ADVERTISEMENT

ಬೆಟ್ಟದಪುರ | ದೀಪಾವಳಿ ದೀವಟಿಗೆ ಉತ್ಸವ 22ರಂದು

ಬೆಟ್ಟದಪುರ ಶಿಡ್ಲು ಮಲ್ಲಿಕಾರ್ಜುನ ದೇವಾಲಯದಲ್ಲಿ ಆಚರಣೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 5:58 IST
Last Updated 19 ಅಕ್ಟೋಬರ್ 2025, 5:58 IST
ಬೆಟ್ಟದಪುರದಲ್ಲಿ ಕಳೆದ ವರ್ಷ ನಡೆದ ದೀಪಾವಳಿ ದೀವಟಿಗೆ ಹಬ್ಬದಲ್ಲಿ ದೇವರ ಉತ್ಸವ ಮೂರ್ತಿಗಳ ಮೆರವಣಿಗೆ (ಸಂಗ್ರಹ ಚಿತ್ರ)
ಬೆಟ್ಟದಪುರದಲ್ಲಿ ಕಳೆದ ವರ್ಷ ನಡೆದ ದೀಪಾವಳಿ ದೀವಟಿಗೆ ಹಬ್ಬದಲ್ಲಿ ದೇವರ ಉತ್ಸವ ಮೂರ್ತಿಗಳ ಮೆರವಣಿಗೆ (ಸಂಗ್ರಹ ಚಿತ್ರ)   

ಬೆಟ್ಟದಪುರ: ಇಲ್ಲಿನ ಭ್ರಮರಾಂಬ ಸಮೇತ ಶಿಡ್ಲು ಮಲ್ಲಿಕಾರ್ಜುನ ಸ್ವಾಮಿ ದೀಪಾವಳಿ ದೀವಟಿಗೆ ಉತ್ಸವ ಬುಧವಾರ (ಅ.22) ನಡೆಯಲಿದ್ದು, ಸಕಲ ಸಿದ್ಧತೆ ಭರದಿಂದ ಸಾಗಿದೆ.

ಮಂಗಳವಾರ (ಅ.21) ರಾತ್ರಿ 8 ಗಂಟೆಗೆ ಗ್ರಾಮದ ದೇವಾಲಯದಿಂದ ಬೆಟ್ಟದ ಮೇಲಿರುವ ದೇಗುಲಕ್ಕೆ ಬೆಳ್ಳಿ ಬಸಪ್ಪ, ಗಿರಿಜಾದೇವಿ ಹಾಗೂ ಶಿಡ್ಲು ಮಲ್ಲಿಕಾರ್ಜುನ ಉತ್ಸವ ಮೂರ್ತಿಗಳನ್ನು ಹೊತ್ತೊಯ್ಯುವ ಮೂಲಕ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಮರುದಿನ ಬಲಿಪಾಡ್ಯಮಿಯಂದು ಮುಂಜಾನೆ ಬೆಟ್ಟದಲ್ಲಿ ಅಭಿಷೇಕ, ಅಲಂಕಾರ ಹಾಗೂ ಮಹಾಮಂಗಳಾರತಿ, ವಿಶೇಷ ಪೂಜೆ ಸಲ್ಲಿಸಿದ ಬಳಿಕ ಉತ್ಸವ ಮೂರ್ತಿಗಳನ್ನು ಮರಳಿ ಗ್ರಾಮದೊಳಗೆ ಕರೆ ತರಲಾಗುತ್ತದೆ. ಮನೆ ಮುಂಭಾಗ ನಿರ್ಮಿಸಲಾದ ಹಸಿರು ಮಂಟಪದಲ್ಲಿ ಬೆಟ್ಟದಿಂದ ತಂದ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತದೆ.

