ADVERTISEMENT

ಮುಡಾ ಅಧ್ಯಕ್ಷರಿಂದ ಬೆಂಗಳೂರಿನ ವಸತಿ ಸಮುಚ್ಛಯಕ್ಕೆ ಭೇಟಿ

ಮೈಸೂರಿನಲ್ಲೂ ಬಿಡಿಎ ಮಾದರಿ ವಸತಿ ಸಮುಚ್ಚಯ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 10:07 IST
Last Updated 4 ಡಿಸೆಂಬರ್ 2020, 10:07 IST

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೆಂಗೇರಿಯ ಕೊಮ್ಮಘಟ್ಟದಲ್ಲಿ ನಿರ್ಮಿಸಲಾಗಿರುವ ಬಹುಮಹಡಿ ವಸತಿ ಸಮುಚ್ಚಯವನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಆಯುಕ್ತರ ನಿಯೋಗ ಭೇಟಿ ಮಾಡಿ ಪರಿಶೀಲನೆ ನಡೆಸಿತು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬಹುಮಹಡಿ ವಸತಿ ಸಮುಚ್ಚಯ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈ ಸಂಬಂಧ ಇಲ್ಲಿನ ವಸತಿ ಸಮುಚ್ಚಯದ ವಿನ್ಯಾಸ, ರಚನೆ ಸೇರಿದಂತೆ ಎಷ್ಟು ಜಾಗದಲ್ಲಿ 2 ಬೆಡ್ ರೂಂ ಹಾಗೂ 3 ಬೆಡ್ ರೂಂಗಳ ಮನೆಗಳನ್ನು ನಿರ್ಮಾಣ ಮಾಡಲಾಗಿದೆ ಎಂಬಿತ್ಯಾದಿ ಮಾಹಿತಿಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಎಚ್.ವಿ.ರಾಜೀವ್ ರವರು, ಆಯುಕ್ತರಾದ ಡಾ. ನಟೇಶ್, ತಾಂತ್ರಿಕ ವರ್ಗದವರು ಬೆಂಗಳೂರಿನ ಬಿಡಿಎ ಅಧಿಕಾರಿಗಳು, ಇಂಜಿನಿಯರ್ ಗಳಿಂದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು.

ಯಾವ ತಂತ್ರಜ್ಞಾನದ ಮೂಲಕ ಕಟ್ಟಲಾಗಿದೆ? ಇಂತಹ ಮನೆಗಳನ್ನು ಬೆಂಗಳೂರು ವಲಯದಲ್ಲಿ ಎಲ್ಲೆಲ್ಲಿ ಕಟ್ಟಲಾಗಿದೆ? ಕಟ್ಟಲಾಗುತ್ತಿದೆ? ಇದರ ಬಗ್ಗೆ ಸಾರ್ವಜನಿಕರಿಂದ ಸ್ಪಂದನೆ ಹೇಗಿದೆ? ಕಡಿಮೆ ದರದಲ್ಲಿ ಮನೆ ನಿರ್ಮಾಣ ಮಾಡುವ ಯಾವುದಾದರೂ ವಿಧಾನ ಇದೆಯೇ? ಎಂಬಿತ್ಯಾದಿ ವಿಷಯಗಳ ಬಗ್ಗೆ ನಿಯೋಗವು ಮಾಹಿತಿ ಪಡೆಯಿತು.

ADVERTISEMENT

ಲಿಫ್ಟ್ ಗಳು, ಸ್ಟೇರ್ ಕೇಸ್ ಗಳು, ಮಳೆ ಇಂಗುಗುಂಡಿ ನಿರ್ಮಾಣ, ರಸ್ತೆಗಳು, ಚರಂಡಿ ವ್ಯವಸ್ಥೆ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳ ಬಗ್ಗೆಯೂ ನಿಯೋಗವು ಮಾಹಿತಿ ಪಡೆದುಕೊಂಡಿತು.

ಅಪಾರ್ಟ್‌ಮೆಂಟ್ ವಿನ್ಯಾಸ, ಒಳಾಂಗಣ ವ್ಯವಸ್ಥೆ, ಮೂಲಸೌಕರ್ಯಗಳ ಬಗ್ಗೆ ಇದೇ ವೇಳೆ ಮುಡಾ ಅಧ್ಯಕ್ಷರಾದ ಎಚ್.ವಿ.ರಾಜೀವ್ ಅವರು, ವಾಸವಾಗಿರುವ ನಿವಾಸಿಗಳಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿದರು.

