
ಸುತ್ತೂರು (ಮೈಸೂರು ಜಿಲ್ಲೆ): ಇಲ್ಲಿನ ವೀರಸಿಂಹಾಸನ ಮಹಾಸಂಸ್ಥಾನ ಮಠದಿಂದ ನಡೆಯುತ್ತಿರುವ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಆಯೋಜಿಸಿದ್ದ 32ನೇ ರಾಜ್ಯಮಟ್ಟದ ಭಜನಾ ಮೇಳದಲ್ಲಿ ವಿಜೇತರಾದ ತಂಡಗಳಿಗೆ ಸೋಮವಾರ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಯಿತು.
ಶಿವರಾತ್ರೀಶ್ವರರ ಕರ್ತೃ ಗದ್ದುಗೆ ಆವರಣದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಮಾರಂಭ ನಡೆಯಿತು.
ವಿವಿಧ ವಿಭಾಗಗಳಲ್ಲಿ ಜರುಗಿದ ಸ್ಪರ್ಧೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ 700ಕ್ಕೂ ಹೆಚ್ಚಿನ ತಂಡಗಳು ಭಾಗವಹಿಸಿ ಭಕ್ತಿಸುಧೆ ಹರಿಸಿದವು.
ವಿಜೇತರ ವಿವರ ಇಂತಿದೆ.
ಪುರುಷರ ವಿಭಾಗ: ಗದಗದ ಹುಲಿಕೋಟೆಯ ಶ್ರೀರಾಮ ಭಜನಾ ಸಂಘ (ಪ್ರಥಮ), ಚಾಮರಾಜನಗರ ಜಿಲ್ಲೆ ಬೆಟ್ಟದ ಮಾದಹಳ್ಳಿಯ ಬಸವೇಶ್ವರ ಭಜನಾ ಸಂಘ (ದ್ವಿತೀಯ), ಮೈಸೂರಿನ ಜೆಎಸ್‌ಎಸ್ ಬಡಾವಣೆಯ ಶಿವರಾತ್ರಿ ರಾಜೇಂದ್ರ ಭಜನಾ ಕಲಾ ತಂಡ (ತೃತೀಯ), ನಂಜನಗೂಡು ತಾಲ್ಲೂಕು ದೇವನೂರಿನ ಗುರುಮಲ್ಲೇಶ್ವರ ಭಜನಾ ಸಂಘ (4ನೇ), ಧಾರವಾಡ ಜಿಲ್ಲೆ ಜಾವೂರದ ಶಿವಾನಂದ ಭಜನಾ ಸಂಘ (5ನೇ ಸ್ಥಾನ). ಐದು ಸಂಘಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.
ಗ್ರಾಮೀಣ ಮಹಿಳಾ ವಿಭಾಗ:
ಚಾಮರಾಜನಗರ ಕೆಲಸೂರುಪುರದ ಶರಣೆ ಗಂಗಾಂಬಿಕಾ ಮಹಿಳಾ ಸಂಘ (ಪ್ರ), ನಂಜನಗೂಡು ತಾಲ್ಲೂಕು ಸೋನಹಳ್ಳಿಯ ಶಿವರಾತ್ರೀಶ್ವರ ಮಹಿಳಾ ಭಜನಾ ಸಂಘ (ದ್ವಿ), ತುಮಕೂರು ಜಿಲ್ಲೆ ಕೋಟೆನಾಯಕನಹಳ್ಳಿಯ ಬನಶಂಕರಿ ಮಹಿಳಾ ಕಲಾ ತಂಡ (ತೃ), ಮೈಸೂರು ಜಿಲ್ಲೆ ಯಾಚೇನಹಳ್ಳಿಯ ಸಿದ್ದೇಶ್ವರ ಕಲಾತಂಡ (4ನೇ) ಹಾಗೂ ತುಮಕೂರು ಜಿಲ್ಲೆ ಹರಚನಹಳ್ಳಿಯ ಸಿದ್ದಶ್ರೀ ಮಹಿಳಾ ಭಜನಾ ತಂಡ (5ನೇ) ಬಹುಮಾನ ಗಳಿಸಿತು. ಐದು ಸಂಘಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.
