ADVERTISEMENT

ಶೂನ್ಯ ಬಂಡವಾಳದಲ್ಲಿ ಉದ್ಯಮಿಯಾಗಿ: ಮುರುಗೇಶ ನಿರಾಣಿ

ಕೈಗಾರಿಕೆ ದಸರಾ ಉದ್ಘಾಟಿಸಿದ ಮುರುಗೇಶ ನಿರಾಣಿ ಸಲಹೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 15:41 IST
Last Updated 26 ಸೆಪ್ಟೆಂಬರ್ 2022, 15:41 IST
ನಗರದ ವಿಜ್ಞಾನ ಭವನದಲ್ಲಿ ಸೋಮವಾರ ನಡೆದ ವಿಚಾರ ಸಂಕಿರಣಕ್ಕೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಚಾಲನೆ ನೀಡಿದರು
ನಗರದ ವಿಜ್ಞಾನ ಭವನದಲ್ಲಿ ಸೋಮವಾರ ನಡೆದ ವಿಚಾರ ಸಂಕಿರಣಕ್ಕೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಚಾಲನೆ ನೀಡಿದರು   

ಮೈಸೂರು: ‘ನಿಮ್ಮಲ್ಲಿ ಉದ್ಯಮಿಯಾಗುವ ಕನಸಿದ್ದರೆ ಸಾಕು, ಸರ್ಕಾರದ ಯೋಜನೆಗಳನ್ನು ಬಳಸಿ ಶೂನ್ಯ ಬಂಡವಾಳದಲ್ಲಿ ಉದ್ಯಮ ಆರಂಭಿಸಿ...!’

–ಹೀಗೆ ವಿದ್ಯಾರ್ಥಿಗಳು, ನವೋದ್ಯಮಿಗಳಿಗೆ ಭರವಸೆ ತುಂಬಿದವರು ಬೃಹತ್ ಮತ್ತು‌ ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ ನಿರಾಣಿ.

ನಾಡಹಬ್ಬ ದಸರಾದಲ್ಲಿ ಇದೇ ಮೊದಲ ಬಾರಿಗೆ ಕೈಗಾರಿಕಾ ದಸರಾ ಆಯೋಜಿಸಿದ್ದು, ನಗರದ ವಿಜ್ಞಾನ ಭವನದಲ್ಲಿ ಸೋಮವಾರ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು.

ADVERTISEMENT

‘ಜವಳಿ ಉದ್ಯಮ ಆರಂಭಿಸುವವರಿಗೆ ಶೇ 50ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಉಳಿದ ಮೊತ್ತವನ್ನು ಬ್ಯಾಂಕ್‌ನಿಂದ ಟರ್ಮ್‌ ಸಾಲ ಒದಗಿಸುವ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ತಂತ್ರಜ್ಞಾನ, ದೂರದೃಷ್ಟಿ, ಛಲವಿದ್ದರೆ ಸಾವಿರ ಕೋಟಿ ಉದ್ಯಮಿಯಾಗಲು ಅವಕಾಶವಿದೆ. ಕೈಗಾರಿಕೆ ಇಲಾಖೆಯಿಂದಲೇ ತರಬೇತಿ ನೀಡಿ, ವಿಸ್ತೃತ ವರದಿಯನ್ನೂ (ಡಿಪಿಆರ್) ಸಿದ್ಧಪಡಿಸಿಕೊಡಲಾಗುತ್ತದೆ’ ಎಂದರು.

ರಾಜ್ಯವೇ ಮುನ್ನುಡಿ: ‘150 ವರ್ಷದ ಹಿಂದೆಯೇ, ದೇಶದಲ್ಲಿ ಮೊಟ್ಟ ಮೊದಲ ಬಾರಿಗೆಕೈಗಾರಿಕೀಕರಣಕ್ಕೆ ಮುನ್ನುಡಿ ಹಾಡಿದ ಕೀರ್ತಿ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್‌, ಸರ್‌ ಎಂ.ವಿಶ್ವೇಶ್ವರಯ್ಯ ಅವರಿಗೆ ಸಲ್ಲುತ್ತದೆ. ನಿತ್ಯ ಬಳಕೆಯ ಎಲ್ಲವೂ ನಮ್ಮಲ್ಲಿ ತಯಾರಾಗಬೇಕು ಎಂಬುದು ಅವರ ಕನಸಾಗಿತ್ತು’ ಎಂದು ಸ್ಮರಿಸಿದರು.

‘ವಿಶ್ವದ ಫಾರ್ಚೂನ್‌–500 ಕಂಪನಿಗಳ ಪೈಕಿ 400 ಸಂಸ್ಥೆಗಳು ಬೆಂಗಳೂರಿನಲ್ಲಿವೆ. ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ. ಏರೋಸ್ಪೇಸ್‌ ಡಿಫೆನ್ಸ್‌ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ‘ಏರ್‌ಬಸ್‌’ನ 388 ಬಿಡಿಭಾಗಗಳನ್ನು ತಯಾರಿಸಲಾಗುತ್ತಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ‘ಸೆಮಿ ಕಂಡಕ್ಟರ್‌ ನೀತಿ’ ಜಾರಿಯಾಗಿದ್ದು, ₹26 ಸಾವಿರ ಕೋಟಿ ಹೂಡಿಕೆಯಾಗಲಿದೆ. 1 ಲಕ್ಷ ಮಂದಿಗೆ ಉದ್ಯೋಗ ದೊರೆಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸ್ವಾತಂತ್ರ್ಯ ಬಂದ ವೇಳೆ 30 ಕೋಟಿ ಜನಸಂಖ್ಯೆಗೆ ಆಹಾರ ಪೂರೈಸಲು ಸಾಧ್ಯವಾಗದೇ, ಹೊರದೇಶಗಳನ್ನು ಅವಲಂಬಿಸಬೇಕಾಗಿತ್ತು. ಈಗ ಜನಸಂಖ್ಯೆ 130 ಕೋಟಿ ದಾಟಿದ್ದು, ಇಡೀ ದೇಶಕ್ಕೆ ಆಹಾರ ತಯಾರಿಸಿ, ಹೊರ ದೇಶಗಳಿಗೂ ಆಹಾರ ಪೂರೈಸುವ ಸಾಮರ್ಥ್ಯವಿದೆ. ಕೃಷಿ ಉತ್ಪಾದನೆ ದ್ವಿಗುಣಗೊಂಡಿದೆ’ ಎಂದರು.

ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ದಿನೇಶ್, ಜಿಲ್ಲಾ ಕೈಗಾರಿಕೆಗಳ ಒಕ್ಕೂಟದ ಅಧ್ಯಕ್ಷ ಸುರೇಶ್‌ ಕುಮಾರ್‌ ಜೈನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.