ಕಡಿಮೆ ದರದಲ್ಲಿ ಗುಣಮಟ್ಟದ ಮನೆ; ರಾಜೀವ್
ಈ ಸಂದರ್ಭದಲ್ಲಿ ಮಾತನಾಡಿದ ಮುಡಾ ಅಧ್ಯಕ್ಷರಾದ ಎಚ್.ವಿ.ರಾಜೀವ್, ಸಾಮಾನ್ಯ ಜನರಿಗೂ ಮನೆಗಳು ಕಡಿಮೆ ದರದಲ್ಲಿ ಸಿಗಬೇಕು ಎಂಬ ನಿಟ್ಟಿನಲ್ಲಿ ಉಸ್ತುವಾರಿ ಸಚಿವರಾದ ಸೋಮಶೇಖರ್ ಅವರು ಸಹ ಆಶಯವನ್ನು ಹೊಂದಿದ್ದಾರೆ. ನಾವೂ ಸಹ ಮೈಸೂರು ಜನತೆಗೆ ಕಡಿಮೆ ದರದಲ್ಲಿ ಗುಣಮಟ್ಟದ ಮನೆಗಳನ್ನು ಮೈಸೂರಿನ ಜನತೆಗೆ ಇಷ್ಟವಾಗುವ ರೀತಿಯಲ್ಲಿ ನಿರ್ಮಾಣ ಮಾಡುವ ಗುರಿಯನ್ನು ಹೊಂದಲಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿಗೆ ಭೇಟಿ ನೀಡಿ ಅಧ್ಯಯನ ಕೈಗೊಂಡಿದ್ದೇವೆ. ಇಲ್ಲಿನ ರೂಪುರೇಷೆಗಳು ಸೇರಿದಂತೆ ಎಲ್ಲ ಮಾಹಿತಿಗಳನ್ನು ಪಡೆದು ಮೈಸೂರಿಗೆ ಬೇಕಾದಂತಹ ರೀತಿಯಲ್ಲಿ ಮಾರ್ಪಡಿಸಿ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಮೈಸೂರು ಹೊರವಲಯ, ರಿಂಗ್ ರೋಡ್ ಸೇರಿದಂತೆ ಹಲವೆಡೆ 6 ರಿಂದ 8 ಸಾವಿರ ಮನೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದ್ದು, ಇದಕ್ಕೆ ಜನರ ಸ್ಪಂದನೆ ನೋಡಿಕೊಂಡು ನಾವು ಮುಂದೆ ಹೆಚ್ಚಿನ ಮನೆಗಳನ್ನು ನಿರ್ಮಾಣ ಮಾಡುತ್ತೇವೆ ರಾಜೀವ್ ಹೇಳಿದರು.

ಜನತೆ ಅಭಿರುಚಿಗೆ ತಕ್ಕಂತೆ ನಿರ್ಮಾಣ; ಸಚಿವ ಎಸ್ಟಿಎಸ್
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್ , ಈ ಮುಂಚೆ ಮೈಸೂರಿನಲ್ಲಿ ಮುಡಾ ಅಧ್ಯಕ್ಷರಾದ ಎಚ್.ವಿ.ರಾಜೀವ್ ಅವರು ಮೈಸೂರಿನಲ್ಲಿ ಅಪಾರ್ಟ್ ಮೆಂಟ್ ನಿರ್ಮಾಣ ಮಾಡುವ ಬಗ್ಗೆ ಪ್ರಸ್ತಾಪ ಮಾಡಿದರು. ಕೊನೆಗೆ ಮುಡಾದವರ ಜೊತೆ ನಾನು ಸಭೆ ನಡೆಸಿ ಚರ್ಚೆ ನಡೆಸಿದೆ. ಮೈಸೂರು ಜನತೆಗೆ ಕಡಿಮೆ ದರದಲ್ಲಿ ಗುಣಮಟ್ಟದ ಮನೆ ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿದ್ದು, ಜನರ ಅಭಿರುಚಿಗೆ ತಕ್ಕಂತೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಾವು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಇನ್ನೂ ನಾಲ್ಕೈದು ಕಡೆ ವೀಕ್ಷಣೆ ಮಾಡಿ ಮೈಸೂರಿನಲ್ಲಿ ಈ ರೀತಿಯ ಮನೆ ಕಟ್ಟಲು ಸರಿಯಾದ ರೀತಿಯಾಗಿ ಯೋಜನೆ ರೂಪಿಸಿ ಮೈಸೂರಿನಲ್ಲಿ ನಿರ್ಮಾಣ ಮಾಡಲಾಗುವುದು. ಈ ನಿಟ್ಟಿನಲ್ಲಿ ಮುಡಾ ಅಧ್ಯಕ್ಷರ ನೇತೃತ್ವದ ತಂಡ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.