ನಗರ ಮಹಿಳಾ ವಿಭಾಗ:
ಮೈಸೂರಿನ ಬೋಗಾದಿ 2ನೇ ಹಂತದ ಅಮೃತ ವಿದ್ಯಾಲಯ (ಪ್ರ), ಶಿವಮೊಗ್ಗ ತೀರ್ಥಹಳ್ಳಿಯ ಮಾರುತಿ ಭಜನಾ ಮಂಡಳಿ (ದ್ವಿ), ಮೈಸೂರಿನ ಬಿಇಎಂಎಲ್ ಬಡಾವಣೆ ರಾಜರಾಜೇಶ್ವರಿ ನಗರದ ರಾಜರಾಜೇಶ್ವರಿ ಅಕ್ಕನ ಬಳಗ (ತೃ), ಮಂಡಿಮೊಹಲ್ಲಾ ಕಮಟಗೇರಿಯ ಹಂಸಧ್ವನಿ ಭಜನಾ ಮಂಡಳಿ (4ನೇ) ಹಾಗೂ ನಂಜನಗೂಡಿನ ಶ್ರೀಕಂಠಪುರಿ ಬಡಾವಣೆಯ ಚಾಮುಂಡೇಶ್ವರಿ ಭಜನಾ ತಂಡ (5ನೇ). ಐದು ತಂಡಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.
ಪುರುಷರ ಏಕತಾರಿ ವಿಭಾಗ:
ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ಮಲ್ಲಮ್ಮನ ಬೆಳವಡಿಯ ಕಾಳಿಕಾದೇವಿ ಏಕತಾರಿ ತಂಡ (ಪ್ರ), ಹಾಸನ ಜಿಲ್ಲೆ ರಾಂಪುರದ ನಿರ್ವಾಣ ಸಿದ್ದೇಶ್ವರ ಭಜನಾ ಸಂಘ (ದ್ವಿ), ಚಿಕ್ಕಮಗಳೂರು ಜಿಲ್ಲೆ ಬೆಳವಾಡಿಯ ಬಸವೇಶ್ವರ ಭಜನಾ ಸಂಘ (ತೃ), ಹಾಸನ ಜಿಲ್ಲೆ ರಾಂಪುರದ ರೇವಣಸಿದ್ದೇಶ್ವರ ಭಜನಾ ಮಂಡಳಿ (4ನೇ) ಹಾಗೂ ದೊಡ್ಡಹೊನ್ನೇನಹಳ್ಳಿಯ ಲಕ್ಷ್ಮಿ ಭಜನಾ ತಂಡ (5ನೇ) ಬಹುಮಾನ ಪಡೆದವು.
ಮಹಿಳೆಯರ ಏಕತಾರಿ ವಿಭಾಗ:
ಹಾಸನ ಜಿಲ್ಲೆಯ ರೇವಣಸಿದ್ದೇಶ್ವರ ಭಜನಾ ಮಂಡಳಿ(ಪ್ರ), ಮಂಡ್ಯ ಜಿಲ್ಲೆ ಕಾಸರವಾಡಿಯ ಈಶ್ವರಮ್ಮ ಕಲಾ ಸಂಘ(ದ್ವಿ), ಪಾಂಡವಪುರ ತಾಲ್ಲೂಕು ಹಳೇಬೀಡು ಗ್ರಾಮದ ರೇವಣಸಿದ್ದೇಶ್ವರ ಭಜನಾ ಮಂಡಳಿ(ತೃ), ಮಂಡ್ಯ ಜಿಲ್ಲೆ ಹೊಸಳ್ಳಿ 3ನೇ ಅಡ್ಡ ರಸ್ತೆಯ ಜ್ಞಾನಾನಂದ ಕಲಾ ಬಳಗ (4ನೇ) ಹಾಗೂ ಕಾಸರವಾಡಿಯ ಶಾರದಾಂಬಾ ಕಲಾ ಬಳಗ (5ನೇ) ಬಹುಮಾನ ತಮ್ಮದಾಗಿಸಿಕೊಂಡವು.
