ADVERTISEMENT

ಬೆಟ್ಟದಪುರ ಜಾನುವಾರು ಜಾತ್ರೆ: ಹಳ್ಳಿಕಾರ್‌ ಜೋಡೆತ್ತು ಬೆಲೆ ₹ 6.5 ಲಕ್ಷ!

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2025, 5:18 IST
Last Updated 5 ಫೆಬ್ರುವರಿ 2025, 5:18 IST
ಬೆಟ್ಟದಪುರ ಸಮೀಪದ ಹರದೂರು ಗೇಟ್‌ನಲ್ಲಿ ಜೋಡೆತ್ತುಗಳನ್ನು ಕಟ್ಟಿರುವುದು
ಬೆಟ್ಟದಪುರ ಸಮೀಪದ ಹರದೂರು ಗೇಟ್‌ನಲ್ಲಿ ಜೋಡೆತ್ತುಗಳನ್ನು ಕಟ್ಟಿರುವುದು   

ಬೆಟ್ಟದಪುರ: ಚಪ್ಪರದ ಕೆಳಗೆ ಸಿಂಗಾರಗೊಂಡ ಎತ್ತುಗಳು ಮೇವು ತಿನ್ನುತ್ತಿದ್ದರೆ, ಜನ ತದೇಕಚಿತ್ತದಿಂದ ಅವುಗಳನ್ನೇ ನೋಡುತ್ತಿದ್ದರು. ದಷ್ಟ‍ಪುಷ್ಟವಾಗಿದ್ದ ರಾಸುಗಳ ಕೊಂಬುಗಳಿಗೆ ಬಣ್ಣಬಣ್ಣದ ಬಟ್ಟೆ ಕಟ್ಟಲಾಗಿತ್ತು. ಇಲ್ಲಿನ ಎತ್ತುಗಳ ಬೆಲೆ ಲಕ್ಷಾಂತರ ರೂಪಾಯಿ...!

‌ಇಲ್ಲಿನ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರದಿಂದ ಆರಂಭಗೊಂಡಿರುವ ಜಾನುವಾರು ಜಾತ್ರೆಯಲ್ಲಿ ರಾಸುಗಳ ಮಾರಾಟ ಜೋರಾಗಿತ್ತು. ಅದರಲ್ಲೂ ಹಳ್ಳಿಕಾರ್‌ ತಳಿಯ ಜೋಡೆತ್ತುಗಳು ₹50 ಸಾವಿರದಿಂದ ₹3 ಲಕ್ಷದವರೆಗೂ ಮಾರಾಟವಾದವು.

ಮೈಸೂರು ಜಿಲ್ಲೆ ಮಾತ್ರವಲ್ಲದೆ ಹಾಸನ, ಮಂಡ್ಯ, ಕೊಡಗು ಭಾಗದಿಂದಲೂ ಹಳ್ಳಿಕಾರ್ ಜೋಡೆತ್ತುಗಳು ಬಂದಿದ್ದು, 1,500ಕ್ಕೂ ಹೆಚ್ಚು ಜೋಡಿ ರಾಸುಗಳು ಇಲ್ಲಿವೆ. ಎರಡು ದಿನದಲ್ಲಿ 300ಕ್ಕೂ ಹೆಚ್ಚು ಎತ್ತುಗಳು ಮಾರಾಟವಾಗಿವೆ ಎಂದು ರೈತರು ಹೇಳುತ್ತಾರೆ.

ADVERTISEMENT

ದುಬಾರಿ ಬೆಲೆಯ ಹಳ್ಳಿಕಾರ್ ಎತ್ತುಗಳನ್ನು ವಾದ್ಯ ಮೇಳಗಳೊಂದಿಗೆ ಜಾತ್ರೆ ಮಾಳಕ್ಕೆ ಕರೆತಂದ ರೈತರು ಚಪ್ಪರಗಳಲ್ಲಿ ಆರೈಕೆ ಮಾಡುತ್ತಿದ್ದಾರೆ.

