
ಬೆಟ್ಟದಪುರ: ಇಲ್ಲಿನ ಐತಿಹಾಸಿಕ ಜಾನುವಾರು ಜಾತ್ರೆ ಈ ವರ್ಷವೂ ಸಂಭ್ರಮದಿಂದ ಹಾಗೂ ಉತ್ತಮ ವ್ಯಾಪಾರ ಚಟುವಟಿಕೆಗಳೊಂದಿಗೆ ನಡೆಯುತ್ತಿದೆ. ಜಾತ್ರೆಯಲ್ಲಿ ಹಳ್ಳಿಕಾರ್ ತಳಿಯ ಎತ್ತು, ಹಸು, ಕುರಿ ಸೇರಿದಂತೆ ವಿವಿಧ ಜಾನುವಾರುಗಳ ವ್ಯಾಪಾರ ಜೋರಾಗಿದೆ. ಉತ್ತಮ ಹಳ್ಳಿಕಾರ್ ತಳಿಯ ಎತ್ತುಗಳಿಗೆ ₹5 ಲಕ್ಷದ ವರೆಗೂ ಬೇಡಿಕೆ ಬಂದಿದ್ದು, ₹2 ಲಕ್ಷದ ಒಳಗೆ ಬೆಲೆಬಾಳುವ ಹಳ್ಳಿಕಾರ್ ಎತ್ತುಗಳು ಹೆಚ್ಚಾಗಿ ಮಾರಾಟವಾಗುತ್ತಿವೆ.
ವರ್ಷಗಳ ಪರಂಪರೆಯನ್ನು ಹೊತ್ತು ತಂದಿರುವ ಈ ಜಾತ್ರೆಗೆ ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆ ಹಾಗೂ ನೆರೆಯ ತಾಲ್ಲೂಕುಗಳಿಂದ ಸಾವಿರಾರು ರೈತರು, ವ್ಯಾಪಾರಿಗಳು ಮತ್ತು ಜನಸಾಮಾನ್ಯರು ಬರುತ್ತಿರುವುದರಿಂದ ಹೆಚ್ಚಾಗಿ ವ್ಯಾಪಾರ– ವಹಿವಾಟು ನಡೆಯುತ್ತಿದೆ.
ಸಂಕ್ರಾಂತಿಯ ಸುಗ್ಗಿಯ ನಂತರ ಆರಂಭವಾಗುವ ಜಾನುವಾರು ಜಾತ್ರೆಯಲ್ಲಿ ಸಮೀಪದ ಚುಂಚನಕಟ್ಟೆ, ಹೇಮಾಗಿರಿ, ಮುಡುಕುತೊರೆ ಕ್ಷೇತ್ರಗಳ ಜಾತ್ರೆ ನಂತರ ಬೆಟ್ಟದಪುರ ಜಾತ್ರೆ ನಡೆಯುವುದು ರೂಡಿ. ಬಹುತೇಕ ಕೃಷಿ ಚಟುವಟಿಕೆಗಳು ಪೂರ್ಣಗೊಂಡ ನಂತರ ರೈತರು ತಮ್ಮ ಕೃಷಿ ಕಾರ್ಯಕ್ಕೆ ಸೂಕ್ತ ಜಾನುವಾರುಗಳನ್ನು ಆಯ್ಕೆಮಾಡಿಕೊಳ್ಳಲು ಈ ಜಾತ್ರೆಯನ್ನು ನಂಬಿ ಬರುವುದರಿಂದ ಅವರಿಗೆ ಅನುಕೂಲವಾಗುವ ರಾಸುಗಳು ಸಿಗುತ್ತಿವೆ ಎನ್ನುತ್ತಾರೆ ರೈತರು.