ಹೊರ ರಾಜ್ಯಗಳ ಪುರುಷರ ವಿಭಾಗ:
ತಮಿಳುನಾಡಿನ ಈರೋಡ್ ಜಿಲ್ಲೆ ಕೋಡಿಪುರದ ಬಸವೇಶ್ವರ ಭಜನಾ ಸಂಘ (ಪ್ರ), ಈರೋಡ್ ಜಿಲ್ಲೆಯ ತಾಳವಾಡಿ ತಾಲ್ಲೂಕಿನ ಚಿಕ್ಕಳ್ಳಿಯ ಗುರುಮಲ್ಲೇಶ್ವರ ಭಜನಾ ಸಂಘ (ದ್ವಿ), ಈರೋಡ್ ಜಿಲ್ಲೆಯ ಮಲ್ಲನಗುಳಿ ಗ್ರಾಮದ ಗುರುಮಲ್ಲೇಶ್ವರ ಭಜನಾ ಸಂಘ(ತೃ).
ಹೊರ ರಾಜ್ಯಗಳ ಮಹಿಳೆಯರ ವಿಭಾಗ:
ಕೇರಳದ ಕಾಸರಗೂಡು ಜಿಲ್ಲೆಯ ಕುಂಬಳೆಯ ಮಹಾವಿಷ್ಣು ಮಹಿಳಾ ಭಜನಾ ಸಂಘದ (ಪ್ರ), ಕುಂಬಳೆಯ ಪಾರ್ಥಸಾರಥಿ ಮಹಿಳಾ ಭಜನಾ ಸಂಘ(ದ್ವಿ), ಕುಂಬಳೆಯ ಮಹಾವಿಷ್ಣು ಮಹಿಳಾ ಭಜನಾ ಸಂಘ(ತೃ)
ಮಕ್ಕಳ ವಿಭಾಗ:
ಮೈಸೂರಿನ ಬೋಗಾದಿ 2ನೇ ಹಂತದ ಅಮೃತ ವಿದ್ಯಾಲಯ ತಂಡ (ಪ್ರ), ಅಮೃತ ವಿದ್ಯಾಲಯದ ಜಯಮಾಲ ತಂಡ (ದ್ವಿ), ಧಾರವಾಡ ಜಿಲ್ಲೆಯ ಬಾಡದ ಕರಿಯಮ್ಮದೇವಿ ಭಜನಾ ಸಂಘ (ತೃ), ತುಮಕೂರು ಸಿದ್ಧಗಂಗಾ ಮಠದ ಶಿವಕುಮಾರಸ್ವಾಮಿ ಭಜನಾ ಸಂಘ (4ನೇ) ಹಾಗೂ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಚಿಕ್ಕಬಳ್ಳಿಕಟ್ಟೆಯ ಅಕ್ಕಮಹಾದೇವಿ ಮಕ್ಕಳ ಭಜನಾ ತಂಡ (5ನೇ) ಬಹುಮಾನ ಗಳಿಸಿದವು.
ವಿಜೇತ ತಂಡಗಳಿಗೆ ವಿಧಾನಪರಿಷತ್ ಸದಸ್ಯ ಕೆ.ವಿವೇಕಾನಂದ, ಜೆಡಿಎಸ್ ಮುಖಂಡರಾದ ಸಿ.ಎಸ್. ಪುಟ್ಟರಾಜು, ಅನ್ನದಾನಿ ಬಹುಮಾನ ವಿತರಿಸಿದರು.
ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷ ಪ್ರಭುಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಜಿ.ಡಿ. ಹರೀಶ್‌ಗೌಡ, ಮೈಮುಲ್ ಅಧ್ಯಕ್ಷ ಈರೇಗೌಡ, ಮಾಜಿ ಶಾಸಕ ಬಿ.ಹರ್ಷವರ್ಧನ್, ಬೆಂಗಳೂರಿನ ಸಮಾಜಸೇವಕ ಕೆ.ಪಿ. ಶಂಕರ್, ಮೈಮುಲ್ ನಿರ್ದೇಶಕರಾದ ಚಲುವರಾಜ್, ಸದಾನಂದ, ಎ.ಟಿ.ಸೋಮಶೇಖರ್,
ಓಂಪ್ರಕಾಶ್, ಉಮಾಶಂಕರ್, ಮಹೇಶ್, ಶೇಖರ್ ಪಾಲ್ಗೊಂಡಿದ್ದರು.
ಅನ್ನದಾನಿ ಅವರು ‘ದೇವ ಮಾದೇವ ಬಾರೋ’ ಹಾಗೂ ಪುಟ್ಟರಾಜು ಅವರು ‘ಹೃದಯ ಸಮುದ್ರ ಕಲಕಿ’ ಹಾಡಿ ನೆರೆದಿದ್ದವರನ್ನು ರಂಜಿಸಿದರು.
