ADVERTISEMENT

ಬೆಟ್ಟದಪುರ ‘ಮಲ್ಲಯ್ಯನ ಜಾತ್ರೆ‌’: ಗ್ರಾಮದಲ್ಲಿ ಹಬ್ಬದ ವಾತಾವರಣ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 4:51 IST
Last Updated 2 ಫೆಬ್ರುವರಿ 2026, 4:51 IST
ಬೆಟ್ಟದಪುರ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ವಿವಿಧ ಪುಷ್ಪಗಳಿಂದ ಅಲಂಕರಿಸಿದ ತ್ರಿವಳಿ ರಥಗಳು (ಸಂಗ್ರಹ ಚಿತ್ರ)
ಬೆಟ್ಟದಪುರ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ವಿವಿಧ ಪುಷ್ಪಗಳಿಂದ ಅಲಂಕರಿಸಿದ ತ್ರಿವಳಿ ರಥಗಳು (ಸಂಗ್ರಹ ಚಿತ್ರ)   

ಬೆಟ್ಟದಪುರ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಭ್ರಮರಾಂಭ ಸಮೇತ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮ ರಥೋತ್ಸವ ಫೆ.3ರಂದು ನಡೆಯಲಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ.

‘ಮಲ್ಲಯ್ಯನ ಜಾತ್ರೆ’ ಎಂದು ಪ್ರಖ್ಯಾತಿ ಹೊಂದಿರುವ ಈ ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ, ತಮ್ಮ ಇಷ್ಟಾರ್ಥ ಸಿದ್ಧಿ ನೆರವೇರಿಸಲು ಪೂಜೆ ಸಲ್ಲಿಸುವುದು ಇಲ್ಲಿನ ವಿಶೇಷ. ಜಾತ್ರೆಯ ಯಶಸ್ಸಿಗೆ ಮುಜರಾಯಿ ಹಾಗೂ ಧಾರ್ಮಿಕ ದತ್ತಿ ಇಲಾಖೆ, ಗ್ರಾಮ ಪಂಚಾಯಿತಿ ಸಕಲ ಸಿದ್ಧತೆ ನಡೆಸಿವೆ.

ಈಗಾಗಲೇ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಪೂಜಾ ಕೈಂಕರ್ಯಗಳು ಆರಂಭಗೊಂಡಿದ್ದು, 2ರಂದು (ಸೋಮವಾರ) ರಾತ್ರಿ 9ರ ನಂತರ ವಿವಿಧ ಪುಷ್ಪಗಳಿಂದ ಅಲಂಕೃತಗೊಂಡ ಮಂಟಪದಲ್ಲಿ ಭ್ರಮರಾಂಭ ಹಾಗೂ ಮಲ್ಲಿಕಾರ್ಜುನ ಸ್ವಾಮಿಗೆ ಗಿರಿಜಾ ಕಲ್ಯಾಣ ನೆರವೇರಿಸಲಾಗುವುದು.

ADVERTISEMENT

3ರಂದು (ಮಂಗಳವಾರ) ಬೆಳಿಗ್ಗೆ 11.30 ರಿಂದ 12 ಗಂಟೆಯೊಳಗೆ ಸಲ್ಲುವ ಶುಭ ಮೇಷ ಲಗ್ನದಲ್ಲಿ ಬೆಳ್ಳಿ ಬಸಪ್ಪ, ವಿಘ್ನೇಶ್ವರ ಹಾಗೂ ಭ್ರಮರಾಂಭ ಸಮೇತ ಮಲ್ಲಿಕಾರ್ಜುನ ಸ್ವಾಮಿ ಉತ್ಸವ ಮೂರ್ತಿಗಳನ್ನು ಮೂರು (ತ್ರಿವಳಿ) ರಥಗಳಲ್ಲಿ ಪ್ರತಿಷ್ಠಾಪಿಸಿದ ಬಳಿಕ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ರಥೋತ್ಸವ ಜರುಗಲಿದೆ. ರಾತ್ರಿ ಶಾಂತೋತ್ಸವ (ಹಂಸವಾಹನ) ನಡೆಯಲಿದೆ.

5ರಂದು ರಾತ್ರಿ ತಾವರೆಕೆರೆಯಲ್ಲಿ ತೆಪೋತ್ಸವ ಮಾಡುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ. ಎಲ್ಲಾ ಉತ್ಸವದ ಕಾರ್ಯನಿರ್ವಹಣೆಯನ್ನು ಗ್ರಾಮದ ಉಪ್ಪಾರ ಸಮುದಾಯದವರು ನಡೆಸಿಕೊಡುತ್ತಾರೆ.