ದೇವರ ನಿಶ್ಚಿತಾರ್ಥ: ಪ್ರತಿ ವರ್ಷ ಫೆಬ್ರುವರಿ ತಿಂಗಳಿನಲ್ಲಿ ಬರುವ ಭರತ ಹುಣ್ಣಿಮೆಯಂದು ಗಿರಿಜಾ ಕಲ್ಯಾಣ ನಡೆಸುವುದು ಇಲ್ಲಿನ ಸಂಪ್ರದಾಯವಾಗಿದ್ದು, ಪೂರ್ವಭಾವಿಯಾಗಿ ದೀಪಾವಳಿಯಂದು ಲಗ್ನಪತ್ರಿಕೆ ಶಾಸ್ತ್ರವನ್ನು ಮಾಡಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ದೇವಾಲಯದಲ್ಲಿ ಗಿರಿಜಾ ಮಲ್ಲಿಕಾರ್ಜುನ ಸ್ವಾಮಿ ಕಲ್ಯಾಣದ ದಿನವನ್ನು ನಿಗದಿಪಡಿಸಲಾಗುವುದು.

ADVERTISEMENT

ನಂತರ ಗ್ರಾಮದ ದೇವಾಲಯದಿಂದ ಬೆಟ್ಟದ ಸುತ್ತಲಿನ ಬಸವೇಶ್ವರ ಕಾಲೊನಿ, ಬನ್ನಿಮಂಟಪ, ಬೆಟ್ಟದತುಂಗ, ದೇವರತೋಟ ಆರ್ಕೇಶ್ವರ ದೇವಾಲಯ, ಕುಡಕೂರು ಗ್ರಾಮಗಳು ಸೇರಿದಂತೆ 15 ಕಿ.ಮೀ ಸಂಚರಿಸಿ ರಾತ್ರಿ ಬೆಟ್ಟದಪುರಕ್ಕೆ ಮರಳುತ್ತದೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯ ಮೇಳ ಹಾಗೂ ಪಟಾಕಿ ಸಿಡಿಮದ್ದುಗಳೊಂದಿಗೆ ವಿಜೃಂಭಣೆಯಿಂದ ಮೆರವಣಿಗೆ ಮಾಡಿ ದೇವಾಲಯಕ್ಕೆ ದೇವರನ್ನು ತಲುಪಿಸಲಾಗುತ್ತದೆ.

ದೇವರ ಕಾರ್ಯಕ್ರಮವನ್ನು ಉಪ್ಪಾರ ಸಮುದಾಯದವರು ನಡೆಸಿಕೊಡುತ್ತಾರೆ, ಇವರೊಟ್ಟಿಗೆ ಎಲ್ಲಾ ಸಮುದಾಯದವರು ಒಗ್ಗೂಡಿ ಸಂಭ್ರಮದಿಂದ ಉತ್ಸವ ಆಚರಿಸುತ್ತಾರೆ. ಸಾವಿರಾರು ಭಕ್ತರು ಉರಿಯುವ ಪಂಜುಗಳನ್ನು ಹಿಡಿದು, ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ದೀಪಾವಳಿ ಉತ್ಸವ ನೋಡಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ.

‘ನಮ್ಮ ಕಾಲದಲ್ಲಿ ಹಬ್ಬವೆಂದರೆ ದೊಡ್ಡ ಸಂಭ್ರಮ, ಈಗ ಒಂದು ದಿನಕ್ಕೆ ಸೀಮಿತವಾಗಿದೆ, ಪೂರ್ವಜರ ಕಾಲದಿಂದಲೂ ಮಂಟಪ ಸೇವೆ ನಡೆಸುತ್ತಿದ್ದೇವೆ’ ಎಂದು ಬೆಟ್ಟದತುಂಗ ಗ್ರಾಮದ ಮುಖಂಡ ಟಿ.ಕೃಷ್ಣ ಅರಸ್ ಹೇಳುತ್ತಾರೆ. 