ಜಾನುವಾರು ಜಾತ್ರೆಗೆ ಈ ಬಾರಿ ಉತ್ತಮ ಸ್ಪಂದನೆ ದೊರೆತಿದ್ದು, ಸುಮಾರು ಒಂದೂವರೆ ಸಾವಿರ ಹಳ್ಳಿಕಾರ್ ತಳಿ ಎತ್ತುಗಳು ಜಾತ್ರೆಯಲ್ಲಿ ಮಾರಾಟಕ್ಕಿವೆ. ಜಾತ್ರೆಯಲ್ಲಿ ಪ್ರತಿದಿನ 100 ರಿಂದ 200 ಜೊತೆಯವರೆಗೂ ವ್ಯಾಪಾರ ವಹಿವಾಟು ನಡೆಯುತ್ತಿದ್ದು, ರೈತರು ಮತ್ತು ವ್ಯಾಪಾರಿಗಳಲ್ಲಿ ಉತ್ತಮ ಉತ್ಸಾಹ ಕಂಡುಬರುತ್ತಿದೆ. ರೈತರು ತಮ್ಮ ಎತ್ತುಗಳನ್ನು ಅಲಂಕರಿಸಿ ಜಾತ್ರೆಗೆ ಕರೆತರುತ್ತಿದ್ದು, ಹಳ್ಳಿಕಾರ್ ಎತ್ತುಗಳ ದರ್ಶನಕ್ಕೆ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ನಾವು ಬ್ಯಾಂಡ್ ಸಹಿತ ಹಳ್ಳಿಕಾರ್ ತಳಿ ಎತ್ತುಗಳನ್ನು ಜಾತ್ರೆಗೆ ತಂದಿದ್ದೇವೆ. ಇಂತಹ ಪ್ರಯತ್ನಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕಾಗಿದೆ, ಉತ್ತಮ ತಳಿಯ ರಾಸುಗಳಿಗೆ ಬಹುಮಾನ ನೀಡಿದರೆ ರೈತರಿಗೆ ಇನ್ನಷ್ಟು ಆಸಕ್ತಿ ಹಾಗೂ ಹುಮ್ಮಸ್ಸು ಮೂಡುತ್ತದೆ. ಇದರಿಂದ ಹಳ್ಳಿಕಾರ್ ತಳಿಯ ಸಂರಕ್ಷಣೆಗೂ ಉತ್ತೇಜನ ದೊರೆಯಲಿದೆ ಎನ್ನುತ್ತಾರೆ ಬೆಟ್ಟದತುಂಗದ (ಬಿಟಿಎಂ ಕೊಪ್ಪಲು) ಸಿದ್ದರಾಮು.
ವರ್ಷ ಕಳೆದಂತೆ ಜಾನುವಾರುಗಳ ಜಾತ್ರೆಗೆ ಆಕರ್ಷಣೆ ಹೆಚ್ಚಾಗುತ್ತಿದೆ, ಜಾತ್ರೆಗೆ ಆಗಮಿಸುವ ಜಾನುವಾರುಗಳನ್ನು ಕೆರೆಯಲ್ಲಿ ತೊಳೆಯಲು ಇನ್ನಷ್ಟು ಅನುಕೂಲ ಕಲ್ಪಿಸಬೇಕಿದ್ದು, ಈ ಭಾಗದಲ್ಲಿ ಕೆಲವು ಮೂಲಭೂತ ಸೌಕರ್ಯಗಳ ಅಗತ್ಯವೂ ಇದೆ, ಅಗತ್ಯ ಸೌಕರ್ಯ ಒದಗಿಸಿದರೆ ಜಾತ್ರೆಯ ಮಹತ್ವ ಇನ್ನಷ್ಟು ಹೆಚ್ಚಲಿದೆ ಎನ್ನುತ್ತಾರೆ ಆನಿವಾಳು ರಾಜೇಶ್.
ಆಂಧ್ರಪ್ರದೇಶ ಹಾಗೂ ತಮಿಳುನಾಡಿನಿಂದ ವ್ಯಾಪಾರಿಗಳು ಜಾತ್ರೆಗೆ ಆಗಮಿಸಿರುವುದರಿಂದ ವ್ಯಾಪಾರ ವಹಿವಾಟು ಚುರುಕುಗೊಂಡಿದೆ, ಹಳ್ಳಿಕಾರ್ ತಳಿ ಜಾನುವಾರುಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ ಎಂಬುದು ಸಾಲುಕೊಪ್ಪಲಿನ ದಿನೇಶ್ ಅಭಿಪ್ರಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.