ಮೈಸೂರು: ‘ಬಸವ ತತ್ವ ಜೀವನದ ಅವಿಭಾಜ್ಯ ಅಂಗವಾಗಬೇಕು. ಅದರ ಅನುಷ್ಠಾನ ಶೀಘ್ರವಾಗಬೇಕು. ಸರ್ವೋದಯ ಸ್ಥಾಪಿಸಬೇಕು’ ಎಂದು ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಹೇಳಿದರು.
ನಗರದ ನಟರಾಜ ಸಭಾಭವನದಲ್ಲಿ ಮೈಸೂರು ಶರಣ ಮಂಡಲಿ, ನಟರಾಜ ಪ್ರತಿಷ್ಠಾನ ಸಹಯೋಗದಲ್ಲಿ ಶನಿವಾರ ನಡೆದ ‘ಬಸವ ಜಯಂತಿ, ಬಸವ ರತ್ನ ಪ್ರಶಸ್ತಿ ಪ್ರದಾನ’ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಸವೇಶ್ವರರ ತತ್ವ, ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸಬೇಕು. ಅವರ ಆದರ್ಶವನ್ನು ಪ್ರಾಮಾಣಿಕವಾಗಿ ಪಾಲಿಸಿದರೆ ನಾವು ಬಸವಣ್ಣನವರಿಗೆ ಸಲ್ಲಿಸುವ ದೊಡ್ಡ ಗೌರವ ಎಂದರು.
‘ವಚನ ಸಾಹಿತ್ಯದಲ್ಲಿ ಎಲ್ಲವೂ ಇದೆ. ಬಾಬಾ ಸಾಹೇಬರು ಅಂಬೇಡ್ಕರ್ ಅವರು ಇದೇ ವಿಷಯಗಳನ್ನು ಸಂವಿಧಾನದಲ್ಲಿ ಬರೆದಿದ್ದಾರೆ. ಸಂವಿಧಾನದಲ್ಲಿ ಬಸವಣ್ಣನವರು ಹೇಳಿದ ತತ್ವಗಳು ಅಡಕವಾಗಿವೆ’ ಎಂದರು.
‘ಇಂದು ಪರಮ ಸಂತೋಷವಾಗಿದೆ. ಈ ಹಿಂದೆ ಅನೇಕ ಪ್ರಶಸ್ತಿ ಬಂದಿವೆ. ಆದರೆ ‘ಬಸವ ರತ್ನ’ ಪ್ರತಿಷ್ಠಿತ ಮತ್ತು ವಿಶಿಷ್ಟವಾದ ಪ್ರಶಸ್ತಿಯಾಗಿದೆ’ ಎಂದು ಹೇಳಿದರು.
‘ನಾಡಿನ ಸಾಂಸ್ಕೃತಿಕ ನಾಯಕರಾಗಿರುವ ಬಸವಣ್ಣ, ಮಾನವ ಹೃದಯ ಕ್ಷೇತ್ರದ ದೇವ ಕೃಷಿಕರೆಂದು ಕುವೆಂಪು ಬಣ್ಣಿಸಿದ್ದರು. ವಚನಗಳ ಮೂಲಕ 12ನೇ ಶತಮಾನದಲ್ಲಿ ಅಭೂತಪೂರ್ವ ಕ್ರಾಂತಿ ಮಾಡಿದ್ದಾರೆ. ಸಮಾನತೆ ಸೂತ್ರದ ಮೇಲೆ ವಚನಕಾರರು ಹುಟ್ಟು ಹಾಕಿದ ಅನುಭವ ಮಂಟಪವನ್ನು ‘ಸಂಸತ್ತು’ ಎಂದು ನಾನು 60 ವರ್ಷದ ಹಿಂದೆ ಹೇಳಿದ್ದೆ’ ಎಂದು ತಿಳಿಸಿದರು.
ವಿದ್ಯಾವಿಕಾಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕವೀಶ್ ಗೌಡ, ‘ಸಾಧಕರನ್ನು ಸನ್ಮಾನಿಸಿ ಸಂತಸ ಪಡುವುದು ಎಷ್ಟು ಮುಖ್ಯವೋ, ಅವರಂತೆ ನಾವೆಲ್ಲರೂ ಸಾಧನೆ ಮಾಡುವುದು ಅಷ್ಟೇ ಮುಖ್ಯ. ಇದಕ್ಕಾಗಿ ಗುರಿ, ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಶಿಕ್ಷಣ ಮತ್ತು ಸೇವಾ ಕ್ಷೇತ್ರದ ದತ್ತೇಶ್ ಕುಮಾರ್, ಶಿಕ್ಷಣ ಕ್ಷೇತ್ರದ ಟಿ.ಜಿ.ಆದಿಶೇಷನ್ ಗೌಡ, ಕರ್ನಾಟಕ ರಾಜ್ಯ ಮಹಾಮಂಡಲ ಅಧ್ಯಕ್ಷ ಎಸ್.ಚಂದ್ರಶೇಖರ್, ಸಾಹಿತಿ ಸಿ.ಪಿ.ಕೃಷ್ಣಕುಮಾರ್, ಕೆ.ಎಂ.ಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ, ನಟರಾಜ ಪ್ರತಿಷ್ಠಾನ ವಿಶೇಷಾಧಿಕಾರಿ ಎಸ್.ಶಿವರಾಜಪ್ಪ, ಸಮಾಜ ಸೇವಕ ಕೆ.ಮಂಜುನಾಥ್ ಅವರಿಗೆ ‘ಬಸವ ರತ್ನ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಮೂಗೂರು ನಂಜುಂಡಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೊಸಮಠ ಮತ್ತು ನಟರಾಜ ಶಿಕ್ಷಣ ಸಂಸ್ಥೆ ಅಧ್ಯಕ್ಷ ಚಿದಾನಂದ ಸ್ವಾಮೀಜಿ, ಅಭಿನವ ಕಾಡುಸಿದ್ದೇಶ್ವರ ಸ್ವಾಮೀಜಿ, ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಕಾಡಾ ಅಧ್ಯಕ್ಷ ಮರಿಸ್ವಾಮಿ, ಮೈಸೂರು ಶರಣ ಮಂಡಲಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ಗೌರವಾಧ್ಯಕ್ಷ ಯು.ಎಸ್. ಶೇಖರ್, ಕಾರ್ಯಾಧ್ಯಕ್ಷ ಎ.ಸಿ.ಜಗದೀಶ್, ಪ್ರಧಾನ ಕಾರ್ಯದರ್ಶಿ ಬಿ. ಮಹದೇವಸ್ವಾಮಿ, ಪದಾಧಿಕಾರಿಗಳಾದ ಮಲ್ಲಣ್ಣ, ಸಿದ್ದಲಿಂಗಪ್ಪ, ಜಯಪ್ರಕಾಶ್, ಎಸ್. ಬಸಪ್ಪ ಇದ್ದರು.
‘ನಾವೆಲ್ಲರೂ ಮಾನವೀಯ ಧರ್ಮೀಯರು’
‘ಈ ಸಮಾಜದಲ್ಲಿ ನಾವೆಲ್ಲರೂ ಮಾನವೀಯ ಧರ್ಮೀಯರು. ಬಸವಾದಿ ಶರಣರು ಸಮಾಜ ಸುಧಾರಣೆಗೆ ಕೈಜೋಡಿಸಿ ಸಾಮಾಜಿಕ ಮೌಢ್ಯಗಳನ್ನು ಹೋಗಲಾಡಿಸಿದ್ದರು. ಆದರೆ ಅವರ ವಿಚಾರಗಳನ್ನು ಅನುಸರಿಸುವಲ್ಲಿ ವಿಫಲರಾಗಿದ್ದು ಈ ಬಗ್ಗೆ ವಿಷಾದವಿದೆ’ ಎಂದು ಕೆ.ಎಂ.ಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ಹೇಳಿದರು. ‘ನಾನು ಸಂತಸದಿಂದ ಪ್ರಶಸ್ತಿ ಸ್ವೀಕರಿಸಿದ್ದೇನೆ. ಬಸವ ರತ್ನ ಪ್ರಶಸ್ತಿಗೆ ನಿಜವಾದ ಅರ್ಥ ಬರುವ ರೀತಿಯಲ್ಲಿ ಕೆಲಸ ಮಾಡುವ ಅಗತ್ಯವಿದ್ದು ಜವಾಬ್ದಾರಿ ಇನ್ನೂ ಹೆಚ್ಚಾಗಿದೆ’ ಎಂದರು.
ವ್ಯಕ್ತಿಗೆ ಪ್ರಶಸ್ತಿ ಬರಬೇಕು ಎಂಬುದು ಅಹಂಕಾರ. ಬಂದ ಪ್ರಶಸ್ತಿ ತಿರಸ್ಕರಿಸುವುದು ದೊಡ್ಡ ಅಹಂಕಾರ. ನಾನು ಅಹಂಕಾರ– ತಿರಸ್ಕಾರ ಎರಡರಿಂದಲ್ಲ ಹೆಮ್ಮೆಯಿಂದ ಸ್ವೀಕರಿಸಿದ್ದೇನೆ-ಸಿ.ಪಿ.ಕೃಷ್ಣಕುಮಾರ್, ಸಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.