ADVERTISEMENT

ಮಲ್ಲಯ್ಯನ ಜಾತ್ರೆಗೆ ಬೆಟ್ಟದಪುರ ಸಜ್ಜು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2024, 6:43 IST
Last Updated 21 ಫೆಬ್ರುವರಿ 2024, 6:43 IST
ಬೆಟ್ಟದಪುರ ಜಾತ್ರೆಯಲ್ಲಿ ಬೆಳ್ಳಿ ಬಸವ, ವಿಘ್ನೇಶ್ವರ ಹಾಗೂ ಭ್ರಮರಾಂಬ ಸಮೇತ ಮಲ್ಲಿಕಾರ್ಜುನ ಸ್ವಾಮಿಯ ಅಲಂಕೃತ ರಥಗಳು (ಸಂಗ್ರಹ ಚಿತ್ರ)
ಬೆಟ್ಟದಪುರ ಜಾತ್ರೆಯಲ್ಲಿ ಬೆಳ್ಳಿ ಬಸವ, ವಿಘ್ನೇಶ್ವರ ಹಾಗೂ ಭ್ರಮರಾಂಬ ಸಮೇತ ಮಲ್ಲಿಕಾರ್ಜುನ ಸ್ವಾಮಿಯ ಅಲಂಕೃತ ರಥಗಳು (ಸಂಗ್ರಹ ಚಿತ್ರ)   

ಬೆಟ್ಟದಪುರ: ಇಲ್ಲಿನ ಇತಿಹಾಸ ಪ್ರಸಿದ್ಧ ಭ್ರಮರಾಂಬ ಸಮೇತ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮರಥೋತ್ಸವ ಫೆ.24ರಂದು ನಡೆಯಲಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ.

ಮಲ್ಲಯ್ಯನ ಜಾತ್ರೆ ಎಂದೇ ಹೆಸರುವಾಸಿಯಾದ ಜಾತ್ರೆಗೆ ಮೈಸೂರು ಸೇರಿದಂತೆ ನೆರೆಯ ಜಿಲ್ಲೆಗಳಿಂದಲೂ ಹೆಚ್ಚಿನ ಭಕ್ತರು ಆಗಮಿಸುತ್ತಾರೆ. ಜಾತ್ರೆಯ ಸಿದ್ಧತೆಗೆ ಮುಜರಾಯಿ ಹಾಗೂ ಧಾರ್ಮಿಕ ದತ್ತಿ ಇಲಾಖೆ ಸಜ್ಜಾಗಿದೆ.

ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಈಗಾಗಲೇ ಆರಂಭಗೊಂಡಿದ್ದು, ಪುಣ್ಯಾಹ, ಗಣಪತಿ ಪೂಜೆ ಹಾಗೂ ಮೂಲದೇವರ ಪೂಜೆಯೊಂದಿಗೆ ಪ್ರತಿದಿನ ಗಜಾರೋಹಣ (ಆನೆ ವಾಹನ), ಭೂತಾರೋಹಣ (ಭೂತವಾಹನ), ವೃಷಭಾರೋಹಣ (ಬಸವ ವಾಹನ) ಉತ್ಸವಗಳು ನಡೆಯಲಿವೆ.

ADVERTISEMENT

ಫೆ.23ರಂದು ಸಂಜೆ 7 ಗಂಟೆಗೆ ಅಶ್ವಾರೋಹಣ (ಕುದುರೆ ವಾಹನ) ಉತ್ಸವ ಗ್ರಾಮದ ಮುಖ್ಯ ಬೀದಿಗಳಲ್ಲಿ ನಡೆಯಲಿದ್ದು, ರಾತ್ರಿ 10 ಗಂಟೆಗೆ ಅಲಂಕೃತ ಮಂಟಪದಲ್ಲಿ ಭ್ರಮರಾಂಬ ಹಾಗೂ ಮಲ್ಲಿಕಾರ್ಜುನ ಸ್ವಾಮಿಗೆ ಗಿರಿಜಾ ಕಲ್ಯಾಣ ನೆರವೇರಿಸಲಾಗುತ್ತದೆ. ಫೆ.24ರಂದು ಬೆಳಿಗ್ಗೆ 10.45ರಿಂದ 11.15ರ ಶುಭ ಮೇಷ ಲಗ್ನದಲ್ಲಿ ಬೆಳ್ಳಿ ಬಸವ, ವಿಘ್ನೇಶ್ವರ ಹಾಗೂ ಭ್ರಮರಾಂಬ ಸಮೇತ ಮಲ್ಲಿಕಾರ್ಜುನ ಸ್ವಾಮಿಯ ಉತ್ಸವ ಮೂರ್ತಿಗಳನ್ನು ಮೂರು ರಥಗಳಲ್ಲಿ ಪ್ರತಿಷ್ಠಾಪಿಸಿದ ಬಳಿಕ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರುಗಲಿದೆ. ಸಂಜೆ 5ರ ನಂತರ ಶಾಂತೋತ್ಸವ (ಹಂಸ ವಾಹನ) ನೆರವೇರಿಸಲಾಗುವುದು. ಫೆ.26ರಂದು ರಾತ್ರಿ ಗ್ರಾಮದ ತಾವರೆಕೆರೆಯಲ್ಲಿ ತೆಪ್ಪೋತ್ಸವ ನಡೆಯುವ ಮೂಲಕ ಜಾತ್ರೆಗೆ ತೆರೆ ಬೀಳಲಿದೆ.

