ಮೈಸೂರು: ‘ನಮ್ಮ ಧರ್ಮ, ಸಂಸ್ಕೃತಿಯನ್ನು ಟೀಕಿಸಿರುವ ಬಾನು ಮುಷ್ತಾಕ್ ಅವರಿಗೆ ದಸರಾ ಉದ್ಘಾಟಿಸಲು ಅವಕಾಶ ನೀಡಿದ್ದನ್ನು ವಿರೋಧಿಸಿ ಹಿಂದೂ ಜಾಗರಣ ವೇದಿಕೆಯಿಂದ ಸೆ.9ರಂದು ಬೆಳಿಗ್ಗೆ 7.30ಕ್ಕೆ ಇಲ್ಲಿನ ಕುರುಬಾರಹಳ್ಳಿಯ ಸಂಗೊಳ್ಳಿರಾಯಣ್ಣ ವೃತ್ತದಿಂದ ಚಾಮುಂಡಿಬೆಟ್ಟಕ್ಕೆ ಜನಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದು ವೇದಿಕೆಯ ಪ್ರಾಂತೀಯ ಸಂಚಾಲಕ ಕೇಶವಮೂರ್ತಿ ತಿಳಿಸಿದರು.
ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸಾವಿರ ಮಂದಿ ಪಾಲ್ಗೊಳ್ಳುವರು. ಬೆಟ್ಟದ ಮೇಲೆ ಪ್ರತಿಭಟನಾ ಸಭೆಯೂ ನಡೆಯಲಿದೆ’ ಎಂದರು.
‘ತಾಯಿ ಭುವನೇಶ್ವರಿಯ ಅರಿಸಿನ, ಕುಂಕುಮ ಬಗ್ಗೆ ಬಾನು ಅವಹೇಳನಕಾರಿ ಮಾತನ್ನಾಡಿದ್ದಾರೆ. ಅವರ ಆಯ್ಕೆ ವಿರುದ್ಧ ಸಂಘ ಸಂಸ್ಥೆಗಳು, ಕನ್ನಡಪರ ಸಂಘಟನೆಗಳು, ಸಾಹಿತಿಗಳು, ಧಾರ್ಮಿಕ ಮುಖಂಡರು ಮಾತನಾಡಿದ್ದರೂ ಸರ್ಕಾರ ನಿರ್ಧಾರದಿಂದ ಹಿಂದೆ ಸರಿಯದಿರುವುದು ಸರಿಯಲ್ಲ’ ಎಂದರು.
ಮೈಸೂರು: ‘ಚಾಮುಂಡಿ ತಾಯಿಯನ್ನು ರಾಜಕೀಯ ಗೊಳಿಸದಿರಿ ಹಾಗು ಕೋಮುಗಲಭೆ ಸೃಷ್ಟಿಸದಿರಿ’ ಎಂಬ ಘೋಷವಾಕ್ಯದಡಿ ಸೆ.9ರಂದು ಬೆಳಿಗ್ಗೆ 7.30ಕ್ಕೆ ಕುರುಬಾರಹಳ್ಳಿ ವೃತ್ತದಿಂದ ಚಾಮುಂಡಿ ಬೆಟ್ಟಕ್ಕೆ ‘ಚಾಮುಂಡಿ ನಡಿಗೆ’ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಮಹಾಸಭಾ ತಿಳಿಸಿದೆ. ಇದಕ್ಕೆ ಅನುಮತಿ ನೀಡುವಂತೆ ದಲಿತ ಮಹಾಸಭಾ ಅಧ್ಯಕ್ಷ ಎಸ್.ರಾಜೇಶ್ ಪೊಲೀಸ್ ಆಯಕ್ತರ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.
‘ಪ್ರೊ.ಕೆ.ಎಸ್.ನಿಸಾರ್ ಅಹಮದ್ ಹಾಗೂ ಜೈನ ಧರ್ಮದ ಪ್ರೊ.ಹಂ.ಪ. ನಾಗರಾಜಯ್ಯ ಅವರನ್ನು ಆಯ್ಕೆ ಮಾಡಿದ್ದಾಗ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಚಕಾರ ಎತ್ತಿರಲಿಲ್ಲ. ಈ ಬಾರಿ ಬಾನು ಅವರಿಗೆ ಆಹ್ವಾನ ನೀಡಿರುವುದನ್ನು ಕೆಲ ಸಂಘಟನೆಗಳು ವಿರೋಧಿಸಿ ಕೋಮು ಗಲಭೆಗೆ ಪ್ರಯತ್ನಿಸುತ್ತಿವೆ’ ಎಂದಿದ್ದಾರೆ.
ಬೆಂಗಳೂರು: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
‘ಬಾನು ಅವರಿಗೆ ನೀಡಿರುವ ಆಹ್ವಾನವನ್ನು ಹಿಂಪಡೆಯಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿರುವ ಈ ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ಅರ್ಜಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ.
ವಿಜಯಪುರ: ‘ಬಾನು ಮುಷ್ತಾಕ್ ಅವರ ಆಯ್ಕೆಯನ್ನು ವಿರೋಧಿಸಿ ಪ್ರತಾಪ್ ಸಿಂಹ ಹೈಕೋರ್ಟ್ ಮೆಟ್ಟಿಲೇರಿದ್ದರೆ, ಈ ವಿಷಯ ಅಲ್ಲಿಯೇ ತೀರ್ಮಾನವಾಗಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
‘ಈ ಹಿಂದೆ ಸಾಹಿತಿ ನಿಸಾರ್ ಅಹಮದ್ ಅವರು ದಸರಾ ಉದ್ಘಾಟಿಸಿದಾಗ, ಯಾರೂ ವಿರೋಧಿಸಲಿಲ್ಲ. ಟಿಪ್ಪು ಸುಲ್ತಾನ್, ಮಿರ್ಜಾ ಇಸ್ಮಾಯಿಲ್ ಈ ಹಿಂದೆ ದಸರಾ ಮೆರವಣಿಗೆ ಮಾಡಿದಾಗ ವಿರೋಧ ಇರಲಿಲ್ಲ. ಬಿಜೆಪಿಯು ರಾಜಕೀಯ ದುರುದ್ದೇಶದಿಂದ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಿಸುವುದನ್ನು ವಿರೋಧಿಸುತ್ತಿದೆ. ಇದಕ್ಕೆ ಸರ್ಕಾರವು ರಾಜಕೀಯವಾಗಿಯೇ ಪ್ರತ್ಯುತ್ತರ ನೀಡಲಿದೆ’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.