ಧ್ಯಾನದಿಂದ ಮನಸ್ಸಿನ ವಿಕಾಸ: ಹೂವಿನಹಡಗಲಿಯ ಗವಿಸಿದ್ಧೇಶ್ವರ ಶಾಖಾ ಮಠದ ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ ‘ದಕ್ಷಿಣದ ಬಹುದೊಡ್ಡ ಜಾತ್ರಾ ಮಹೋತ್ಸವ ಇದಾಗಿದ್ದು ಜ್ಞಾನದ ಜಾತ್ರೆಯೂ ಆಗಿದೆ. ಭಜನೆ ಎಂದರೆ ಧ್ಯಾನಾಸಕ್ತನಾಗುವುದು ದೈವದಲ್ಲಿ ತಲ್ಲೀನತೆ ಹೊಂದುವುದು ಹಾಗೂ ಮನಸ್ಸನ್ನು ವಿಕಾಸಗೊಳಿಸುವಂಥದು’ ಎಂದು ಹೇಳಿದರು. ‘ಗುರು ಕರುಣೆ ದೊರೆತರೆ ಎಲ್ಲ ಸಮೃದ್ಧಿಯೂ ದೊರೆಯುತ್ತದೆ. ಧ್ಯಾನದ ಸಂದರ್ಭದಲ್ಲಿ ಅಹಂಕಾರವನ್ನು ಮರೆತು ಮಮಕಾರವನ್ನು ಹೊಂದಬೇಕು. ಇಂತಹ ಸೇವಾ ಮನೋಭಾವವನ್ನು ಬೆಳೆಸುವ ಕೆಲಸವನ್ನು ಸುತ್ತೂರು ಮಠ ಮಾಡುತ್ತಿದೆ’ ಎಂದರು. ‘ಮಾಂಸಪಿಂಡ ಶರೀರವನ್ನು ಮಂತ್ರಪಿಂಡ ಶರೀರವನ್ನಾಗಿ ಮಾಡಿಕೊಳ್ಳಬೇಕು. ನಿರ್ಮಲತೆಗೆ ದೇವರ ಸ್ಮರಣೆ ಬೇಕಾಗುತ್ತದೆ’ ಎಂದು ತಿಳಿಸಿದರು.
ದೇಶಿಕೇಂದ್ರ ಶ್ರೀ ಸಿಇಒ ಆಗಿದ್ದರೆ’ ಶಾಸಕ ಜಿ.ಡಿ. ಹರೀಶ್‌ಗೌಡ ಮಾತನಾಡಿ ‘ಸುತ್ತೂರು ಮಠ ಆಧ್ಯಾತ್ಮಿಕ ಶೈಕ್ಷಣಿಕ ಆರೋಗ್ಯ ಸಮಾಜ ಸುಧಾರಣೆ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಅನನ್ಯವಾದ ಸೇವೆ ಮಾಡುತ್ತಲೇ ಬಂದಿದೆ. ಸಾವಿರಾರು ವರ್ಷಗಳ ಕಾಲ ಜೀವಂತವಾಗಿ ಇರುತ್ತದೆ. ನಮ್ಮಂತಹ ಭಕ್ತರಿಗೆ ಸೇವೆ ಮಾಡುತ್ತಿರುತ್ತದೆ’ ಎಂದು ಹೇಳಿದರು. ‘ಮಠವು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿದೆ. ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಶ್ರಮಿಸುತ್ತಲೇ ಇದೆ. ಸೇವೆ ದಾನ ಹಾಗೂ ಧರ್ಮದಲ್ಲಿ ಸದಾ ಮುಂದಿದೆ. ಇದನ್ನು ಮುನ್ನಡೆಸುತ್ತಿರುವ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಯಾವುದಾದರೂ ಕಂಪನಿಯ ಸಿಇಒ ಆಗಿದ್ದರೆ ಅದರ ಆಸ್ತಿ ಮೌಲ್ಯ ಲಕ್ಷಾಂತರ ಕೋಟಿ ರೂಪಾಯಿ ಆಗಿರುತ್ತಿತ್ತು. ದೇಶದ ಮೊದಲ ದೊಡ್ಡ ಕಂಪನಿ ಎನಿಸುತ್ತಿತ್ತು’ ಎಂದು ಶ್ಲಾಘಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.