂಲಕ, ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು. ಏಕಬಳಕೆ ಪ್ಲಾಸ್ಟಿಕ್‌ ಅನ್ನು ದೇಶದಾದ್ಯಂತ ನಿಷೇಧಿಸಲಾಗಿದೆ. ಆದೇಶವನ್ನು ಎಲ್ಲರೂ ಪಾಲಿಸಬೇಕು. ಪರಿಸರ ಸ್ನೇಹಿ ಕ್ರಮಗಳನ್ನು ಅನುಸರಿಸಬೇಕು’ ಎಂದು ತಿಳಿಸಿದರು.

ADVERTISEMENT

‘ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದಾಗಿ ಪರಿಸರದಲ್ಲಿನ ಸಮತೋಲನಕ್ಕೆ ಧಕ್ಕೆಯಾಗುತ್ತಿದೆ. ಬಟ್ಟೆ ಕೈ ಚೀಲಗಳನ್ನು ಬಳಕೆ ಮಾಡಿ ಪರಿಸರದೊಂದಿಗೆ ಜೀವವೈವಿಧ್ಯ ಕಾಪಾಡಲು ಎಲ್ಲರೂ ಕೈಜೋಡಿಸಬೇಕು. ಪ್ಲಾಸ್ಟಿಕ್‌ನಲ್ಲಿರುವ ವಿಷಕಾರಿ ರಾಸಾಯನಿಕ ಅಂಶವು ನೀರು, ಭೂಮಿ ಹಾಗೂ ಗಾಳಿಯಲ್ಲಿ ಸೇರಿಕೊಂಡು ನಮ್ಮ ಅನಾರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದಕ್ಕೆ ಅವಕಾಶ ಕೊಡಬಾರದು’ ಎಂದು ಹೇಳಿದರು.

ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ರವಿಶಂಕರ್, ‘ನಿಷೇಧಕ್ಕೆ ಒಳಗಾಗಿರುವ ಪ್ಲಾಸ್ಟಿಕ್‌ ಬ್ಯಾಗ್‌ಗಳ ಬಳಕೆಯನ್ನು ನಾವೆಲ್ಲರೂ ನಿಲ್ಲಿಸಬೇಕಾದ ತುರ್ತು ಇದೆ. ನಿರ್ಲಕ್ಷಿಸಿದರೆ ಪರಿಸರ ನಾಶಕ್ಕೆ ನಾವೇ ಕಾರಣವಾಗುತ್ತೇವೆ’ ಎಂದು ಎಚ್ಚರಿಸಿದರು.

ದೇವರಾಜ ಮಾರ್ಕೆಟ್‌ನಲ್ಲಿ ಆರೋಗ್ಯ ಇನ್‌ಸ್ಪೆಕ್ಟರ್ ತೇಜಶ್ವಿನಿ, ಪ್ಲಾಸ್ಟಿಕ್ ಮಾರಾಟ–ಬಳಕೆ ಮಾಡುತ್ತಿದ್ದ ಅಂಗಡಿ ಮಾಲೀಕರಿಗೆ ₹ 12ಸಾವಿರ ದಂಡ ವಿಧಿಸಿದರು.

ನಗರಪಾಲಿಕೆ ಸದಸ್ಯ ಜಗದೀಶ, ಕೆ.ಆರ್. ಪೊಲೀಸ್ ಠಾಣೆ ಎಸ್‌ಐ ರಾಚಯ್ಯ, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಸಂಘಟನಾ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಪ್ರಚಾರ ಪ್ರಮುಖ್ ಸುಮಾ, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಅಪೂರ್ವ ಸುರೇಶ್, ಸುರೇಶ್ ಗೋಲ್ಡ್, ಶಿವರಾಜ್, ಸುಚೀಂದ್ರ, ಬಸವರಾಜ್ ಬಸಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.