‘ದೇವಾಲಯವನ್ನು ಬಣ್ಣಗಳಿಂದ ಅಲಂಕರಿಸಿದ್ದು, ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ರಾತ್ರಿ ವೇಳೆ ಬೆಟ್ಟ ಹತ್ತುವ ಭಕ್ತರಿಗೆ ಅನುಕೂಲವಾಗುವಂತೆ ವಿದ್ಯುತ್ ದೀಪಗಳನ್ನು ದುರಸ್ತಿಗೊಳಿಸಲಾಗಿದೆ’ ಎಂದು ಉಪ ತಹಶೀಲ್ದಾರ್ ಶಶಿಧರ್ ಮಾಹಿತಿ ನೀಡಿದರು.

‘ಪ್ರತಿ ವರ್ಷವೂ ಜಾತ್ರೆ ಹಾಗೂ ದೀಪಾವಳಿ ಸಂದರ್ಭಗಳಲ್ಲಿ ಬೆಟ್ಟಕ್ಕೆ ಹತ್ತುವ ಭಕ್ತರು ಪ್ಲಾಸ್ಟಿಕ್ ಬಾಟಲಿ ಹಾಗೂ ವಸ್ತುಗಳನ್ನು ಎಸೆಯುತ್ತಿದ್ದು, ಪ್ರಾಕೃತಿಕ ಸೌಂದರ್ಯ ಹಾಳಾಗುತ್ತಿದೆ. ಆದ್ದರಿಂದ ಈ ಧಾರ್ಮಿಕ ಕ್ಷೇತ್ರದ ಸ್ವಚ್ಛತೆ ಕಾಪಾಡಬೇಕು. ಪ್ಲಾಸ್ಟಿಕ್‌ ಬಳಕೆಗೆ ತಡೆಯೊಡ್ಡಬೇಕು’ ಎಂದು ಬೆಟ್ಟದ ಅರ್ಚಕ ಕೃಷ್ಣಪ್ರಸಾದ್ ಮನವಿ ಮಾಡಿದರು.

ಜಾತ್ರಾ ಮೈದಾನದಲ್ಲಿ ತಿಂಡಿ ತಿನಿಸುಗಳ ಅಂಗಡಿ, ವಿವಿಧ ಆಟೋಟಗಳಿಗೆ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಬೆಮ್ಮತ್ತಿ ಸುರೇಶ್ ಮತ್ತು ಅನಿತಾ ತೋಟಪ್ಪಶೆಟ್ಟಿ ಸ್ನೇಹ ಬಳಗದಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

ಬೆಟ್ಟದಪುರದಲ್ಲಿರುವ ದೇವಾಲಯಕ್ಕೆ ಬಣ್ಣ ಬಳಿದು ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ
ಜಾತ್ರೆಗೆ ಸಿದ್ಧವಾಗುತ್ತಿರುವ ಆಟವಾಡುವ ಸಾಧನಗಳು
ಉಪ್ಪಾರ ಸಮುದಾಯದವರು ಉತ್ಸವದ ಕಾರ್ಯ ನಿರ್ವಹಣೆಯನ್ನು ನೋಡಿಕೊಳ್ಳುತ್ತಾರೆ.
- ಸತೀಶ್ ಕಶ್ಯಪ್, ಪ್ರಧಾನ ಅರ್ಚಕ

‘ಶ್ರೀಶೈಲದಷ್ಟೇ ಪ್ರಸಿದ್ಧಿ’

‘ಬೆಟ್ಟದಪುರ ಶ್ರೀಶೈಲದ ಮಲ್ಲಿಕಾರ್ಜುನನ ಬೆಟ್ಟದಷ್ಟೇ ಮಹತ್ವ ಹೊಂದಿದ್ದು ಚೆಂಗಾಳ್ವ ಅರಸರ ಕಾಲದಲ್ಲಿ ಬೆಟ್ಟದ ಮೇಲಿರುವ ಸಂಕ್ರಾಂತಿ ಮಾಳ ಮೈದಾನದಲ್ಲಿ ಜಾತ್ರೆ ಮಾಡಲಾಗುತ್ತಿತ್ತು. ಕ್ರಮೇಣ ಗ್ರಾಮದ ತೇರಿನ ಬೀದಿಗೆ ರಥೋತ್ಸವ ಸೀಮಿತವಾಯಿತು. ಆದರೂ ಇಂದಿಗೂ ಭಕ್ತರು 3600 ಮೆಟ್ಟಿಲುಗಳನ್ನು ಏರಿ ಬೆಟ್ಟದ ಮೇಲೆ ನೆಲೆಸಿರುವ ಸಿಡಿಲು ಮಲ್ಲಿಕಾರ್ಜುನನ ದರ್ಶನ ಪಡೆದು ಧನ್ಯತಾ ಭಾವ ತೋರ್ಪಡಿಸುತ್ತಾರೆ’ ಎಂದು ಗ್ರಾಮದ ಪಟೇಲ್ ನಟೇಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.