ಪಿರಿಯಾಪಟ್ಟಣದ ಪಿ.ವಿ. ನಾಗರಾಜ್ ಅವರು ಕರೆತಂದಿರುವ ಹಾಲು ಹಲ್ಲಿನ ಹಳ್ಳಿಕಾರ್‌ ರಾಸುಗಳು ಎಲ್ಲರ ಗಮನ ಸೆಳೆಯುತ್ತಿವೆ.

‘ಒಂದು ತಿಂಗಳ ಹಿಂದೆ ಚುಂಚನಕಟ್ಟೆಯ ಜಾನುವಾರು ಜಾತ್ರೆಯಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿದ ಕರುಗಳನ್ನು ₹5.5 ಲಕ್ಷಕ್ಕೆ ಖರೀದಿ ಮಾಡಿದ್ದೆ, ಈಗ ₹ 6.5 ಲಕ್ಷ ಬೆಲೆ ಬಾಳುತ್ತವೆ’ ಎಂದು ಪಿ.ವಿ. ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಎತ್ತುಗಳಿಗೆ ಪ್ರತಿ ದಿನ ಎರಡು ಲೀಟರ್ ಹಾಲು, ರವೆ ಬೂಸ, ಗೋಧಿ ಬೂಸ, ಕಡಲೆಹಿಂಡಿಗಳನ್ನು ನಿಯಮಿತವಾಗಿ ನೀಡುತ್ತೇವೆ. ಪ್ರತಿ ವರ್ಷ ಘಾಟಿ ಸುಬ್ರಹ್ಮ‌ಣ್ಯ, ಚುಂಚನಕಟ್ಟೆ ಹಾಗೂ ಬೆಟ್ಟದಪುರದ ಜಾನುವಾರು ಜಾತ್ರೆಗಳಿಗೆ ಹೋಗುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

ರೈತರಾದ ಮುತ್ತುರಾಜ್, ರಾಜೇಶ್, ಗಿರೀಶ್, ಹರೀಶ್, ಸ್ವಾಮಿ, ಸಂಜಯ್, ದಿನೇಶ್, ಲೋಕೇಶ್, ಹಾಗೂ ಅಣ್ಣಯ್ಯ ಹೆಚ್ಚು ಬೆಲೆಯ ರಾಸುಗಳನ್ನು ಕರೆತಂದಿದ್ದಾರೆ. ಬಳ್ಳಾರಿ, ಮಂಡ್ಯ, ಹೊಳೆನರಸೀಪುರ, ಚನ್ನರಾಯಪಟ್ಟಣದಿಂದಲೂ ರೈತರು ಬಂದು ಎತ್ತುಗಳನ್ನು ಖರೀದಿಸುತ್ತಿದ್ದಾರೆ.

‘ಜಾತ್ರೆಯಲ್ಲಿ ಭಾಗವಹಿಸುವ ಉತ್ತಮ ರಾಸುಗಳಿಗೆ ಬಹುಮಾನ ನೀಡಿದರೆ ಮುಂಬರುವ ಜಾತ್ರೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಿದಂತಾಗುತ್ತದೆ’ ಎಂದು ರೈತ ಚಿಕ್ಕಹನಸೋಗೆ ಅಭಿಲಾಷ್ ಒತ್ತಾಯಿಸುತ್ತಾರೆ.

ಕಳೆದ ಬಾರಿಯ ಜಾತ್ರೆಗಿಂತ ಈ ಬಾರಿ ರಾಸುಗಳ ಬೆಲೆ ದುಪ್ಪಟ್ಟಾಗಿದ್ದು ಕಡಿಮೆ ಬೆಲೆಯ ಎತ್ತುಗಳು ದೊರೆಯದೆ ಸಮಸ್ಯೆ ಉಂಟಾಗಿದೆ
ಮಹೇಶ್ ರೈತ ಕೆಸವಿನಕೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.