ADVERTISEMENT

ಅಂಧತ್ವ ಮೀರಿದ ‘ಗಣಿತ ಮಾಂತ್ರಿಕ ಬಸವರಾಜು: ಐದು ಸಾವಿರ ಶಾಲೆಗಳಲ್ಲಿ ಉಪನ್ಯಾಸ

‘ಗಿನ್ನೆಸ್ ದಾಖಲೆ’ ಹಂಬಲ

ಎಚ್.ಎಸ್.ಸಚ್ಚಿತ್
Published 12 ಸೆಪ್ಟೆಂಬರ್ 2021, 4:52 IST
Last Updated 12 ಸೆಪ್ಟೆಂಬರ್ 2021, 4:52 IST
ಹುಣಸೂರು ಪಟ್ಟಣದ ಶಾಸ್ತ್ರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ಬಸವರಾಜ್ ಸಂವಾದ ನಡೆಸಿದರು
ಹುಣಸೂರು ಪಟ್ಟಣದ ಶಾಸ್ತ್ರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ಬಸವರಾಜ್ ಸಂವಾದ ನಡೆಸಿದರು   

ಹುಣಸೂರು: ಗಣಿತವೆಂದರೆ ಬಹುತೇಕರಿಗೆ ಕಬ್ಬಿಣದ ಕಡಲೆ. ಆದರೆ ಈ ಯುವಕನಿಗೆ ಗಣಿತ ಸುಲಿದ ಬಾಳೆಯ ಹಣ್ಣಿನಂತೆ. ಯಾವುದೇ ಸಮಸ್ಯೆಯನ್ನೂ ಸರಳವಾಗಿ ಬಿಡಿಸಿ ಕ್ಷಣಾರ್ಧದಲ್ಲೇ ಉತ್ತರಿಸುವ ಕೌಶಲವಂತ. ವಿಶೇಷ ಎಂದರೆ ಆತ ಹುಟ್ಟು ಅಂಧತ್ವ ಮೀರಿದ ಗಣಿತ ಮಾಂತ್ರಿಕ.

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಬಸವರಾಜ್ ಶಂಕರ್ ಉಮಾರಾಣಿ, 10ನೇ ತರಗತಿವರೆಗೆ ಬ್ರೈಲ್ ಪದ್ಧತಿಯಲ್ಲೇ ಓದಿದರು. ನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರ ವಿಭಾಗದಲ್ಲಿ ಎಂ.ಎ. ಪದವಿ ಪಡೆದರು. ಗಣಿತ ಮಾಂತ್ರಿಕರಾಗಿ ಮತ್ತು ವ್ಯಕ್ತಿತ್ವ ವಿಕಸನ ತಜ್ಞರಾಗಿ ಅವರು ಇದುವರೆಗೆ ರಾಜ್ಯದ 5 ಸಾವಿರ ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ ನೀಡಿದ್ದಾರೆ.

ಅವರು ಕೋಟಿ ಸಂಖ್ಯೆಗಳನ್ನು ನಿಮಿಷಾರ್ಧದಲ್ಲೇ ಕೂಡಿಸಿ ಹೇಳುತ್ತಾರೆ, ಕಳೆಯುತ್ತಾರೆ. ಗುಣಿಸಿ, ಭಾಗಿಸಿ ಅಂಕಿ–ಸಂಖ್ಯೆಗಳನ್ನು ಮುಂದಿಡುತ್ತಿದ್ದರೆ ಎದುರಿಗೆ ಕುಳಿತವರ ಹುಬ್ಬುಗಳೇರುತ್ತವೆ. ಅಂದಹಾಗೆ, ಅವರು ಕ್ಯಾಲ್ಕುಲೇಟರ್‌ ಬಳಸುವುದಿಲ್ಲ. ದೇಶದ ನಡೆದಾಡುವ ಕ್ಯಾಲ್ಕುಲೇಟರ್ ಎಂದೇ ಪ್ರಸಿದ್ಧರಾಗಿದ್ದ ಶಕುಂತಲಾ ದೇವಿಯೇ ಅವರಿಗೆ ಪ್ರೇರಣೆ. ಅವರಂತೆಯೇ ಗಿನ್ನೆಸ್‌ ದಾಖಲೆ ಮಾಡಬೇಕೆಂಬ ಮಹತ್ವಾಕಾಂಕ್ಷೆಯಿಂದ 5 ವರ್ಷದಿಂದ ಸಹೋದರ ಕಿರಣ್ ಜೊತೆಗೆ ನಿರಂತರ ಪ್ರವಾಸ ನಡೆಸುತ್ತಾ ಉಚಿತವಾಗಿ ಗಣಿತ ಉಪನ್ಯಾಸ ನೀಡುತ್ತಿದ್ದಾರೆ.

ADVERTISEMENT

10 ಸಾವಿರ ಫೋನ್ ನಂಬರ್‌ಗಳು ಅವರ ನೆನಪಿನಲ್ಲಿವೆ. ಒಮ್ಮೆ ಗ್ರಹಿಸಿದ ಮಾಹಿತಿಯನ್ನು ಅವರು ಮರೆಯುವುದಿಲ್ಲ. ಕ್ರಿಕೆಟ್ ವೀಕ್ಷಕ ವಿವರಣೆಯನ್ನು ಇಂಗ್ಲಿಷ್ ಮತ್ತು ಹಿಂದಿ ಸೇರಿದಂತೆ 4 ಭಾಷೆಯಲ್ಲಿ ಗ್ರಹಿಸಿ ಕನ್ನಡದಲ್ಲಿ ವಿವರಣೆ ನೀಡುವ ಕೌಶಲವೂ ಅವರಿಗುಂಟು. ಅವರು ಈಗಾಗಲೇ ದೇಶ ವಿದೇಶಗಳಲ್ಲಿಯೂ ತಮ್ಮ ಪ್ರತಿಭೆ ಪ್ರದರ್ಶಿಸಿ ಸೈ ಎನ್ನಿಸಿಕೊಂಡವರು.

2003ರಲ್ಲಿ ಅವರು ‘ವಿಶೇಷ ಸ್ಮರಣ ಶಕ್ತಿ ಪ್ರತಿಭೆ’ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. 2004ರಲ್ಲಿ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ವಿಭಾಗದ ಪ್ರಶಸ್ತಿ, 2017ರಲ್ಲಿ ಅಂತರರಾಷ್ಟ್ರೀಯ ಗ್ಲೋಬಲ್ ಪೀಸ್ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳು ಸಂದಿವೆ.

ಈ ಯುವಕ ಇತ್ತೀಚೆಗೆ ಪಟ್ಟಣದ ಶಾಸ್ತ್ರಿ ಸಂಯುಕ್ತ ಪದವಿಪೂರ್ವ ಕಾಲೇಜಿಗೆ ಭೇಟಿ ಕೊಟ್ಟು, ವಿದ್ಯಾರ್ಥಿಗಳ ಎದುರು ಕಷ್ಟಕರವಾದ ಗಣಿತ ಸೂತ್ರಗಳನ್ನು ಬಿಡಿಸಿ ಅಚ್ಚರಿ ಮೂಡಿಸಿದರು. ಅವರ ಸಂಪರ್ಕ ಸಂಖ್ಯೆ: 8197922802.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.