ಗ್ರಾಮದ ಮಧ್ಯ ಭಾಗದಲ್ಲಿರುವ ದೇವಾಲಯವನ್ನು ಬಣ್ಣಗಳಿಂದ ಅಲಂಕರಿಸಿದ್ದು, ಗರ್ಭಗುಡಿ, ಮುಖಮಂಟಪದಲ್ಲಿ ಹೂವಿನ ಅಲಂಕಾರ ಮಾಡಲಾಗಿದೆ. ಗ್ರಾಮದ ಪ್ರಮುಖ ರಸ್ತೆ, ವೃತಗಳಲ್ಲಿ ವಿದ್ಯುತ್ ದೀಪಗಳಿಂದ ಸಿಂಗರಿಸಿಲಾಗಿದೆ. ಗ್ರಾಮ ಪಂಚಾಯತಿಯಿಂದ ತ್ರಿವಳಿ ರಥಗಳು ಸಾಗುವ ಸ್ಥಳದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ.

ಜಾತ್ರಾ ಮಹೋತ್ಸವ ಅಂಗವಾಗಿ ಭಕ್ತರು 3,600 ಮೆಟ್ಟಿಲುಗಳುಳ್ಳ ಬೆಟ್ಟ ಏರಿ ಪೂಜೆ ಸಲ್ಲಿಸುತ್ತಾರೆ. ಭಕ್ತರ ಸುರಕ್ಷತೆ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಂಡಿದೆ. ಆರೋಗ್ಯ ಇಲಾಖೆಯಿಂದ ತಾತ್ಕಾಲಿಕ ಚಿಕಿತ್ಸೆ ನೀಡಲು ಕ್ರಮವಹಿಸಲಾಗಿದೆ.

‘ಬೆಟ್ಟ ಪ್ರದೇಶವು ಪವಿತ್ರ ಕ್ಷೇತ್ರದ ಜೊತೆಗೆ ಪ್ರಕೃತಿಯ ಅಮೂಲ್ಯ ಸಂಪತ್ತಾಗಿದೆ. ಭಕ್ತರು ಪರಿಸರ ಹಾನಿ ಮಾಡದೆ ಸ್ವಚ್ಛತೆಯತ್ತ ಗಮನಹರಿಸಬೇಕು’ ಎಂದು ಬೆಟ್ಟದ ದೇವಾಲಯದ ಅರ್ಚಕ ಕೃಷ್ಣಪ್ರಸಾದ್ ಹೇಳಿದರು.

ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿರುವುದು
ಜಾತ್ರಾ ಮಹೋತ್ಸವಕ್ಕಾಗಿ 15 ದಿನಗಳಿಂದ ಗ್ರಾಮದಲ್ಲಿ ನಿರಂತರವಾಗಿ ಸ್ವಚ್ಛತೆ ಕಾರ್ಯ ನಡೆಯುತ್ತಿದೆ. ಭಕ್ತರಿಗೆ ಮೂಲಕ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ
ಮಂಜುನಾಥ್ ಎಚ್.ಡಿ ಪಿಡಿಒ
ಈ ಭಾಗದ ಬ್ರಹ್ಮರಥೋತ್ಸವ ನಮ್ಮ ಗ್ರಾಮೀಣ ಜನರ ಕಲೆ ಸಂಸ್ಕೃತಿ ಸಂಪ್ರದಾಯ ಉತ್ಸವದ ಪ್ರತಿಬಿಂಬವಾಗಿದೆ.ಎಲ್ಲರೂ ಸೇರಿ ಸಂಭ್ರಮದಿಂದ ಆಚರಿಸುವುದೇ ಒಂದು ಸಡಗರ ಗುರುಮೂರ್ತಿ
ಜೋಗನಹಳ್ಳಿ ರೈತ ಮುಖಂಡ
ದಾಸೋಹ ವ್ಯವಸ್ಥೆ
ಗಿರಿಜಾ ಕಲ್ಯಾಣ ನಡೆಯುವ ರಾತ್ರಿ ಸಮಯ ಹಾಗೂ ಬ್ರಹ್ಮರಥೋತ್ಸವದ ದಿನದಂದು ಬರುವ ಭಕ್ತರಿಗೆ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಮನೆತನದವರು ಮತ್ತು ಗ್ರಾಮಸ್ಥರ ವತಿಯಿಂದ ದೇವಾಲಯದ ಆವರಣದಲ್ಲಿ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.