
ಜಯಪುರ ಗ್ರಾಮದ ಜೇಡಿಕಟ್ಟೆ ಮಹದೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿ ಬಿಲ್ಲಯ್ಯ ಸ್ವಾಮಿ ದೇಗುಲ ಶುಕ್ರವಾರ ಉದ್ಘಾಟನೆಗೊಂಡಿತು
ಜಯಪುರ: ಗ್ರಾಮದ ಜೇಡಿಕಟ್ಟೆ ಮಹದೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿನ ಬಿಲ್ಲಯ್ಯ ಸ್ವಾಮಿ ದೇಗುಲ ಶುಕ್ರವಾರ ಉದ್ಘಾಟನೆಗೊಂಡಿತು.
25 ವರ್ಷಗಳಿಂದ ಪಾಳು ಬಿದ್ದಿದ್ದ ದೇಗುಲಕ್ಕೆ ಮೈಮುಲ್ ಮಾಜಿ ಅಧ್ಯಕ್ಷ, ಜೇಡಿಕಟ್ಟೆ ಮಹದೇಶ್ವರ ಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ಮಾವಿನಹಳ್ಳಿ ಎಸ್.ಸಿದ್ದೇಗೌಡ ಅವರು ಸ್ವಂತ ಹಣ ಖರ್ಚು ಮಾಡಿ ದುರಸ್ತಿಪಡಿಸಿದ್ದರು.
ಬಿಲ್ಲಯ್ಯ ಸ್ವಾಮಿ ವಿಗ್ರಹವನ್ನು ತಮಿಳುನಾಡಿನ ಶಿಲ್ಪಿಗಳ ಮೂಲಕ ಕೆತ್ತನೆ ಮಾಡಿಸಿ, ದೇವಾಲಯ ಮತ್ತು ಗೋಪುರಕ್ಕೆ ಬಣ್ಣ ಮಾಡಿಸಿದ್ದರು.
ಬರಡನಪುರ ಗಣೇಶ್ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಹೋಮ, ಹವನಗಳು ಜರುಗಿದವು. ಗರ್ಭಗುಡಿಯಲ್ಲಿನ ಬಿಲ್ಲಯ್ಯ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಮಹಾಮಂಗಳಾರತಿ ನೆರವೇರಿಸುವ ಮೂಲಕ ನೆರೆದಿದ್ದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ದೇವಾಲಯ ಸಮಿತಿ ಸದಸ್ಯರು, ಜಯಪುರ, ಮಾವಿನಹಳ್ಳಿ ಮತ್ತು ಬರಡನಪುರ ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.