ADVERTISEMENT

ಭಗವಾನ್‌ ಕೃತಿಯನ್ನು ಆಯ್ಕೆಪಟ್ಟಿಗೆ ಪರಿಗಣಿಸಲು ಮಹೇಶ್‌ಚಂದ್ರಗುರು ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 19:06 IST
Last Updated 27 ಜನವರಿ 2021, 19:06 IST
ಮಹೇಶ್‌ಚಂದ್ರಗುರು
ಮಹೇಶ್‌ಚಂದ್ರಗುರು   

ಮೈಸೂರು: ‘ಸಾರ್ವಜನಿಕ ಗ್ರಂಥಾಲಯ ಇಲಾಖೆಯ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷ ದೊಡ್ಡರಂಗೇಗೌಡ ಅವರು ಜೂನಿಯರ್ ಭೈರಪ್ಪ ಹಾಗೂ ಜೂನಿಯರ್ ಚಿದಾನಂದಮೂರ್ತಿಅವರಂತೆ ಸಂಘ ಪರಿವಾರಕ್ಕೆ ನಿಷ್ಠರಾಗಿದ್ದಾರೆ.ಹೀಗಾಗಿಯೇ,ಕೆ.ಎಸ್.ಭಗವಾನ್ ಅವರ ‘ರಾಮಮಂದಿರ ಏಕೆ ಬೇಡ’ ಕೃತಿಯನ್ನು ಆಯ್ಕೆಪಟ್ಟಿಯಿಂದ ಹೊರಗಿಟ್ಟಿದ್ದಾರೆ’ ಎಂದುನಿವೃತ್ತ ಪ್ರಾಧ್ಯಾಪಕ ಮಹೇಶ್‌ಚಂದ್ರಗುರು ತಿಳಿಸಿದರು.

‘ಪುರೋಹಿತಶಾಹಿ ಮತ್ತು ಬಂಡವಾಳಶಾಹಿ ವ್ಯವಸ್ಥೆಗೆ ನಿಷ್ಠವಾಗಿರುವ ಕೇಂದ್ರ ಸರ್ಕಾರದಲ್ಲೇ ಇರುವವರು ಹೊರಗಿನ ಪಟ್ಟಭದ್ರ ಹಿತಾಸಕ್ತಿಗಳನ್ನು ದುರ್ಬಳಕೆ ಮಾಡಿಕೊಂಡು, ಪ್ರಜಾಸತ್ತಾತ್ಮಕವಾದ ರೈತ ಚಳವಳಿಯನ್ನು ಹತ್ತಿಕ್ಕುತ್ತಿದ್ದಾರೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಸಾಹಿತಿ ಅರವಿಂದ ಮಾಲಗತ್ತಿ ಮಾತನಾಡಿ, ‘ದೊಡ್ಡರಂಗೇಗೌಡ ಅವರ ಈ ಕ್ರಮ ಸರಸ್ವತಿಯ ಮುಖಕ್ಕೆ ಮಸಿ ಬಳಿದಂತಾಗಿದೆ. ಗ್ರಂಥಾಲಯದಲ್ಲಿ ಮನುಸ್ಮೃತಿ, ಬ್ರಹ್ಮಸೂತ್ರ, ಭಗವದ್ಗೀತೆ ಸೇರಿದಂತೆ ಎಲ್ಲ ಪುಸ್ತಕಗಳೂ ಇವೆ. ಯಾವ ಜ್ಞಾನವೂ ಗ್ರಂಥಾಲಯಕ್ಕೆ ವರ್ಜ್ಯ ಅಲ್ಲ’ ಎಂದರು.

ADVERTISEMENT

‘ಭಗವಾನ್ ಅವರ ಪುಸ್ತಕವನ್ನು ಸರ್ಕಾರ ನಿಷೇಧಿಸಿಲ್ಲ. ಇದು ಗ್ರಂಥಾಲಯದಲ್ಲಿಡಲು ಯೋಗ್ಯವಲ್ಲದ ಪುಸ್ತಕ ಎಂದು ಯಾರೂ ವಿಮರ್ಶೆ ಬರೆದಿಲ್ಲ. ಇನ್ನಾದರೂ ತಮ್ಮ ನಿರ್ಧಾರವನ್ನು ಪರಿಷ್ಕರಿಸಬೇಕು. ಆಯ್ಕೆಪಟ್ಟಿಗೆ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

ಹಿಂದಿ ಕೇವಲ ಸಂವಹನ ಭಾಷೆಯೇ ಹೊರತು ರಾಷ್ಟ್ರಭಾಷೆ ಅಲ್ಲ. ಒಂದೇ ಭಾಷೆ, ಸಂಸ್ಕೃತಿ, ಧರ್ಮ ಎಂಬ ಪರಿಕಲ್ಪನೆಯ ಆಧಾರದ ಮೇಲೆ ಏಕತೆಯನ್ನು ಸಾಧಿಸಿದರೆ ಭಾರತ ಭಾರತವಾಗಿ ಉಳಿಯುವುದಿಲ್ಲ. ಇಂತಹ ಸೂಕ್ಷ್ಮ ವಿಚಾರವನ್ನು ಪರಿಗಣಿಸಿ ದೊಡ್ಡರಂಗೇಗೌಡ ಹೇಳಿಕೆ ನೀಡಬೇಕಿತ್ತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.