ದೀವಟಿಗೆ ವಿಶೇಷತೆ: ಮರದ ಅಥವಾ ಕಂಚಿನ ಹಿಡಿಯುಳ್ಳ ಪಂಜಿನ ಕೋಂತಿಗೆ ಹತ್ತಿ ಬಟ್ಟೆಗಳನ್ನು ನಯವಾಗಿ ಹರಿದು ಸುತ್ತಿ ಎಣ್ಣೆಯನ್ನು ಹಾಕಿ ನಿಧಾನವಾಗಿ ಉರಿಯುವಂತೆ ಮಾಡಲಾಗುತ್ತದೆ. ಇದನ್ನು ಹಿಡಿದು ಬೆಟ್ಟದ ಸುತ್ತಲೂ ಪ್ರದಕ್ಷಿಣೆ ಹಾಕುವುದರಿಂದ ಒಳಿತಾಗುವುದು ಎಂಬ ನಂಬಿಕೆ ಭಕ್ತರಲ್ಲಿದೆ. ಮೈಸೂರು ಮಾತ್ರವಲ್ಲದೆ ವಿವಿಧ ಜಿಲ್ಲೆಗಳಿಂದಲೂ ಭಕ್ತರು ಉತ್ಸವದಲ್ಲಿ ಭಾಗವಹಿಸುತ್ತಾರೆ.

ಬೆಟ್ಟದಲ್ಲಿ ಪೂಜೆ: ಮಂಗಳವಾರ ಅಮಾವಾಸ್ಯೆ ಪ್ರಯುಕ್ತ ಬೆಟ್ಟದಲ್ಲಿ ನೆಲೆಸಿರುವ ಉದ್ಭವ ಲಿಂಗ ಮಲ್ಲಿಕಾರ್ಜುನ ಹಾಗೂ ಭ್ರಮರಾಂಬಿಕೆ ದೇವಿಗೆ ವಿಶೇಷ ಅಲಂಕಾರ ಮಾಡಿ, ಮಹಾಪೂಜೆ ಜರುಗಲಿದ್ದು, ಸಾವಿರಾರು ಭಕ್ತರು 3,108 ಮೆಟ್ಟಿಲುಗಳುಳ್ಳ ಬೆಟ್ಟವನ್ನೇರಿ ಹರಕೆ ಕಾಣಿಕೆಗಳನ್ನು ಸಮರ್ಪಿಸುತ್ತಾರೆ. 

ಬೆಟ್ಟದಪುರ ಶಿಡ್ಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟ

ಮಂಗಳವಾರ ರಾತ್ರಿ 8ಕ್ಕೆ ಚಾಲನೆ ಪ್ರಮುಖ ಬೀದಿಗಳಲ್ಲಿ ವಾದ್ಯ ಮೇಳ ದೀವಟಿಗೆ ಹಿಡಿದು ಬೆಟ್ಟದ ಸುತ್ತಲೂ ಪ್ರದಕ್ಷಿಣೆ

ಗ್ರಾಮದ ಮಧ್ಯಭಾಗದಲ್ಲಿ ಹಾಗೂ ಬೆಟ್ಟದ ಮೇಲಿರುವ ದೇವಾಲಯ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಜೀರ್ಣೋದ್ಧಾರಕ್ಕೆ ಜನಪ್ರತಿನಿಧಿಗಳು ಗಮನಹರಿಸಬೇಕು.
-ಸತೀಶ್ ಕಶ್ಯಪ್ ಪ್ರಧಾನ ಅರ್ಚಕ

ಸಿದ್ಧತೆ ಮಾಡಿಕೊಳ್ಳಲಾಗಿದೆ ಉತ್ಸವಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ ಬೆಟ್ಟದ ತಪ್ಪಲಿನಲ್ಲಿ ಹಾಗೂ ಬೆಟ್ಟದತುಂಗ ಮಾರ್ಗವಾಗಿ 2 ತಾತ್ಕಾಲಿಕ ಆರೋಗ್ಯ ಚಿಕಿತ್ಸಾಲಯವನ್ನು ತೆರೆಯಲಾಗಿದೆ. ಕುಡಿಯುವ ನೀರು ತಾತ್ಕಾಲಿಕ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಸೆಸ್ಕ್ ವತಿಯಿಂದ ಬೆಟ್ಟದ ಮೆಟ್ಟಿಲು ಹಾಗೂ ಮೇಲ್ಭಾಗಕ್ಕೆ ವಿದ್ಯುತ್ ಸೌಲಭ್ಯ ಒದಗಿಸಲಾಗಿದೆ. ಶಶಿಧರ್ ಉಪ ತಹಶೀಲ್ದಾರ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.